ನ್ಯೂಸ್

ಮಿಂತ್ರಾ ಕಂಪನಿಗೆ 1.08 ಕೋಟಿ ವಂಚನೆ

ಬೆಂಗಳೂರು: ಇ-ಕಾಮರ್ಸ್ ಮಿಂತ್ರಾ ಡಿಸೈನ್ಸ್ ಪ್ರೈ.ಲಿ. ಕಂಪನಿಗೆ ನಕಲಿ ಗ್ರಾಹಕರ ಹೆಸರಿನಲ್ಲಿ 1.08 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮಿಂತ್ರಾ ಡಿಸೈನ್ಸ್ ಪ್ರೈ.ಲಿ.ನ ಅಧಿಕಾರಿ ಎಂ.ಎಸ್.ಸರ್ದರ್, ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಮಿಂತ್ರಾ ವೆಬ್‌ಸೈಟ್‌ನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಬುಕ್ಕಿಂಗ್ ಮಾಡಿ ಆನ್‌ಲೈನ್ ಅಥವಾ ನಗದು ಕೊಟ್ಟು ವಸ್ತುಗಳನ್ನು ಗ್ರಾಹಕರು ಖರೀದಿಸುತ್ತಿದ್ದರು. ಈ ಪೈಕಿ ಕೆಲವರು ನಮಗೆ ಬಂದ ಸರಕು ನಕಲಿ ಅಥವಾ ಡೆಲಿವರಿ ಆಗಿಲ್ಲ ಎಂದು ಆರ್ಡರ್ ವಾಪಸ್ ಕಳುಹಿಸಿ ಹಣ ವಾಪಸ್ ಪಡೆಯುತ್ತಿದ್ದರು.

ಈ ರೀತಿ ವಾಪಸ್ ಬಂದ ಸರಕು ನಕಲಿ ಅಥವಾ ಕಡಿಮೆ ಮೌಲ್ಯದ ವಸ್ತುಗಳು ಆಗಿದ್ದವು. ಇದೇ ರೀತಿಯಾಗಿ 5,529 ವಸ್ತುಗಳನ್ನು ವಾಪಸ್ ಕಳುಹಿಸಿ ಮೋಸ ಮಾಡಿದ್ದು, ಅಂದಾಜು 1.08 ಕೋಟಿ ರೂ. ಮೋಸವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.