- ಟೈಟಲ್, ಟೀಸರ್ ಮತ್ತು ಟ್ರೇಲರ್ನಿಂದಲೇ....
- ಟ್ರೆಂಡಿಂಗ್ನಲ್ಲಿ ಮೂರು ಮೆಗಾ ಪ್ರಾಜೆಕ್ಟ್ಗಳು
- ದುಪ್ಪಟ್ಟಾಯ್ತು ಸಿನಿಪ್ರಿಯರ ಕುತೂಹಲ
ಬೆಂಗಳೂರು: ಪ್ರಸ್ತುತ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹಲವಾರು ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗಲು ಎದುರುನೋಡುತ್ತಿದ್ದು, ಟೈಟಲ್, ಟೀಸರ್ ಮತ್ತು ಟ್ರೇಲರ್ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿವೆ. ಈ ಪೈಕಿ ಮೂರು ಅಗ್ರ ಬಿಗ್ ಬಜೆಟ್ ಚಿತ್ರಗಳು ಮೇಕಿಂಗ್ನಿಂದ ಹಿಡಿದು, ಎಲ್ಲ ಆಯಾಮಗಳಲ್ಲಿಯೂ ಜೋರಾಗಿ ಸದ್ದು ಮಾಡುತ್ತಿರುವುದು ಗಮನಾರ್ಹ.
ಮೂರು ಮೆಗಾ ಪ್ರಾಜೆಕ್ಟ್ಗಳು ಈಗ ಟ್ರೆಂಡಿಂಗ್‌ನಲ್ಲಿವೆ. ಈ ಮೂರು ಚಿತ್ರಗಳು ಬಜೆಟ್ ವಿಷಯದಲ್ಲಿ ಮಾತ್ರವಲ್ಲ, ತಾರಾಗಣ, ನಿರ್ದೇಶಕರು ಮತ್ತು ಕಥೆಗಳ ಆಯ್ಕೆ ಸೇರಿದಂತೆ ಎಲ್ಲವನ್ನೂ ದೊಡ್ಡದಾಗಿಯೇ ಮಾಡುತ್ತಿದೆ. ಈ ಪೈಕಿ ಮೊದಲ ಸಿನಿಮಾ 'ರಾಮಾಯಣ'. ಇದರ ಬಜೆಟ್ ಒಟ್ಟು 4,000 ಕೋಟಿ ರೂ.! ಇದು ಒಂದು ಬೃಹತ್ ಮಲ್ಟಿಸ್ಟಾರರ್ ಯೋಜನೆ ಆಗಿದ್ದು, ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತಿ ದೊಡ್ಡ ಬಜೆಟ್ ಪ್ಯಾನ್ ವರ್ಲ್ಡ್ ಚಿತ್ರ ಇದಾಗಿದೆ. ಮುಖ್ಯಭೂಮಿಕೆಯಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೂರು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ಹುಬ್ಬೇರಿಸುವ ಸಂಗತಿಯೇ.
ಎರಡನೆಯದು ವಾರಣಾಸಿ. ಭಾರತದ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಹೊಸ ಮೇರುಕೃತಿ. ಸದಾ ತಮ್ಮ ನವೀನತೆ ಮತ್ತು ಉನ್ನತ ಮಟ್ಟದ ಗ್ರಾಫಿಕ್ಸ್, ವಿಶ್ಯೂವಲ್ಸ್ ಹಾಗೂ ಸಿನಿಮ್ಯಾಟಿಕ್ ಅನುಭವವನ್ನು ತಮ್ಮ ಚಿತ್ರದಲ್ಲಿ ನೀಡುವ ರಾಜಮೌಳಿ, ಈ ಚಿತ್ರವನ್ನು ಸುಮಾರು 1,100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಇದು ಭಾರತದ ಎರಡನೇ ಅತಿದೊಡ್ಡ ಬಜೆಟ್ ಚಿತ್ರವಾಗಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಮೂರನೆಯದು ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬೊದಲ್ಲಿ ಮೂಡಿಬರುತ್ತಿರುವ ಚಿತ್ರ. ಇದರ ಒಟ್ಟು ಬಜೆಟ್ 800 ಕೋಟಿ ರೂ. ಎಂದು ಹೇಳಲಾಗಿದೆ. ಈಗಾಗಲೇ ಚಿತ್ರಕ್ಕೆ ಭಾರೀ ಹೈಪ್ ಸಿಕ್ಕಿದ್ದು, ಅಲ್ಲು ಅರ್ಜುನ್ ಹಾಗೂ ಅಟ್ಲೀ ಜೋಡಿ ಹೇಗೆ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆಗಳು ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿದೆ,(ಏಜೆನ್ಸೀಸ್).