ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಕೃಷ್ಣಪ್ಪ ಅವರೊಂದಿಗೆ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ರೈತರ ಆಸ್ತಿ ದಾಖಲಾತಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು. ದೀಪಕ್, ಆದರ್ಶ್, ಹೂವಯ್ಯ, ಮೋಹಿತ್ ಇದ್ದರು.  
ನ್ಯೂಸ್

ಭೂದಾಖಲೆ, ಸಿ ಆ್ಯಂಡ್ ಡಿ ಜಾಗದ ಸಮಸ್ಯೆ ಚರ್ಚೆ

ವಸಂತಕುಮಾರ್ ಬಿ
ಸೋಮವಾರಪೇಟೆ: ರೈತರ ಕೃಷಿ ಭೂಮಿಯ ದಾಖಲಾತಿ, ಸಿ ಆ್ಯಂಡ್ ಡಿ ಜಾಗದ ಸಮಸ್ಯೆ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯವೈಖರಿ ಕುರಿತು ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಕೃಷ್ಣಮೂರ್ತಿ ಅವರನ್ನು ಸೋಮವಾರ ಕಚೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು.
ಸಮಿತಿ ಅಧ್ಯಕ್ಷ ಕೊತ್ನಳ್ಳಿ ಅರುಣ್‌ಕುಮಾರ್ ಮಾತನಾಡಿ, ರೈತರ ಸಿ ಆ್ಯಂಡ್ ಡಿ ಭೂಮಿಯನ್ನು ಜಂಟಿ ಸರ್ವೇ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸೆಟಲ್‌ಮೆಂಟ್ ಸರ್ವೇ ಮಾಡಿ ಗ್ರಾಮದ ಗಡಿ ಗುರುತು ಮಾಡಬೇಕು. 94, 94ಸಿಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂಬ ಬೇಡಿಕೆಗಳ ಕುರಿತು ಹತ್ತು ತಿಂಗಳ ಹಿಂದೆ ಅರ್ಜಿ ನೀಡಲಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಗತಿಯ ಬಗ್ಗೆ ಮಾಹಿತಿ ನೀಡುವಂತೆ ತಹಸೀಲ್ದಾರ್ ಅವರನ್ನು ಕೇಳಿದರು.

ರೈತರು ತಾಲೂಕು ಕಚೇರಿಗೆ ಬಂದಾಗ, ಅವರಿಗೆ ಸೂಕ್ತ ಸಮಯದಲ್ಲಿ ಕೆಲಸ ಮಾಡಿಕೊಡುವಂತೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಸಮಸ್ಯೆಗಳಿದ್ದರೆ ರೈತರು ನನ್ನನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆಯಂತೆ ರೈತರ ಜಾಗದ ಪೋಡಿ ದುರಸ್ತಿಗೆ ಸಂಬಂಧಪಟ್ಟಂತೆ ಇದ್ದಂತ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಜಾಗದ ದುರಸ್ತಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಂದು ಸಾವಿರ ಅರ್ಜಿಗಳ ದಾಖಲಾತಿಗಳನ್ನು ಕ್ರೋಡೀಕರಿಸಿ, ಮುಂದಿನ ಕ್ರಮಕ್ಕಾಗಿ ಎಡಿಎಲ್‌ಆರ್ ಅವರಿಗೆ ಕಳುಹಿಸಲಾಗಿದೆ. ಈಗಾಗಲೇ 350 ಅರ್ಜಿಗಳಿಗೆ ಆರ್‌ಟಿಸಿ ಆಗಿದೆ. 900 ಅರ್ಜಿಗಳನ್ನು ಪರಿಶೀಲನೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಕಳುಹಿಸಲಾಗಿದೆ. ಮುಂದಿನ ಡಿಸೆಂಬರ್ ಅಂತ್ಯದೊಳಗೆ ದುರಸ್ತಿಗೆ ಸಂಬಂಧಪಟ್ಟ ಬಹುತೇಕ ಅರ್ಜಿಗಳಿಗೆ ಆರ್‌ಟಿಸಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಮೋಹಿತ್ ತಿಮ್ಮಯ್ಯ, ಜಿ.ಎಂ.ಹೂವಯ್ಯ, ಸಂದೀಪ್ ಕೂಗೂರು, ಸುದೀನ್, ಶ್ರೀನಿಧಿ, ವಸಂತ್ ಮತ್ತಿತರರು ಇದ್ದರು.