ಟಿ.ಎಂ.ಹೊಸೂರು ಗ್ರಾಮದಲ್ಲಿ ಸೋಮವಾರ ನೂತನ ಸಂಜೀವಿನಿ ಭವನವನ್ನು ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷ ಶಿವಕುಮಾರ, ತಾಪಂ ಇಒ ವೇಣು, ಸಿಡಿಪಿಒ ಸಕಲೇಶ್ವರ ಇತರರಿದ್ದರು. 
ನ್ಯೂಸ್

ಅಧಿಕ ಬಡ್ಡಿಗೆ ಸಾಲ ಮಾಡಿ, ಸಮಸ್ಯೆಗೆ ಸಿಲುಕದಿರಿ

ಬಾಲಮುರಳಿಕೃಷ್ಣ
ಶ್ರೀರಂಗಪಟ್ಟಣ: ಗ್ರಾಮೀಣ ಭಾಗದಲ್ಲಿ ಸ್ತ್ರೀಯರು ಸಂಘಟಿತರಾಗಿ ಸ್ವಾವಲಂಬಿ ಬದುಕುಗಳನ್ನು ರೂಪಿಸಿಕೊಂಡು ಜೀವಿಸಬೇಕೇ ಹೊರತು ಮೈಕ್ರೋ ಫೈನಾನ್ಸ್‌ಗಳಲ್ಲಿ ಅಧಿಕ ಬಡ್ಡಿಗೆ ಸಾಲ ಮಾಡಿ ವಿನಾಕಾರಣ ಸಮಸ್ಯೆಗಳಿಗೆ ಸಿಲುಕದಿರಿ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ತಾಲೂಕಿನ ಟಿ.ಎಂ.ಹೊಸೂರು ಗ್ರಾಮದಲ್ಲಿ ನರೇಗಾ, 15ನೇ ಹಣಕಾಸು ಯೋಜನೆ ಮತ್ತು ಶಾಸಕರ ಅನುದಾನದಡಿ ನಿರ್ಮಾಣಗೊಂಡಿದ್ದ ನೂತನ ಸಂಜೀವಿನಿ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕೆಲವು ವರ್ಷಗಳಿಂದ ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಜನರು ಖಾಸಗಿ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್‌ಗಳಲ್ಲಿ ಅವರ ಯಾವುದೇ ಷರತ್ತುಗಳು, ನಿಯಮಗಳನ್ನು ತಿಳಿಯದೆ ಯಾವುದೋ ಆಡಂಬರದ ಆಸೆಗೆ ಬಲಿಯಾಗಿ ಅಧಿಕ ಬಡ್ಡಿಗೆ ಸಾಲ ಪಡೆದು ಬಳಿಕ ಅದನ್ನು ತೀರಿಸಲಾಗದೆ ಮನೆ, ಒಡವೆಗಳ ಹರಾಜು ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ತುತ್ತಾಗುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ನೀವು ಮಾಡುವ ಸಾಲ ನಿಮ್ಮ ಬದುಕಿಗೆ ನೆರಳಾಗಬೇಕೆ ಹೊರತು ಕೊರಳಿಗೆ ಉರಳಾಗಬಾರದು. ಸಂಜೀವನಿ ಭವನಗಳಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ಸ್ವಾವಲಂಬಿ ಬದುಕಿಗೆ ಬೇಕಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಂಡು ಹೋಗುವ ಭವನವಾಗಲಿ ಎಂದು ಹಾರೈಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಕ್ಕನಹಳ್ಳಿ ಶಿವಮೂರ್ತಿ, ಉಪಾಧ್ಯಕ್ಷ ಶಿವಕುಮಾರ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವು, ಮಾಜಿ ಅಧ್ಯಕ್ಷೆ ಸರೋಜಮ್ಮ, ತಾಪಂ ಇಒ ವೇಣು, ಸಿಡಿಪಿಒ ಸಕಲೇಶ್ವರ, ಜಿಪಂ ಎಇಇ ಮಂಜುನಾಥ್, ಎನ್‌ಆರ್‌ಎಲ್‌ಎಮ್ ಅಧಿಕಾರಿ ನಂಜುಂಡಯ್ಯ, ಪಿಡಿಒ ಶ್ರೀನಿವಾಸ್, ಮುಖಂಡರಾದ ಪದ್ಮನಾಭ್, ಬಸವರಾಜು, ಎಚ್‌ಎಮ್‌ಟಿ ದೇವರಾಜು, ಪ್ರಸನ್ನ, ಗ್ರಾ.ಪಂ.ಹಾಗೂ ಮಹಿಳಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.