ಬಾಗಲಕೋಟೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ರಾಜ್ಯ ಸರ್ಕಾರ ಹೊರಡಿಸಿರುವ ಕಬ್ಬು ರಿಕವರಿ ಆಧಾರಿತ ದರ ನೀಡುವುದಾಗಿ ಎಲ್ಲ ಕಾರ್ಖಾನೆಗಳ ಪರವಾಗಿ ಭಾನುವಾರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಕಾರ್ಖಾನೆ ಮಾಲೀಕರಾದ ಎಸ್.ಆರ್. ಪಾಟೀಲ, ಜಗದೀಶ ಗುಡಗುಂಟಿ, ಸಂಗಮೇಶ ನಿರಾಣಿ ಅವರು ಪತ್ರ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಇದ್ದರು. 
ನ್ಯೂಸ್

ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶಕ್ಕೆ ಬದ್ಧ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮಾಲೀಕರಿಂದ ಪತ್ರ ರೈತರಿಗೆ
  • ಕಬ್ಬು ಸಾಗಾಣಿಕೆದಾರರಿಗೆ ಸೂಕ್ತ ಭದ್ರತೆಗೆ ಮನವಿ
  • ಕಾರ್ಖಾನೆ ಪ್ರಾರಂಭಿಸಲು ಜಿಲ್ಲಾಡಳಿತ ಕ್ರಮವಹಿಸಿ
ಬಾಗಲಕೋಟೆ: ಪ್ರಸಕ್ತ ಸಾಲಿನ ಹಂಗಾಮಿಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದನ್ವಯ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ನಿಗದಿಪಡಿಸಿದ ದರ ನೀಡಲು ಬದ್ಧವಿರುವುದಾಗಿ ತಿಳಿಸಿ, ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಭಾನುವಾರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಪರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ರೈತರ ಹಿತದೃಷ್ಟಿಯಿಂದ ಸರ್ಕಾರದ ಆದೇಶದ ಮಾನ್ಯತೆಗೆ ಒಳಪಟ್ಟು ಕಾರ್ಖಾನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಕಾರ್ಖಾನೆ ಪ್ರಾರಂಭಿಸಲು ಜಿಲ್ಲಾಡಳಿತ ಕ್ರಮವಹಿಸಿ, ಕಬ್ಬು ಪೂರೈಸುವ ರೈತರಿಗೆ ಹಾಗೂ ಕಬ್ಬು ಸಾಗಾಣಿಕೆದಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ಭಾನುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳು ಮಾಲೀಕರು ಹಾಗೂ ಪ್ರತಿನಿಧಿಗಳು ಸರ್ಕಾರದ ತೀರ್ಮಾನದಂತೆ ದರ ನೀಡಲು ಒಪ್ಪಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ, ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ಇಳುವರಿ ಆಧಾರದ ಮೇಲೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಹೊತುಪಡಿಸಿ ಇಳುವರಿ ಶೇ. 10.25ರಷ್ಟು ಇದ್ದಲ್ಲಿ 3200 ರೂ. ಇಳುವರಿ ಶೇ. 11.25ರಷ್ಟು ಇದ್ದಲ್ಲಿ 3300 ರೂ. ಗಳನ್ನು ಸರ್ಕಾರ ನಿಗದಿಪಡಿಸಿದೆ. ಸರ್ಕಾರ ನಿಗದಿಪಡಿಸಿದ ದರಕ್ಕೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಒಪ್ಪಿಗೆ ಸೂಚಿಸಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ರೈತರು ಸರ್ಕಾರ ಹೊರಡಿಸಿದ ಆದೇಶ ಪಾಲಿಸುವ ಮೂಲಕ ಕಾರ್ಖಾನೆ ಪ್ರಾರಂಭಿಸಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಶೇ. 10.25- 9.5 ರಷ್ಟು ಇಳುವರಿ ಪ್ರಮಾಣ ನಡುವೆ ಪ್ರತಿ ಶೇ. 0.1 ರಷ್ಟು ಕಡಿಮೆ ಸಕ್ಕರೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ 3.46 ರೂ. ಗಳ ಮೊತ್ತವನ್ನು ಪ್ರತಿ ಕ್ವಿಂಟಲ್‌ಗೆ ಪರಿಗಣಿಸಲಾಗುತ್ತದೆ. ಶೇ. 11.25- 1.25ರಷ್ಟು ಸಕ್ಕರೆ ಇಳುವರಿ ಪ್ರಮಾಣದ ನಡುವೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರತಿ 0.1% ರಷ್ಟು ಕಡಿಮೆ ಸಕ್ಕರೆ ಇಳುವರಿ ಅನುಪಾತಕ್ಕೆ ಅನುಗುಣವಾಗಿ 100 ರೂ. ಗಳ ಮೊತ್ತವನ್ನು ಪ್ರತಿ ಕ್ವಿಂಟಲ್‌ಗೆ ಪರಿಗಣಿಸಲಾಗಿದೆ. ಕಾರ್ಖಾನೆಗಳು ಪ್ರಥಮ ಕಂತಿನ ಮೊತ್ತವನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನಿಗದಿಪಡಿಸಿರುವಂತೆ 14 ದಿನಗಳಲ್ಲಿ ಹಣವನ್ನು ರೈತರಿಗೆ ಸಂದಾಯ ಮಾಡತಕ್ಕದ್ದೆಂದು ಆದೇಶದಲ್ಲಿ ತಿಳಿಸಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಸರ್ಕಾರದ ಆದೇಶಕ್ಕೆ ಒಪ್ಪಿಗೆ ಸೂಚಿಸಿ ಸಕ್ಕರೆ ಕಾರ್ಖಾನೆಗಳು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಕಬ್ಬು ಪೂರೈಸುವ ರೈತರಿಗೆ ಹಾಗೂ ಕಬ್ಬು ಸಾಗಾಣಿಕೆದಾರರಿಗೆ ಸೂಕ್ತ ರಕ್ಷಣೆ ಒದಗಿಸಲು ತಿಳಿಸಿದ್ದು, ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಭದ್ರತೆಯನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರಿಂದ ನಡೆದ ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮವಹಿಸಲಾಗಿದೆ. ಮುಂದೆಯು ಘಟನೆಗಳು ನಡೆಯದಂತೆ ಕ್ರಮವಹಿಸಲಾಗುವುದೆಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸುವ ವೇಳೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಪರವಾಗಿ ಮಾಜಿ ಸಚಿವ ಎಸ್.ಆರ್. ಪಾಟೀಲ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ನಿರಾಣಿ ಗ್ರುಪ್‌ನ ಸಂಗಮೇಶ ನಿರಾಣಿ ಸೇರಿ ಇತರೆ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.
ಸಕ್ಕರೆ ಕಾರ್ಖಾನೆಗಳು ನೀಡಿರುವ ದರದ ವಿವರ
ಬೀಳಗಿ ಶುಗರ್ಸ್‌ ಯುನಿಟ್-2 (ಇಳುವರಿ ಶೇ. 11.02) ಮೊದಲ ಕಂತು 3177 ರೂ, 2ನೇ ಕಂತು 3277 ರೂ, ನಿರಾಣಿ ಶುಗರ್ಸ್‌ ಯುನಿಟ್-3 (ಶೇ. 11) 1ನೇ ಕಂತು 3175 ರೂ, 2ನೇ ಕಂತು 3275 ರೂ, ನಿರಾಣಿ ಶುಗರ್ಸ್‌ ಯುನಿಟ್-5 (ಶೇ. 10.98) 1ನೇ ಕಂತು 3173 ರೂ. 2ನೇ ಕಂತು 3273 ರೂ., ನಿರಾಣಿ ಶುಗರ್ಸ್‌ ಯುನಿಟ್-2 (ಶೇ. 10.92) 1ನೇ ಕಂತು 3167 ರೂ, 2ನೇ ಕಂತು 3267 ರೂ, ಗೋದಾವರಿ ಬೈಯೋರಿಪೈನರಿ (ಶೇ. 10.91) 1ನೇ ಕಂತು 3166 ರೂ, 2ನೇ ಕಂತು 3266 ರೂ, ನಿರಾಣಿ ಶುಗರ್ಸ್‌ ಯುನಿಟ್-1 (ಶೇ. 10.09) 1ನೇ ಕಂತು 3165 ರೂ, 2ನೇ ಕಂತು 3265 ರೂ, ನಿರಾಣಿ ಶುಗರ್ಸ್‌ ಯುನಿಟ್-4 (ಶೇ. 10.88) 1ನೇ ಕಂತು 3163 ರೂ, 2ನೇ ಕಂತು 3263 ರೂ, ಜೆಮ್ ಶುಗರ್ಸ್‌ (ಶೇ. 10.85) 1ನೇ ಕಂತು 3160 ರೂ, 2ನೇ ಕಂತು 3260 ರೂ, ಜಮಖಂಡಿ ಶುಗರ್ಸ್‌ (ಶೇ. 10.78) 1ನೇ ಕಂತು 3153 ರೂ, 2ನೇ ಕಂತು 3253 ರೂ, ಶ್ರೀ ಪ್ರಭುಲಿಂಗೇಶ್ವರ ಶುಗರ್ಸ್‌ ಕೆಮಿಕಲ್ ಲಿಮಿಟೆಡ್ (ಶೇ. 10.74) 1ನೇ ಕಂತು 3149 ರೂ, 2ನೇ ಕಂತು 3249 ರೂ, ಮೆಲ್‌ಬ್ರೋ ಶುಗರ್ಸ್‌ (ಶೇ. 10.57) 1ನೇ ಕಂತು 3132 ರೂ, 2ನೇ ಕಂತು 3232 ರೂ, ಬೀಳಗಿ ಶುಗರ್ಸ್‌ (ಶೇ. 10.42) 1ನೇ ಕಂತು 3117 ರೂ, 2ನೇ ಕಂತು 3217 ರೂ.