ಕ್ರಿಕೆಟ್ ಸ್ಟೇಡಿಯಂಗೆ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯೆ ರಿಚಾ ಘೋಷ್ ಹೆಸರು
ಕೋಲ್ಕತ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯೆ ರಿಚಾ ಘೋಷ್ ಅವರ ಹೆಸರಿನಲ್ಲಿ ಡಾರ್ಜಿಲಿಂಗ್‌ನಲ್ಲಿ ನೂತನ ಕ್ರಿಕೆಟ್ ಮೈದಾನ ನಿರ್ಮಿಸುವುದಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಸಿಲಿಗುರಿಯ ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾಗೆ, ಬಂಗಾಳ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಮತಾ ಭರವಸೆ ನೀಡಿದ್ದಾರೆ.
ರಿಚಾ ಅವರ ಸಾಧನೆ ಬಂಗಾಳದ ಮುಂದಿನ ಪೀಳಿಗೆಯೂ ಸ್ಮರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಹಿಳಾ ಕ್ರಿಕೆಟರ್ ಹೆಸರಿನಲ್ಲಿ ನಿರ್ಮಾಣವಾಗುವ ದೇಶದ ಮೊದಲ ಕ್ರಿಕೆಟ್ ಸ್ಟೇಡಿಯಂ ಇದಾಗಿರಲಿದೆ. ಪಶ್ಚಿಮ ಬಂಗಾಳ ಸರ್ಕಾರ 22 ವರ್ಷದ ರಿಚಾಗೆ ಈಗಾಗಲೆ ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿ ಹಾಗೂ ಚಿನ್ನದ ಹಾರವನ್ನು ನೀಡಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯ ನೇಮಕಾತಿ ಪತ್ರವನ್ನೂ ಹಸ್ತಾಂತರಿಸಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ‘ರಿಚಾ ಭಾರತ ಮಹಿಳಾ ತಂಡದ ಭವಿಷ್ಯದ ನಾಯಕಿ’ ಎಂದು ಶ್ಲಾಸಿದ್ದಾರೆ.