ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದ ಪೂರ್ಣ ಕುಂಭಸ್ವಾಗತದ ವೇಳೆ ನೀಡಿದ ಪ್ರಸಾದವನ್ನು ಅಚ್ಚರಿಯಿಂದ ವೀಕ್ಷಿಸಿದ ಉಪರಾಷ್ಟ್ರಪತಿಗಳು ಕುತೂಹಲದಿಂದ ವೀಕ್ಷಿಸಿದ ರಾಜ್ಯಪಾಲ
ಮೇಲುಕೋಟೆ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾನುವಾರ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದಾಗ ದೇಗುಲದ ವತಿಯಿಂದ ವಿಶೇಷ ಪ್ರಸಾದ ನೀಡಲಾಯಿತು. ಆದರೆ ಈ ಪ್ರಸಾದ ಬಳಸುವುದು ಹೇಗೆ? ಎಂದು ಉಪರಾಷ್ಟ್ರತಿಗಳು ಒಂದು ಕ್ಷಣ ಗೊಂದಲಕ್ಕೊಳಗಾದರು. ಇದೇ ವೇಳೆ ರಾಜ್ಯಪಾಲ ತಾವರ್‌ಚಂದ್ ಗೆಹಲೋತ್ ಅವರಿಗೂ ಪ್ರಸಾದದ ಬಗ್ಗೆ ಅಚ್ಚರಿ ಹಾಗೂ ತಿಳಿದುಕೊಳ್ಳುವ ಕುತೂಹಲ.
ಪಕ್ಕದಲ್ಲೇ ಇದ್ದ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಮರ್ಯಾದೆ ಮಾಡುತ್ತಿದ್ದ ಸ್ವಾಮಿ ಸನ್ನಿಧಿ ಅರ್ಚಕ ವರದರಾಜಭಟ್ಟರ್ ಇದು ಚೆಲುವನಾರಾಯಣಸ್ವಾಮಿಯ ಚಂದನದಲ್ಲಿ ಮಾಡಿದ ಅಭಯಹಸ್ತದ ಪ್ರತಿರೂಪವಾದ ಪ್ರಸಾದ. ಮೂಲಮೂರ್ತಿ ಮತ್ತು ಉತ್ಸವಮೂರ್ತಿಯ ಅಭಯ ಹಸ್ತಗಳನ್ನು ಮೇಲುಕೋಟೆ ದೇವಾಲಯದಲ್ಲಿ ಗಣ್ಯಾತಿಗಣ್ಯರಿಗೆ ಶಠಾರಿ ಮರ್ಯಾದೆಯ ಪ್ರಸಾದರೂಪವಾಗಿ ನೀಡುವ ಸಂಪ್ರದಾಯವಿದೆ. ತಾವು ಸ್ವೀಕರಿಸಿ, ಶಿರಸ್ಸಿನ ಮೇಲಿಟ್ಟುಕೊಂಡು ನಂತರ ಜೋಪಾನಮಾಡಿ ನಿಮ್ಮ ಮನೆಯ ಪೂಜಾಗೃಹದಲ್ಲಿಟ್ಟು ಪೂಜಿಸುವ ವೇಳೆ ಚೆಲುವನಾರಾಯಣನ ಸಾನ್ನಿಧ್ಯವಿರುತ್ತದೆ ಎಂದರು.
ಉಪರಾಷ್ಟ್ರಪತಿಗಳು ಧನ್ಯೋಸ್ಮಿ ಎಂದು ಸ್ವೀಕರಿಸಿ ಜೋಪಾನ ಮಾಡಲು ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಇನ್ನು ದೇವಾಲಯ ಪ್ರವೇಶಿಸಿ ಚೆಲುವನಾರಾಯಣಸ್ವಾಮಿ ದರ್ಶನದವರೆಗೂ ಓಂ ನಮೋ ನಾರಾಯಣಾಯ ಎಂಬ ಅಷ್ಠಾಕ್ಷರಿ ಮಂತ್ರವನ್ನು ಪಠಿಸುತ್ತೇಲೆ ಇದ್ದರು. ರಾಮಾನುಜಾಚಾರ್ಯರಿಗೆ ಪೂಜೆ ವೇಳೆ ಒಡೆಯವರೇ ಶರಣಂ ಎಂಬ ಮಂತ್ರೋಚ್ಛಾರಣೆ ಮಾಡಿದರು. ದೇವಾಲಯದಲ್ಲಿದ್ದಷ್ಟೂ ಕಾಲ ಭಕ್ತಿಭಾವದಿಂದಲೇ ನಡೆದುಕೊಂಡರು.
ಉಪರಾಷ್ಟ್ರಪತಿಗಳ ಭೇಟಿಯ ಅಂತ್ಯದಲ್ಲಿ ವಿದ್ವಾನ್ ಶ್ರೀರಂಗಂರಾಮಪ್ರಿಯ ಅವರು ಮನವಿ ನೀಡಿ ಚೆಲುವನಾರಾಯಣಸ್ವಾಮಿ ದೇವಾಲಯದ ಹೊರಪ್ರಾಕಾರ ಮತ್ತು ಒಳಪ್ರಾಕಾರದ ಸುತ್ತ ಇರುವ ಗೂಡುಗಳಲ್ಲಿ ಮುರಿದ ವಿಗ್ರಹಗಳಿಗೆ ಪೂರ್ಣ ರೂಪ ನೀಡಬೇಕು. ಖಾಲಿ ಇರುವಲ್ಲಿ ಶಾಸ್ತ್ರೋಕ್ತವಾದ ಮೂರ್ತಿಗಳನ್ನು ನಿರ್ಮಾಣ ಮಾಡಬೇಕು. ರಾಜಗೋಪುರಕ್ಕೆ ಬಣ್ಣ ಹೊಡೆಸಿ, ಸೋರುತ್ತಿರುವ ದೇಗುಲದ ಮಾಳಿಗೆಯನ್ನು ಸರಿಮಾಡಬೇಕು. ಹೀಗಾಗಿ ದಯವಿಟ್ಟು ಕೇಂದ್ರ ಪುರಾತತ್ವ ಇಲಾಖೆಗೆ ಈ ಬಗ್ಗೆ ಸೂಚಿಸಬೇಕು ಎಂದರು.