ಮದುವೆಗಾಗಿ ಸಿದ್ಧವಾಗಿತ್ತು 1 ಕೆಜಿ ಚಿನ್ನ ಆದರೆ ಐಶ್ವರ್ಯಾ ಲಕ್ಷ್ಮೀಯ ಆ ಒಂದು ನಡೆಯಿಂದ ಎಲ್ಲವೂ ನುಚ್ಚು ನೂರಾಯ್ತು..! Aishwarya Lekshmi 
ಮಾಲಿವುಡ್

ಮದುವೆಗಾಗಿ ಸಿದ್ಧವಾಗಿತ್ತು 1 ಕೆಜಿ ಚಿನ್ನ ಆದರೆ ಐಶ್ವರ್ಯಾ ಲಕ್ಷ್ಮೀಯ ಆ ಒಂದು ನಡೆಯಿಂದ ಎಲ್ಲವೂ ನುಚ್ಚು ನೂರಾಯ್ತು..! Aishwarya Lekshmi

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ವೃತ್ತಿ ತೊರೆದು ನಟಿಯಾದ ಐಶ್ವರ್ಯಾ ಲಕ್ಷ್ಮಿ
  • ಮಗಳ ಮದುವೆಗಾಗಿ ಒಂದು ಕೆಜಿ ಚಿನ್ನ ಕೂಡಿಟ್ಟಿದ್ದ ಪೋಷಕರು
  • ಸಿನಿಮಾ ರಂಗ ಪ್ರವೇಶದಿಂದ ಭಗ್ನಗೊಂಡ ಪೋಷಕರ ಕನಸು
  • ರಹಸ್ಯ ಥೆರಪಿ ಮೂಲಕ ಮಾನಸಿಕ ಒತ್ತಡ ನಿವಾರಿಸಿಕೊಂಡ ನಟಿ
  • ಮದುವೆ ಹಾಗೂ ತಾಯಿಯಾಗುವ ಆಸೆ ವ್ಯಕ್ತಪಡಿಸಿದ ಐಶ್ವರ್ಯಾ
Aishwarya Lekshmi : ವೈದ್ಯಕೀಯ ವೃತ್ತಿಯನ್ನು ತೊರೆದು ನಟನಾ ಲೋಕಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟಿ ಐಶ್ವರ್ಯಾ ಲಕ್ಷ್ಮಿ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಆಸಕ್ತಿದಾಯಕ ಸಂಗತಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ನಿರ್ದೇಶಕ ಅಲೆಪ್ಪಿ ಅಶ್ರಫ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟಿಯ ಬದುಕಿನ ಹಲವು ರಹಸ್ಯ ಸಂಗತಿಗಳನ್ನು ಹೊರ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ.
ತಿರುವನಂತಪುರದ ಸರ್ಕಾರಿ ಅಧಿಕಾರಿ ದಂಪತಿಯ ಏಕೈಕ ಪುತ್ರಿಯಾಗಿರುವ ಐಶ್ವರ್ಯಾ, ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದು ಎಂಬಿಬಿಎಸ್ ಮುಗಿಸಿ ಹೌಸ್ ಸರ್ಜರಿ ಮಾಡುವ ಹಂತದಲ್ಲಿದ್ದವರು. ಪೋಷಕರು ತಮ್ಮ ಮಗಳು ಓದಿ ದೊಡ್ಡ ಡಾಕ್ಟರ್ ಆಗಬೇಕು ಮತ್ತು ವೈದ್ಯರೊಬ್ಬರನ್ನೇ ಮದುವೆಯಾಗಿ ಸುಂದರ ಸಂಸಾರ ನಡೆಸಬೇಕು ಎಂಬ ಕನಸು ಕಂಡಿದ್ದರು. ಆದರೆ, ಐಶ್ವರ್ಯಾ ಮನಸ್ಸು ಮಾತ್ರ ಮಾಡೆಲಿಂಗ್ ಹಾಗೂ ಸಿನಿಮಾದ ಮೇಲಿತ್ತು. ಕೆಲಸ ಮತ್ತು ಸಂಸಾರ ಎಂಬ ಹಾದಿಯನ್ನು ಐಶ್ವರ್ಯಾ ಬಿಟ್ಟುಬಂದಿದ್ದು ಪೋಷಕರಿಗೆ ತೀವ್ರ ಆಘಾತ ಉಂಟುಮಾಡಿತ್ತು.
ಮಗಳ ಮದುವೆಗಾಗಿ ಎಲ್ಲವನ್ನೂ ಸಿದ್ಧಪಡಿಸಿಟ್ಟು, ಬರೋಬ್ಬರಿ ಒಂದು ಕೆಜಿ ಚಿನ್ನವನ್ನೂ ಕೂಡಿಟ್ಟಿದ್ದ ಪೋಷಕರ ನಿರೀಕ್ಷೆಗಳು ಐಶ್ವರ್ಯಾರ ಸಿನಿಮಾ ರಂಗ ಪ್ರವೇಶದಿಂದ ಸಂಪೂರ್ಣವಾಗಿ ಧೂಳೀಪಟವಾದವು. ನಟಿಯಾಗಿ ಐಶ್ವರ್ಯಾ ಅವರು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ ಪೋಷಕರು ಅವರಿಂದ ಒಂದು ರೂಪಾಯಿಯನ್ನೂ ಸ್ವೀಕರಿಸಿಲ್ಲ. ಮಗಳ ಸಿನಿಮಾಗಳು ಹಾಗೂ ಅದರಲ್ಲಿನ ದೃಶ್ಯಗಳನ್ನು ಕಂಡು ನೊಂದಿರುವ ಅವರು, ಈಗಲೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಅಲೆಪ್ಪಿ ಅಶ್ರಫ್ ಅವರು ಹೇಳಿದ್ದಾರೆ.
ಈ ಎಲ್ಲ ಕೌಟುಂಬಿಕ ಒತ್ತಡಗಳು, ಬಾಲ್ಯದ ಘಟನೆಗಳು ಮತ್ತು ಹದಿಹರೆಯದ ಸಂಬಂಧಗಳಿಂದ ಉಂಟಾದ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ಐಶ್ವರ್ಯಾ ರಹಸ್ಯವಾಗಿ ಥೆರಪಿ (ಚಿಕಿತ್ಸೆ) ಮೊರೆ ಹೋದರು. ಕುಟುಂಬಕ್ಕೆ ತಿಳಿಯದಂತೆ ತಜ್ಞರ ಬಳಿ ಸಮಾಲೋಚನೆ ನಡೆಸಿ ತಮ್ಮೊಳಗಿನ ಗೊಂದಲ, ಟ್ರಾಮಾಗಳನ್ನು ಸರಿಪಡಿಸಿಕೊಂಡಿದ್ದಲ್ಲದೆ, ಕಷ್ಟದ ಸಂದರ್ಭಗಳನ್ನು ಶಾಂತವಾಗಿ ಎದುರಿಸುವ ಮಾನಸಿಕ ಸ್ಥೈರ್ಯವನ್ನು ರೂಢಿಸಿಕೊಂಡರು. ಈ ಹಿಂದೆ ಮದುವೆ ಹಾಗೂ ಸಂಸಾರದ ಕಲ್ಪನೆಯೇ ಇಲ್ಲ ಎಂದಿದ್ದ ಐಶ್ವರ್ಯಾ ಲಕ್ಷ್ಮಿ ಅವರ ಯೋಚನೆಯಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಸಿನಿಮಾವೊಂದರಲ್ಲಿ ಮಗುವಿನ ತಾಯಿಯ ಪಾತ್ರದಲ್ಲಿ ನಟಿಸಿದ ಅನುಭವದಿಂದ ಅವರಿಗೆ ತಾಯಿಯಾಗುವ ತೀವ್ರ ಆಸೆ ಮೂಡಿದೆ. ಮಗುವನ್ನು ದತ್ತು ಪಡೆಯುವ ಬದಲು ತಾನೇ ಹೆತ್ತು ತಾಯಿ ಎನಿಸಿಕೊಳ್ಳಬೇಕೆಂಬ ಹಂಬಲ ವ್ಯಕ್ತಪಡಿಸಿರುವ ಅವರು, ಪ್ರಸ್ತುತ ತಾನು ಪ್ರೀತಿಯ ಸಂಬಂಧದಲ್ಲಿದ್ದೇನೆ ಎಂದು ಈ ಹಿಂದಿನ ಸಂದರ್ಶನವೊಂದಲ್ಲಿ ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ನಮ್ಮನ್ನೇ ನಿಯಂತ್ರಿಸುತ್ತಿವೆ ಮತ್ತು ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತ ನಟಿ, ಈ ಹಿಂದೆ ತಮ್ಮ ಖಾತೆಗಳನ್ನೆಲ್ಲ ಬ್ಲಾಕ್​ ಮಾಡಿದ್ದಾರೆ. ಇತ್ತೀಚೆಗೆ ಅವರು ಭಾಗವಹಿಸಿದ್ದ ಉದ್ಘಾಟನಾ ಸಮಾರಂಭವೊಂದರ ಉಡುಪಿನ ಆಯ್ಕೆಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ಹಾಗೂ ಆಪಾದನೆಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ, ತಾನು ಧರಿಸುವ ಬಟ್ಟೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ತನಗಿದೆ ಎಂದು ಸ್ಪಷ್ಟಪಡಿಸಿಮ ತಿರುಗೇಟು ನೀಡಿದರು. 
ಮಲಯಾಳಂ ಸಿನಿಮಾರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಸಿಗುವ ಟೀಕೆಗಳು ಮತ್ತು ಹೀಯಾಳಿಕೆಗಳು ನೋವುಂಟು ಮಾಡುತ್ತವೆ ಎಂದು ಐಶ್ವರ್ಯಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಇಂದು ಐಶ್ವರ್ಯಾ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದು, ಅಲ್ಲಿನ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಹಾಗೂ ಗೌರವವನ್ನು ಗಳಿಸುತ್ತಿದ್ದಾರೆ. ಹೆಣ್ಣುಮಕ್ಕಳು ತಮ್ಮ ಇಷ್ಟದ ಹಾದಿಯಲ್ಲಿ ಮುನ್ನಡೆಯುವಾಗ ಅವರನ್ನು ಬೆಂಬಲಿಸದಿದ್ದರೂ ಪರವಾಗಿಲ್ಲ, ಅವರ ರೆಕ್ಕೆಗಳನ್ನು ಕತ್ತರಿಸಬಾರದು ಎಂಬ ಸಂದೇಶವನ್ನು ಈ ಘಟನೆಗಳು ಸಾರುತ್ತವೆ. ಏರಿಳಿತಗಳನ್ನು ಮೆಟ್ಟಿನಿಂತು ಸ್ವಂತಿಕೆ ಹಾಗೂ ಸ್ಪಷ್ಟತೆಯಿಂದ ಮುನ್ನಡೆಯುತ್ತಿರುವ ಐಶ್ವರ್ಯಾ ಲಕ್ಷ್ಮಿ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕು ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸೋಣ, (ಏಜೆನ್ಸೀಸ್​).