ನಟಿ ಶಕೀಲಾಗೆ ಏನಾಯ್ತು? ದಯವಿಟ್ಟು ಮೊಬೈಲ್ ಬಳಸಬೇಡಿ ಎಂದು ಯುವಕರಲ್ಲಿ ಮನವಿ ಮಾಡಿದ ಮಲಯಾಳಿ! Actress Shakeela
- ಅತಿಯಾದ ಮೊಬೈಲ್ ಬಳಕೆಯಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ ನಟಿ ಶಕೀಲಾ
- ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಜನಪ್ರಿಯ ನಟಿ
- ದಿನಕ್ಕೆ ನಾಲ್ಕು ಗಂಟೆ ಗೇಮ್ಸ್ ಆಡುವುದೇ ಆರೋಗ್ಯ ಹದಗೆಡಲು ಕಾರಣವೆಂದ ಶಕೀಲಾ
- ಆಸ್ಪತ್ರೆ ದಾಖಲಾತಿ ಹಾಗೂ ಸರ್ಜರಿ ನಂತರದ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೆ
- ಫೋನ್ ಅನ್ನು ಅತಿಯಾಗಿ ಬಳಸಬೇಡಿ ಎಂದು ಅಭಿಮಾನಿಗಳಿಗೆ ನಟಿ ಶಕೀಲಾ ಎಚ್ಚರಿಕೆ
Actress Shakeela : ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್ ಮಾಡಲಾಯಿತು.
ನಂತರದಲ್ಲಿ ಶಕೀಲಾ ಅವರು ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು. ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ, ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಕನ್ನಡದ ಬಿಗ್ಬಾಸ್ ಶೋನಲ್ಲೂ ಭಾಗಿಯಾಗಿದ್ದರು. ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಶಕೀಲಾರನ್ನು ಅರಸಿ ಬರುತ್ತಿವೆ.
ತಾಜಾ ಸಂಗತಿ ಏನೆದರೆ, ಅತಿ ಹೆಚ್ಚು ಮೊಬೈಲ್ ಫೋನ್ ಬಳಕೆ ಮಾಡಿದ್ದರಿಂದ ಕುತ್ತಿಗೆಯ ನರ ಹಾಗೂ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಿರುವ ನಟಿ ಶಕೀಲಾ, ತೀವ್ರಗೊಂಡ ನೋವಿನ ಬಳಿಕ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಾವು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದ ದೃಶ್ಯಗಳು ಹಾಗೂ ಸರ್ಜರಿಯ ನಂತರ ಮನೆಗೆ ವಾಪಸಾದ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಅವರು ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಕುತ್ತಿಗೆಗೆ ಕಾಲರ್ ಬೆಲ್ಟ್ ಧರಿಸಿರುವ ಅವರು, ಹಾಸಿಗೆಯಿಂದ ಏಳಲು ಮತ್ತು ಊಟ ಮಾಡಲು ಇತರರ ಸಹಾಯವನ್ನು ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ.
ಫೋನ್ ನಮ್ಮ ದೈನಂದಿನ ಜೀವನಕ್ಕೆ ಅತ್ಯಂತ ಉಪಯುಕ್ತವಾದ ವಸ್ತುವಾಗಿದ್ದರೂ, ಅದನ್ನು ಅತಿಯಾಗಿ ಬಳಸಬಾರದು ಎಂದು ವಿಡಿಯೋದಲ್ಲಿ ಶಕೀಲಾ ಎಚ್ಚರಿಸಿದ್ದಾರೆ. ಮೆಡ್‌ವೇ ಆಸ್ಪತ್ರೆಯ ಡಾ. ಬಾಲಮುರುಗನ್ ಅವರು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದಾರೆ. ದಿನಕ್ಕೆ ಸುಮಾರು ನಾಲ್ಕು ಗಂಟೆಗಳ ಕಾಲ ಮೊಬೈಲ್ ಫೋನ್‌ನಲ್ಲಿ ಗೇಮ್ಸ್ ಆಡುವುದನ್ನು ರೂಢಿಸಿಕೊಂಡಿದ್ದೇ ತಮ್ಮ ಆರೋಗ್ಯ ಹದಗೆಡಲು ಮುಖ್ಯ ಕಾರಣ ಎಂದು ಶಕೀಲಾ ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ಕಡಿಮೆ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ ಶಕೀಲಾ, ಫೋನ್ ಅನ್ನು ಕೇವಲ ಅತ್ಯಗತ್ಯ ಉದ್ದೇಶಗಳಿಗೆ ಮಾತ್ರ ಬಳಸಿ ಮತ್ತು ಮಕ್ಕಳ ಕೈಗೆ ಫೋನ್ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಿ ಎಂದು ಕಿವಿಮಾತು ಹೇಳಿದ್ದಾರೆ. ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಈ ಘಟನೆಯು ಕಣ್ಣು ತೆರೆಸುವ ಎಚ್ಚರಿಕೆಯ ಪಾಠವಾಗಿದೆ, (ಏಜೆನ್ಸೀಸ್).