52 ವರ್ಷಗಳೇ ಕಳೆದ್ರೂ ಇಂದಿಗೂ ಮಾಲಿವುಡ್​ನ 'ಮರ್ಲಿನ್ ಮನ್ರೋ' ಸಾವು ನಿಗೂಢ 
ಮಾಲಿವುಡ್

21ನೇ ವಯಸ್ಸಿಗೆ ದುರಂತ ಅಂತ್ಯ! 52 ವರ್ಷಗಳೇ ಕಳೆದ್ರೂ ಇಂದಿಗೂ ಮಾಲಿವುಡ್​ನ 'ಮರ್ಲಿನ್ ಮನ್ರೋ' ಸಾವು ನಿಗೂಢ | Mollywood Marilyn Monroe

ಪ್ರಮುಖ ಮುಖ್ಯಾಂಶಗಳು

  • 13ನೇ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ, 21ರಲ್ಲೇ ದುರಂತ ಅಂತ್ಯ
  • ಸಿನಿ ಪಯಣದ ಉತ್ತುಂಗದಲ್ಲೇ ವಿಜಯಶ್ರೀ ಬದುಕು ಕೊನೆಗೊಂಡಿದ್ದೇಕೆ?
  • ಸ್ಟಾರ್​ ನಟಿಯ ಸಾವಿನ ಸುತ್ತ ಇಂದಿಗೂ ನಿಗೂಢತೆಯ ಹುತ್ತ
Mollywood Marilyn Monroe: ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಬೆಳ್ಳಿತೆರೆಯಲ್ಲಿ ತಮ್ಮ ಅಮೋಘ ಅಭಿನಯ ಮತ್ತು ಸೌಂದರ್ಯದಿಂದಲೇ ಇಡೀ ಪ್ರೇಕ್ಷಕರ ವರ್ಗವನ್ನು ಅತೀ ಕಡಿಮೆ ಸಮಯದಲ್ಲಿ ಸೆಳೆದಿದ್ದ ನಟಿ ವಿಜಯಶ್ರೀ, ಕೇವಲ 13ನೇ ವಯಸ್ಸಿಗೆ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟಿಕೊಟ್ಟು, ಕೇವಲ 21ನೇ ವಯಸ್ಸಿಗೆ ದುರಂತ ಅಂತ್ಯ ಕಂಡಿದ್ದು ಇಂದಿಗೂ ಉತ್ತರ ಸಿಗದ, ಮರೆಯಲಾಗದ ಘಟನೆಯಾಗಿಯೇ ಉಳಿದಿದೆ.
ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಸಮಯವದು. 21ನೇ ವಯಸ್ಸಿಗೆ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದ ವಿಜಯಶ್ರೀ, ತಾವು ಅಭಿನಯಿಸಿದ ಕೊನೇ ಚಿತ್ರದಲ್ಲಿ ಆದ ಅದೊಂದು ಕಹಿ ಘಟನೆಯಿಂದ ತೀರ ಮನನೊಂದು ಆತ್ಮಹತ್ಯೆಗೆ ಶರಣಾದರು ಎಂಬ ಮಾತುಗಳು ಇವತ್ತಿಗೂ ಮಾಲಿವುಡ್​ನಲ್ಲಿ ಜೀವಂತವಾಗಿದೆ. ಆಕೆಯ ದುರಂತ ಅಂತ್ಯಕ್ಕೆ ನಿಖರ ಕಾರಣವೇನು ಎಂಬುದು ಇಲ್ಲಿಯವರೆಗೂ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಚಿತ್ರರಂಗದಲ್ಲಿದ್ದ ಅಷ್ಟು ವರ್ಷಗಳ ಕಾಲ, ವಿಜಯಶ್ರೀ ಅವರ ಗ್ಲಾಮರ್‌ ಇಮೇಜ್‌, ವೈಯಕ್ತಿಕ ಜೀವನ ಹಾಗೂ ಸುತ್ತುವರೆದಿದ್ದ ಕೆಲವು ವಿವಾದಗಳ ಇಲ್ಲಿ ವಿವರವಾಗಿ ತಿಳಿಯೋಣ.

13ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ

1953ರ ಜನವರಿ 8ರಂದು ತಿರುವನಂತಪುರದ ಪೂಜಪುರದಲ್ಲಿ ಜನಿಸಿದ ವಿಜಯಶ್ರೀ, ಕೇವಲ 13ನೇ ವಯಸ್ಸಿನಲ್ಲೇ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. 1966ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಚಿಟ್ಟಿ' ಮೂಲಕ ಬಾಲನಟಿಯಾಗಿ ಕಾಣಿಸಿಕೊಂಡ ಅವರು ಬಳಿಕ ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. 1969ರಲ್ಲಿ ಮಲಯಾಳಂ 'ಪೂಜಾಪುಷ್ಪಂ' ನಟಿಸಿ, ಮಾಲಿವುಡ್​ ಸಿನಿರಸಿಕರಿಗೆ ಪರಿಚಿತರಾದರು. ಇಲ್ಲಿಂದ ಅವರ ಸಿನಿ ಕರಿಯರ್​ ಇನ್ನಷ್ಟು ವೇಗವಾಗಿ ಓಡಲಾರಂಭಿತು. 'ಲಂಕಾ ದಹನಂ', 'ಟ್ಯಾಕ್ಸಿ ಕಾರ್', 'ಅರೋಮಲುಣ್ಣಿ', 'ಪೋಸ್ಟ್‌ಮ್ಯಾನ್ ಕಣ್ಣನಿಲ್ಲ' ಮತ್ತು 'ಅಂಗತಟ್ಟು' ಸೇರಿದಂತೆ ಹಲವು ಚಿತ್ರಗಳು ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು.

ಪ್ರೇಮ್ ನಜೀರ್ ಜತೆ ಸೂಪರ್‌ಹಿಟ್ ಜೋಡಿ ಪಟ್ಟ

ವಿಜಯಶ್ರೀ ಮತ್ತು ನಟ ಪ್ರೇಮ್ ನಜೀರ್ ಅವರ ಜೋಡಿ ಮಲಯಾಳಂ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. ಇವರಿಬ್ಬರ ತೆರೆಯ ಮೇಲಿನ ಮೋಡಿಗೆ ಹಲವು ಯಶಸ್ವಿ ಚಿತ್ರಗಳೇ ಸಾಕ್ಷಿ. ಅಲ್ಪಾವಧಿಯಲ್ಲೇ ವಿಜಯಶ್ರೀ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡು, ಬಹುಭಾಷಾ ನಟಿಯಾಗಿ ಮಿಂಚಿದರು. ಮತ್ತೊಂದೆಡೆ, ಅವರ ಸೌಂದರ್ಯಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಮಾರು ಹೋಗಿದ್ದರು. ಹಾಲಿವುಡ್ ನಟಿ ರೀಟಾ ಹೇಯ್‌ವರ್ತ್ ಹಾಗೂ ‘ಮರ್ಲಿನ್ ಮನ್ರೋ ಆಫ್ ಮಲಯಾಳಂ ಸಿನಿಮಾ’ ಎಂಬ ಬಿರುದುಗಳನ್ನು ವಿಜಯಶ್ರೀ ಪಾಲಾಯಿತು.

ವಿವಾದ ಸೃಷ್ಟಿಸಿದ ಆ ದೃಶ್ಯ

1973ರ ಪೊನ್ನಾಪುರಂ ಕೊಟ್ಟ ಚಿತ್ರದ ಕೆಲವು ದೃಶ್ಯಗಳು ವಿಜಯಶ್ರೀ ಅವರ ಬದುಕಿನಲ್ಲಿ ದೊಡ್ಡ ವಿವಾದ ಹಾಗೂ ದುರಂತ ಅಂತ್ಯಕ್ಕೆ ಮುಖ್ಯ ಕಾರಣವಾಯಿತು ಎಂಬ ಮಾತುಗಳಿವೆ. ಈ ಸಿನಿಮಾದ ಒಂದು ಹಾಡಿನ ದೃಶ್ಯವನ್ನು ಜಲಪಾತದ ಬಳಿ ಚಿತ್ರೀಕರಿಸಲಾಗುತ್ತಿತ್ತು. ಆ ವೇಳೆ, ಅವರ ಉಡುಪು ಜಾರಿತು. ಇದನ್ನು ಅರಿತ ವಿಜಯಶ್ರೀ, ಬ್ಯಾಲೆನ್ಸ್​ ಮಾಡಿಕೊಂಡೇ ಸೀನ್ ಕಂಪ್ಲೀಟ್​ ಮಾಡಿದರು. ಇದು ಫೈನಲ್​ ಕಟ್​ನಲ್ಲಿ ಡಿಲೀಟ್​ ಆಗಲಿದೆ ಎಂದು ಅವರು ಭಾವಿಸಿದ್ದರು. ಆದ್ರೆ, ಥಿಯೇಟರ್​ನಲ್ಲಿ ಆ ಸೀನ್​ ತಮ್ಮ ಅನುಮತಿಯಿಲ್ಲದೆ ಬಳಕೆ ಮಾಡಿದ್ದು ಅವರ ಮನಸ್ಸಿಗೆ ತೀರ ಘಾಸಿಯುಂಟು ಮಾಡಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಚಿತ್ರತಂಡದ ವಿರುದ್ಧ ಭಾರಿ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರಂತೆ.
ಈ ದೃಶ್ಯ ನೋಡಿದ ಸಿನಿರಸಿಕರು ಅವರನ್ನು ನೋಡುವ ರೀತಿ ಇನ್ನಷ್ಟು ಬದಲಾಯಿತು. ಇದು ಅವರಿಗೆ ಮಾನಸಿಕ ಯಾತನೆ ನೀಡಿತು ಮತ್ತು ಕರಿಯರ್​ ಮುಂದುವರಿಸಲು ಒತ್ತಡ ಹಾಕಿತು ಎಂಬ ಆರೋಪಗಳೂ ಕೇಳಿಬಂದಿವೆ. ಕೆಲವು ಮಾಲಿವುಡ್​ ವರದಿಗಳಲ್ಲಿ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಆ ಸೀನ್​ನ ಮುಂದಿಟ್ಟು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂಬ ಆರೋಪಗಳ ಉಲ್ಲೇಖಗಳಿವೆ. ಆದರೆ, ಇವುಗಳು ಎಷ್ಟು ನಿಜವಾಗಿತ್ತು ಎಂಬುದಕ್ಕೆ ಯಾವುದೇ ಬಲವಾದ ವರದಿಗಳು ಅಥವಾ ಸಾಕ್ಷಿಗಳಿಲ್ಲ.

ಹಾಟ್​ ದೃಶ್ಯ, ನೆಗೆಟಿವ್ ಇಮೇಜ್​ನಿಂದ ದೂರ

ಈ ವಿವಾದಕ್ಕೂ ಮೊದಲು ಹಲವು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ನಟಿ ಎಂಬ ಹೆಗ್ಗಳಿಕೆಗೆ ಹಾಗೂ ಜನರಲ್ಲಿ ಒಂದೊಳ್ಳೆ ಇಮೇಜ್​ ಸೃಷ್ಟಿಸಿಕೊಂಡಿದ್ದ ವಿಜಯಶ್ರೀ, ಬಳಿಕ ಒಂದಷ್ಟು ಚಿತ್ರಗಳ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರು ಎನ್ನಲಾಗಿದೆ. ಇದರಿಂದ ಅವರನ್ನು ನೋಡುವ ಇಮೇಜ್​ ಬದಲಾಗಿತ್ತು. ಇದು ಅವರಿಗೆ ದಿನ ಕಳೆದಂತೆ ಅರಿವಾದಾಗ, ತನ್ನನ್ನು ಹುಡುಕಿಕೊಂಡು ಬರುತ್ತಿರುವ ಅವಕಾಶಗಳು ಇದೇ ಬೇಕು ಎನ್ನುತ್ತಿವೆ ಎಂಬ ಬೇಸರಕ್ಕೆ ಒಳಗಾಗಿ, ಮುಂಚೆಯಂತೆ ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಲು ಮುಂದಾಗಿದ್ದರು. ಅಂತೆಯೇ, ಪೊನ್ನಾಪುರಂ ಕೊಟ್ಟ ಚಿತ್ರದಲ್ಲಿ ಆದ ವಿವಾದ ಅವರ ಮನಸ್ಸಿಗೆ ಇನ್ನೂ ನೋವುಂಟು ಮಾಡಿತು. ಮೊದಲೇ ಇಂತಹ ಪಾತ್ರಗಳಿಂದ ದೂರವಿರಬೇಕು ಎಂದು ಬಯಸಿದ್ದ ಅವರಿಗೆ, ತನ್ನದಲ್ಲದ ತಪ್ಪಿನಿಂದ ಸೃಷ್ಟಿಯಾದ ವಿವಾದ ಭಾರಿ ದುಃಖಕ್ಕೆ ದೂಡಿತು ಎನ್ನಲಾಗಿದೆ. ಇದೆಲ್ಲ ಆದ ಒಂದು ವರ್ಷ ಕಳೆದ ಮೇಲೆ ಅಂದರೆ 1974ರ ಮಾರ್ಚ್ 17ರಂದು ವಿಜಯಶ್ರೀ ಆತ್ಮಹತ್ಯೆಗೆ ಶರಣಾದರು.

21ನೇ ವಯಸ್ಸಿಗೆ ಬದುಕು ಅಂತ್ಯ

ಆತ್ಮಹತ್ಯೆಗೆ ಶರಣಾದ ಸಮಯದಲ್ಲಿ ಅವರಿಗೆ ಕೇವಲ 21 ವರ್ಷ ವಯಸ್ಸು. ವೃತ್ತಿಜೀವನ ಉತ್ತುಂಗದಲ್ಲಿದ್ದ ಸಮಯದಲ್ಲೇ ಈ ದುರಂತ ಸಂಭವಿಸಿದ್ದು ಮರೆಯಲಾಗದ ಘಟನೆ. ತಮ್ಮ ಸಾವಿಗೆ ಸಂಬಂಧಿಸಿದಂತೆ ಯಾವುದೇ ಡೆತ್​ನೋಟ್​ ಅಥವಾ ಕಾರಣ ತಿಳಿಸಿದ್ದ ಬಗ್ಗೆ ಎಲ್ಲಿಯೂ ಮಾಹಿತಿ ಲಭಿಸಿಲ್ಲ. ಹೀಗಾಗಿ, ನಟಿಯ ದುರಂತ ಸಾವಿಗೆ ಇದೇ ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಹೀಗಾಗಿ, ಇಂದಿಗೂ ಅವರ ಸಾವು ನಿಗೂಢವಾಗಿಯೇ ಉಳಿದಿದೆ,(ಏಜೆನ್ಸೀಸ್).