ಹದಿಹರೆಯದವರು ತಮಾಷೆಯಾಗಿ, ಕೇರ್ಫ್ರೀಯಾಗಿ, ಚೆನ್ನಾಗಿರುವಂತೆ ಹೊರಗೆ ಕಾಣಿಸಿದರೂ, ಒಳಗೊಳಗೆ ಬಹಳ ಗೊಂದಲ, ಅಭದ್ರತಾಭಾವ ಅನುಭವಿಸುತ್ತಿರುತ್ತಾರೆ. ಹೊರಗೆ ಹೇಳುವುದಿಲ್ಲ. ಆದರೂ, ತಂದೆ-ತಾಯಿ ಮೇಲೆ ಮಾನಸಿಕವಾಗಿ ಅವಲಂಬಿತರಾಗಿರುತ್ತಾರೆ. ನಿಮಗೆ ಗೊತ್ತೇ? ನೀವು ಕೊಡುವ ಪ್ರೆಸೆಂಟ್ಸ್ಗಿಂತ ನಿಮ್ಮ ಪ್ರೆಸೆನ್ಸೇ ಅವರಿಗೆ ಇಷ್ಟ.
ಹದಿಹರೆಯದ ಮಕ್ಕಳ ವ್ಯಕ್ತಿತ್ವ ವಿಕಸನದ ನಿಟ್ಟಿನಲ್ಲಿ ಪಾಲಕರ ಪಾತ್ರ, ಅವರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಸೇರಿ ಹಲವು ಅಂಶಗಳನ್ನು ಕಳೆದ ಅಂಕಣದಲ್ಲಿ ರ್ಚಚಿಸಿದ್ದೆವು. ಆ ಕುರಿತಾದ ಮತ್ತಷ್ಟು ಆಯಾಮಗಳ ಬಗ್ಗೆ ನೋಡೋಣ.
1) ಮಕ್ಕಳೊಂದಿಗೆ ಭಾವನಾತ್ಮಕವಾಗಿರಿ: ‘ನಮ್ಮ ಮಗಳು ಶಾಲೆಯಿಂದ ಬರುವಷ್ಟರಲ್ಲಿ ನಾನು ಮನೇಲಿ ಇರದಿದ್ದರೆ ಹಟ ಹಿಡಿದು, ಗೋಳಾಡಿ, ರಾದ್ಧಾಂತ ಮಾಡುತ್ತಾಳೆ. ಆದರೆ ನಾನು ಮನೇಲಿ ಇದ್ದಾಗ ನನ್ನ ಕಡೆ ಗಮನ ಕೂಡ ಕೊಡದೆ ನಿರ್ಲಕ್ಷ್ಯ ಮಾಡ್ತಾಳೆ’ ಎಂದು ಒಬ್ಬ ತಾಯಿ ದೂರಿದಳು. ಅದು ಬಹಳ ಸಹಜ. ನೀವು ಕಣ್ಣೆದುರು ಇರುವುದನ್ನು ಮಕ್ಕಳು ‘ಟೇಕ್ ಇಟ್ ಗ್ರಾಂಟೆಡ್’ ಆಗಿ ತೆಗೆದುಕೊಳ್ಳುತ್ತಾರೆ. ಮಧ್ಯರಾತ್ರಿ ಯುದ್ಧಭೂಮಿಯ ಟೆಂಟ್ನಲ್ಲಿ ಕುಳಿತು, ಮರುದಿನದ ಯುದ್ಧಕ್ಕಾಗಿ ವ್ಯೂಹಗಳನ್ನು ಮಾಡುತ್ತ ಪ್ರಶಾಂತವಾಗಿ ಚೆಸ್ ಆಡುವ ಮಹಾರಾಜ, ತನ್ನ ರಕ್ಷಣೆಗೆಂದು ಹೊರಗೆ ಪಹರೆ ಕಾಯುವ ಸೈನಿಕರನ್ನು ಗಮನಕ್ಕೆ ತಂದುಕೊಳ್ಳುವುದಿಲ್ಲ. ಕರೆದ ಕೂಡಲೇ ಅವರು ಬರದಿದ್ದರೆ ಮಾತ್ರ ಏನಾಯ್ತೋ ಎಂದು ಗಾಬರಿಪಡುತ್ತಾನೆ. ‘ಟೇಕಿಂಗ್-ಇಟ್-ಗ್ರಾಂಟೆಡ್’ ಅಂದರೆ ಅದೇ ಅರ್ಥ.
ಟೀನೇಜರ್ಸ್ ಪರಿಸ್ಥಿತಿಯನ್ನು ಇದರೊಂದಿಗೆ ಹೋಲಿಕೆ ಮಾಡಬಹುದು. ಅವರು ತಮಾಷೆಯಾಗಿ, ಕೇರ್ಫ್ರೀಯಾಗಿ, ಕೇರೇಪಿನ್ಗಳಂತೆ ಚೆನ್ನಾಗಿರುವಂತೆ ಹೊರಗೆ ಕಾಣಿಸಿದರೂ, ಒಳಗೊಳಗೆ ಬಹಳ ಗೊಂದಲ, ಅಭದ್ರತಾಭಾವ ಅನುಭವಿಸುತ್ತಿರುತ್ತಾರೆ. ಹೊರಗೆ ಹೇಳುವುದಿಲ್ಲ. ಆದರೂ, ತಂದೆ-ತಾಯಿ ಮೇಲೆ ಮಾನಸಿಕವಾಗಿ ಅವಲಂಬಿತರಾಗಿರುತ್ತಾರೆ. ನಿಮಗೆ ಗೊತ್ತೇ? ನೀವು ಕೊಡುವ ಪ್ರೆಸೆಂಟ್ಸ್ಗಿಂತ ನಿಮ್ಮ ಪ್ರೆಸೆನ್ಸೇ ಅವರಿಗೆ ಇಷ್ಟ.
2) ಹಳೆಯ ತಪ್ಪುಗಳನ್ನು ಜ್ಞಾಪಿಸುತ್ತಿರಬೇಡಿ: ಸದಾ ನಕಾರಾತ್ಮಕ ಮಾತುಗಳಿಂದ ಟೀಕೆ ಮಾಡಿದರೆ ಮಕ್ಕಳು ಮಾನಸಿಕವಾಗಿ ಕಿವುಡರಾಗುತ್ತಾರೆ. ಟೀನೇಜ್ ಬಂದಾಗ ತಾಯಿ-ತಂದೆಯಿಂದ ದೂರವಾಗುತ್ತಾರೆ. ‘ನನ್ನ ಹದಿನಾಲ್ಕರ ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ಅನುಮಾನ ಬಂದಾಗ, ನಾನು ಅವಳ ಜೊತೆ ನೇರವಾಗಿ ಮಾತನಾಡಲಿಲ್ಲ. ಚಿಂತೆ ಮಾಡುವವನಂತೆ ತೋರಿಸಿಕೊಂಡೆ, ಕಾರಣ ಏನೆಂದು ಅವಳು ಕೇಳಿದಾಗ ನನ್ನ ಸಹೋದ್ಯೋಗಿಯ ಮಗಳು ಯಾವನ ಜೊತೆಯೋ ‘ಪ್ರೀತಿ’ ಮಾಡ್ತಿದಾಳೆ. ಅದರಿಂದ ನಮಗೆಲ್ಲ ಬಹಳ ದುಃಖವಾಗಿದೆ, ಎಂದು ಹೇಳಿದೆ. ನೇರವಾಗಿ ಅವಳ ಕಡೆ ಬೆರಳು ತೋರಿಸದೆ ಅವಳ ಮನಸ್ಸಿನಲ್ಲಿ ಇರುವುದನ್ನು ಹೊರಗೆಳೆದೆ. ಸ್ವಲ್ಪ ಹೊತ್ತು ವಾದ-ವಿವಾದ ನಡೆದವು. ನಾನವಳಿಗೆ ಬದುಕಿನ ವಾಸ್ತವಾಂಶಗಳನ್ನು ವಿವರಿಸಿದೆ. ಅದು ಕೆಲಸ ಮಾಡಿತು’ ಎಂದನು ನನ್ನ ಸ್ನೇಹಿತ. ಇಪ್ಪತೆôದು ವರ್ಷಗಳ ಹಿಂದಿನ ಮಾತಿದು. ಆ ಹುಡುಗಿ ಸಿ.ಎ. ಮಾಡಿ ಈಗ ಇಪ್ಪತ್ತು ಲಕ್ಷದ ನೌಕರಿ ಮಾಡುತ್ತಿದ್ದಾಳೆ. ಅವಳಿಗೀಗ ಇಬ್ಬರು ಮಕ್ಕಳೂ ಇದ್ದಾರೆ.
3) ಮಕ್ಕಳು ಅದ್ಭುತ ಕೆಲಸಗಳನ್ನು ಮಾಡಲೆಂದು ಆಶಿಸಬೇಡಿ: ಮಕ್ಕಳನ್ನು ವಿನಯ, ವಿಧೇಯತೆಯ, ಅದ್ಭುತ ಭಾವಿ ಭಾರತ ಪ್ರಜೆಗಳನ್ನಾಗಿ ಮಾಡುವುದಾಗಿ ನೀವು ನಂಬಿರುವುದಾದರೆ ನಿಮಗೆ ಪದ್ಮಶ್ರೀ ಕೊಡಬಹುದು. ಅವರು ಮನ್ನಣೆ, ಮರ್ಯಾದೆಗಳನ್ನು ಶೇಕಡ ನೂರರಷ್ಟು ಬಯಸುವ ರೀತಿಯಲ್ಲಿ ಬೆಳೆಸಿಕೊಳ್ಳುವರೆಂದು ನೀವು ನಂಬಿದ್ದರೆ ನಿಮಗೆ ಪದ್ಮಭೂಷಣ ಕೊಡಬಹುದು.
ಅಂದಾಜು ಕಡಿಮೆ ಇರುವ ಜಾಗದಲ್ಲಿ ದುಃಖವು ಹೆಚ್ಚಿರುತ್ತದೆ. ಹಾಗೆಂದು ನಿಮ್ಮನ್ನು ನಿರಾಶೆ ಪಡಿಸುತ್ತಿದ್ದೇನೆ ಎಂದರ್ಥವಲ್ಲ. ಹೆಚ್ಚು ಪ್ರಯತ್ನ, ಕಡಿಮೆ ಆಸೆ ಆನಂದಕ್ಕೆ ಸೋಪಾನ. ನಿಮ್ಮ ಪ್ರಯತ್ನ ಸವ್ಯವಾಗಿರಲಿ. ಹಾಗೆ ಮಾಡಿದರೆ ಶೇಕಡ 90ರವರೆಗೆ ಯಶಸ್ಸು ಸಿಗುತ್ತದೆ.
ಕೆಲ ಪಾಲಕರು ಪದೇಪದೆ ಫೋನ್ ಮಾಡಿ ‘ಎಲ್ಲಿದ್ದೀಯ? ಯಾರ ಜೊತೆ ಇದ್ದೀಯ?’ ಎಂದು ವಿಚಾರಿಸುತ್ತಾರೆ. ಸ್ನೇಹಿತರ ಜೊತೆ ಇದ್ದಾಗ ಈ ರೀತಿ ಮೇಲಿಂದ ಮೇಲೆ ಫೋನ್ ಕಾಲ್ ಬರುತ್ತಿದ್ದರೆ, ಆ ಮಕ್ಕಳ ಕುರಿತು ಸ್ನೇಹಿತರು ಗೇಲಿ ಮಾಡಿ ನಗುತ್ತಾರೆ. ಮಕ್ಕಳಿಗೆ ಇರಿಸುಮುರಿಸಾಗುತ್ತದೆ. ಸಾಧ್ಯವಾದಷ್ಟೂ ಮೇಸೇಜ್ ಮಾಡಿರಿ. ಮೇಸೇಜ್ಗಳಾದರೆ ಅವರಿಗೆ ಕಿರಿಕಿರಿ ಇರುವುದಿಲ್ಲ. ಮಕ್ಕಳು ಮನೆಗೆ ಬಂದಾಗ ನಿಮ್ಮ ಗಾಬರಿಗೆ ಕಾರಣವೇನೆಂದು ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ.
ಕಾರ್ನಲ್ಲಿ ಹಾಡುಗಳನ್ನು ಹಾಕಿಕೊಂಡು ಮಕ್ಕಳೊಂದಿಗೆ ಹೋಗುತ್ತಿರುವಾಗ (ನಿಮ್ಮ ಟೇಸ್ಟ್ ಅವರ ಟೇಸ್ಟ್ ಬೇರೆ ಬೇರೆ ಆಗಿರುತ್ತಾದ್ದರಿಂದ) ಅವರಿಗಿಷ್ಟವಾದ ಹಾಡುಗಳನ್ನು ಹಾಕಿರಿ. ನೀವು ಒಂಟಿಯಾಗಿ ಪ್ರಯಾಣಿಸುವಾಗ ನಿಮ್ಮಿಷ್ಟದ ಹಾಡುಗಳನ್ನೇ ಕೇಳಬಹುದಲ್ಲ! ಆ ಹಾಡುಗಳ ಬಗ್ಗೆ ಅವರನ್ನು ಆಸಕ್ತಿಕರವಾಗಿ ಪ್ರಶ್ನೆ ಕೇಳಿರಿ. ನಿಮಗೆ ತಿಳಿಯದ ಎಷ್ಟೋ ವಿಚಾರಗಳನ್ನು ಅವರು ನಿಮಗೆ ಹೇಳಲು ಪ್ರಯತ್ನಿಸುತ್ತಾರೆ.
ವಾಹನವನ್ನು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಿಸಬೇಕೆಂದರೆ, ವಾಹನದ ಮೇಲೊಂದು ಸ್ಕಾ›ಚ್ ಬಿದ್ದರೆ ನಿಮ್ಮ ಮನಸ್ಸು ವಿಲಿವಿಲಿಗುಟ್ಟುತ್ತದೆ. ಅದರ ಬೆಲೆ ಐದು ಲಕ್ಷ ಇರುತ್ತದೆ. ಕೋಟಿ ಕೊಡುತ್ತೇನೆಂದರೆ ಮಕ್ಕಳನ್ನು ಮಾರುತ್ತೀರಾ? ಇಲ್ಲ. ಹಾಗಿರುವಾಗ ಕಾರ್ಗಿಂತ ಎಷ್ಟೋ ಪಟ್ಟು ಬೆಲೆ ಬಾಳುವ ಮಕ್ಕಳನ್ನು ಇನ್ನೆಷ್ಟು ಮುತುವರ್ಜಿಯಿಂದ ನೋಡಿಕೊಳ್ಳಬೇಕು? ಅವರ ವಿದ್ಯೆ ಎಂಬ ವಾಹನವನ್ನು ನಿಮ್ಮ ಮೂಢನಂಬಿಕೆಗಳ ಗುಂಡಿಬಿದ್ದ ರಸ್ತೆಯಲ್ಲಿ ನಡೆಸಬೇಡಿ. ದುಶ್ಚಟಗಳ ಸ್ಕಾ›ಚ್ಸ್ ಬೀಳಿಸಬೇಡಿ. ಆಗಿಂದಾಗ್ಗೆ ‘ಆತ್ಮವಿಮರ್ಶೆ’ ಎಂಬ ಆಯಿಲ್ನಿಂದ ಸರ್ವಿಸಿಂಗ್ ಮಾಡಿಕೊಳ್ಳುತ್ತಿರಿ.
4) ಒಳ್ಳೆಯ ಅಭ್ಯಾಸಗಳನ್ನು ಕಲಿಸಿರಿ: ಆರಂಭದ ಹಂತದಲ್ಲೇ ಮಕ್ಕಳ ನಕಾರಾತ್ಮಕ ಜೀವನಶೈಲಿಯನ್ನು (ಸ್ಮಾರ್ಟ್ಫೋನ್, ವಿಡಿಯೋ ಗೇಮ್್ಸ) ಬದಲಾಯಿಸಿರಿ, ಮಕ್ಕಳಿಗೆ ನಾಲ್ಕನೆಯ ವಯಸ್ಸಿನಿಂದಲೇ ಕಾಲ್ಪನಿಕ ನೈಪುಣ್ಯತೆ (ಇಮ್ಯಾಜಿನೇಷನ್ ಸ್ಕಿಲ್ಸ್) ಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಆಟದ ಪ್ರತ್ಯಕ್ಷ (ಲೈವ್) ವೀಕ್ಷಣೆಗೆ, ಮ್ಯೂಸಿಯಂಗೆ, ಇನ್ನಿತರ ಆಸಕ್ತಿಕರ ಪ್ರದೇಶಗಳಿಗೆ ಕರೆದೊಯ್ಯಿರಿ. ಜೀವಮಾನದಲ್ಲಿ ಕಡೇ ಪಕ್ಷ ಒಂದಾದರೂ ಪೇಂಟಿಂಗ್ ಎಕ್ಸಿಬಿಷನ್ ನೋಡದ, ಸಂಗೀತ ಕಛೇರಿಗೆ ಹೋಗದ ಗ್ರಾಜುಯೇಟ್ಸ್ ಶೇಕಡ 90 ರಷ್ಟು ಇದ್ದಾರೆಂದರೆ ಅದಕ್ಕೆ ತಂದೆ-ತಾಯಿ ಬೇಜವಾಬ್ದಾರಿಯೇ ಕಾರಣ.
ಮಕ್ಕಳಿಂದ ದೊಡ್ಡ ವಿಚಾರಗಳನ್ನು ಆಶಿಸಬೇಡಿ. ‘ಒಬ್ಬ ತಾಯಿಯಾಗಿ/ತಂದೆಯಾಗಿ ನನ್ನ ಸಣ್ಣ ಸಣ್ಣ ಕರ್ತವ್ಯಗಳನ್ನು ನಾನು ನಿಭಾಯಿಸುತ್ತಿದ್ದೇನೆಯೇ?’ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಉದಾಹರಣೆಗೆ, ಕೆಲವರ ಮನೆಯಲ್ಲಿ ರೆಫ್ರಿಜಿರೇಟರ್ ರೀತಿ, ಟಿ.ವಿ. ಕೂಡ ಸದಾ ಆನ್ನಲ್ಲಿ ಇರುತ್ತದೆ. ಮಕ್ಕಳಲ್ಲಿ ಪುಟಿಯುವ ಶಕ್ತಿಯನ್ನು ಈ ‘ಈಡಿಯಟ್ ಬಾಕ್ಸ್’ ಹಾಳು ಮಾಡುತ್ತದೆ. ಟಿ.ವಿ.ಯನ್ನು ವಾರಕ್ಕೆ ಆರು ದಿನಗಳಿಗೆ ಸೀಮಿತ ಮಾಡಿರಿ. ಅದಕ್ಕೇ ‘ಟಿ.ವಿ.ಫ್ರೀ ಡೇ’ ಎಂದು ಹೆಸರಿಡಿ. ವಾರಕ್ಕೆ ಒಂದು ದಿನ ಹೊರಗಿನ ಪೊ›ಗ್ರಾಂ ಪ್ಲಾನ್ ಮಾಡಿರಿ.
ಮಕ್ಕಳನ್ನು ಹತ್ತಿರದಲ್ಲಿ ಇರುವ ಗ್ರಂಥಾಲಯಕ್ಕೆ ಕರೆದೊಯ್ದು, ಅವರ ಜತೆ ನೀವೂ ಕುಳಿತು ಓದಿರಿ. ಅಲ್ಲಿ ಮೌನವಾಗಿ ಇರುವುದನ್ನು ಕಲಿಸಿರಿ. ಇವೆಲ್ಲ ಸಣ್ಣ ವಯಸ್ಸಿನಲ್ಲೇ ನಡೆಯಬೇಕು. ಬಿ.ಟೆಕ್ ಹುಡುಗನನ್ನು ಲೈಬ್ರರಿಗೆ ಕರೆದರೆ ಜಪ್ಪಯ್ಯ ಅಂದರೂ ಬರುವುದಿಲ್ಲ. ಅವರಿಗೆ ಇಷ್ಟವಾದ ಚಾನೆಲ್ಸ್ ನೋಡಲಿಕ್ಕೆ ಬಿಡದೆ, ಸಾಧ್ಯವಾದಷ್ಟು ಹೊತ್ತು ಅವರ ಜೊತೆಯಲ್ಲಿ ಕುಳಿತು ಉತ್ತಮ ಪೊ›ಗ್ರಾಂಗಳನ್ನು ನೋಡಿರಿ. ಸದಾ ಪೋಗೋ, ಕ್ರಿಕೆಟ್ ಚಾನೆಲ್ಗಳನ್ನು ನೋಡದಂತೆ, ಆನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯಾಗ್ರಫಿ ಚಾನೆಲ್ಗಳನ್ನು ನೋಡುವಂತೆ ಪ್ರೇರೇಪಿಸಿ. ಎಲಿಗೇಟರ್ಗೂ, ಕ್ರೊಕೊಡೈಲ್ಗೂ ಇರುವ ವ್ಯತ್ಯಾಸದ ಬಗ್ಗೆ, ಹುಳುಗಳನ್ನು ತಿನ್ನುವ ಗಿಡಗಳ ಬಗ್ಗೆ ಆಸಕ್ತಿಕರವಾಗಿ ಹೇಳಿರಿ. ಆಗ ಅವರಲ್ಲಿ ಅಭಿರುಚಿ ಬೆಳೆಯುತ್ತದೆ.
5) ಸಮಯ ಪಾಲನೆ ಕಲಿಸಿರಿ: ‘ನಿಮ್ಮ ಸಮಯದ ‘ಬೆಲೆ’ ಬೆಳೆದಂತೆಲ್ಲ ನೀವು ಬೇರೆಯವರ ಸಮಯವನ್ನು ಕೊಳ್ಳಬಲ್ಲಿರಿ’. ಬಹಳ ಅರ್ಥಪೂರ್ಣವಾದ ವಾಕ್ಯ ಇದು. ನೀವು ಗಂಟೆಗೆ ಸಾವಿರ ಸಂಪಾದಿಸಬಲ್ಲಿರಾದರೆ, ನಿಮ್ಮ ಕೆಲಸಗಳನ್ನು ಗಂಟೆಗೆ ನೂರು ರೂಪಾಯಿಯಂತೆ ಮಾಡುವ ಎಷ್ಟೋ ಮಂದಿ ಸಿಗುತ್ತಾರೆ. ಬ್ಯಾಂಕ್ಗೆ ಹೋಗುವುದರಿಂದ ಹಿಡಿದು, ವಾಟರ್ ಬಿಲ್, ಎಲೆಕ್ಟ್ರಿಸಿಟಿ ಬಿಲ್, ವೆಹಿಕಲ್ ಲೈಸೆನ್ಸ್-ಇವನ್ನೆಲ್ಲ ಅವರೇ ನೋಡಿಕೊಳ್ಳುತ್ತಾರೆ. ಮತ್ತಷ್ಟು ಗಳಿಸಲು ನಿಮಗೆ ಇನ್ನಷ್ಟು ಸಮಯ ಜೊತೆಗೆ ವಿಶ್ರಾಂತಿಯೂ ಲಭಿಸುತ್ತದೆ. ಅದರಿಂದ ಕ್ರಮೇಣ ಮಾಡುವ ಕೆಲಸದ ‘ದರ’ವೂ (ವ್ಯಾಲ್ಯೂ) ಬೆಳೆಯುತ್ತದೆ. ಈ ವಿಷಯವನ್ನು ಮಕ್ಕಳಿಗೆ ಅರ್ಥವಾಗುವ ಹಾಗೆ ಹೇಳಿ.
ಬದುಕಿನಲ್ಲಿ ಮೇಲೆ ಬರಬೇಕೆಂದರೆ ‘ಯಾವುದಕ್ಕೆ ಎಷ್ಟು ಟೈಂ’ ಕೊಡಬೇಕೆಂದು ತಿಳಿದಿರಬೇಕು. ಇರೆಗ್ಯುಲರ್ ಹ್ಯಾಬಿಟ್ಸ್ನ ಬದಲಾಯಿಸುವುದು ಕಷ್ಟ. ಆದರೂ ಪ್ರಯತ್ನ ಮಾಡಿ. ಮಕ್ಕಳು ನಿಯಮಿತ ಸಮಯದಲ್ಲೇ ಓದಬೇಕು, ವೇಳಾಪಟ್ಟಿ ಬರೆದುಕೊಂಡು ಅದರ ಪ್ರಕಾರ ಎಲ್ಲ ಕೆಲಸ ಮಾಡಲು ಹೇಳಿ. ಕ್ರಮೇಣ ಅದು ಅವರಿಗೆ ಅಭ್ಯಾಸವಾಗುತ್ತದೆ. ಮಕ್ಕಳಿಗೆ ಸಮಯ ಪಾಲನೆ (ಟೈಮ್ ಮ್ಯಾನೇಜ್ವೆುಂಟ್) ಕಲಿಸಿರಿ, ಅದರ ಜವಾಬ್ದಾರಿ ನೀವೇ ಹೊರಬೇಡಿ.
ಅವರ ಕೆಲಸಗಳನ್ನು ಮಾಡಲಿಕ್ಕೆ ಬೇರೊಬ್ಬರು ಇದ್ದಾರೆಂದು ತಿಳಿದರೆ, ಮಕ್ಕಳು ತಮ್ಮ ಜವಾಬ್ದಾರಿಗಳನ್ನೆಲ್ಲ ಮರೆತು ಹಾಯಾಗಿ ಕಾಲ ಕಳೆಯುತ್ತಾರೆ. ಕೆಲವು ಮನೆಗಳಲ್ಲಿ ಎದ್ದ ಕೂಡಲೇ ಹಾಸಿಗೆ ಸುತ್ತುವುದು, ನ್ಯಾಪ್ಕಿನ್ಗಳನ್ನು ಬಿನ್ನಲ್ಲಿ ಹಾಕುವುದು ಮುಂತಾದ ಸಣ್ಣಪುಟ್ಟ ಕೆಲಸವನ್ನೂ ಮಾಡದ ಮಕ್ಕಳಿದ್ದಾರೆ ಎಂದರೆ ಅದಕ್ಕೆ ಕಾರಣ ದೊಡ್ಡವರೇ.
ಮತ್ತೊಂದು ಸಮಸ್ಯೆ ಏನೆಂದರೆ ಮಕ್ಕಳಿಗೆ ಹದಿನೈದು ಬರುವಷ್ಟರಲ್ಲಿ ಪೋಷಕರಿಗೆ ನಲವತ್ತು ಅಗಿರುತ್ತದೆ. ಆದ್ದರಿಂದ ಅವರು ಆಗ ವೃತ್ತಿಗೂ ಪ್ರಾಮುಖ್ಯ ಕೊಡಬೇಕು. ಎರಡರ ನಡುವೆ ಸಮನ್ವಯ ಮಾಡುವುದು ಬಹಳ ಕಷ್ಟ. ಇದನ್ನೇ ‘ಕಾರ್ಪೇರೇಟ್ ಲೈಫ್ ಆಫ್ ಪೇರೆಂಟ್ ಹುಡ್’ ಅನ್ನುತ್ತಾರೆ. ಇದಕ್ಕಿರುವುದು ಒಂದೇ ಉತ್ತರ. ‘ಎಷ್ಟು ಸಮಯ ಮಕ್ಕಳೊಂದಿಗೆ, ಅವರಿಗೆ ಉಪಯೋಗವಾಗುವ ಹಾಗೆ ಕಳೆಯುತ್ತಿದ್ದೇವೆ?’ ಎನ್ನುವುದು. ಅದೇ ಕ್ವಾಲಿಟಿ ಟೈಂ. ಅಂದರೆ ಮಕ್ಕಳ ಪೋಷಣೆಯನ್ನು ಒಂದು ವೃತ್ತಿಯ ಹಾಗೆ ಸ್ವೀಕರಿಸುವುದು. ಒಬ್ಬ ತಂದೆ ಬೆಳಗ್ಗೆ ಎಂಟು ಗಂಟೆಗೆ ಆಫೀಸ್ಗೆ ಹೊರಟು ರಾತ್ರಿ ಎಂಟಕ್ಕೆ ಮನೆಗೆ ಬರುತ್ತಾನೆ ಅಂದುಕೊಳ್ಳೋಣ. ಅಂದರೆ ಅರ್ಧದಷ್ಟು ಸಮಯವನ್ನು ಆಫೀಸ್ಗಾಗಿ ವ್ಯಯ ಮಾಡುತ್ತಾನೆ. ಹಾಗಿರುವಾಗ ಶೇಕಡ 50 ರಷ್ಟು ಸಮಯವನ್ನು ಮಕ್ಕಳ ಜೊತೆ ಕಳೆಯಲಾರನೇ? ನೌಕರಿ ಮುಖ್ಯವೇ, ಆದರೆ ಮಕ್ಕಳ ಅಭಿವೃದ್ಧಿ ಕೂಡ ಅಷ್ಟೇ ಮುಖ್ಯ.