ಲೈಫ್‌ಸ್ಟೈಲ್

ಮನೋಲ್ಲಾಸ; ನಿರ್ಣಯದ ಫಲ

ಡಾ.ಗಣಪತಿ ಹೆಗಡೆ

ದಿನೇಶ ರಾಯರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಮಡದಿ ವಿಶಾಲಾಕ್ಷಿಗೂ ಏನೋ ಮನೋವೇದನೆಯಾಗಿದೆ. ಇಡೀ ಪರಿವಾರ ದಿಕ್ಕು ತೋಚದಂತಾಗಿದೆ. ಇದಕ್ಕೆಲ್ಲ ಕಾರಣ ರಾಯರ ಮಗಳು ತನಗಿಷ್ಟದ ಹುಡುಗನೊಂದಿಗೆ ಮದುವೆಯಾಗುವೆನೆಂಬ ಹಟ ಹಿಡಿದದ್ದು. ಇದ್ದ ಒಬ್ಬಳೇ ಮಗಳನ್ನು ಪ್ರೀತಿಯಿಂದ ಸಾಕಿಸಲಹಿ, ವಿದ್ಯಾಭ್ಯಾಸವನ್ನು ಕೊಟ್ಟು ಅವಳಿಷ್ಟದ ಕಂಪನಿಯಲ್ಲಿ ಉದ್ಯೋಗವನ್ನೂ ಮಾಡಿಸಿಕೊಟ್ಟು ಇನ್ನೇನು ಮದುವೆಯ ವಿಚಾರವನ್ನು ಮಾಡಬೇಕೆನ್ನುವಷ್ಟರಲ್ಲಿ ಇದೊಂದು ವಿಷಯ ಅವರ ಕುಟುಂಬವನ್ನೇ ಅಲ್ಲೋಲ-ಕಲ್ಲೋಲ ಮಾಡಿಟ್ಟಿದೆ. ಕುಲ, ಗೋತ್ರ ಗೊತ್ತಿಲ್ಲದ ವ್ಯಕ್ತಿಯೊಂದಿಗೆ ಸಂಪರ್ಕ ಮಾಡುವುದು ರಾಯರಿಗೆ ಸುತರಾಂ ಇಷ್ಟವಾಗಲಿಲ್ಲ. ಅವರು ಆಪ್ತ ನರಹರಿಯವರಲ್ಲಿ ಈ ವಿಷಯವನ್ನು ಹಂಚಿಕೊಂಡರು.

ನರಹರಿಯವರು ಸೌಮ್ಯಳನ್ನು ಏಕಾಂತದಲ್ಲಿ ಕರೆದು ಪ್ರೀತಿಯಿಂದ ಮಾತಾಡಿಸಿದರು. ಅವಳದೋ ದೃಢವಾದ ನಿರ್ಧಾರ. ‘ಸರಿ ಸೌಮ್ಯಾ, ನಿನ್ನ ನಿರ್ಧಾರ ದೃಢವಾಗಿದ್ದರೆ ಯಾರೇನು ಮಾಡಲೂ ಸಾಧ್ಯವಿಲ್ಲ. ನಿನ್ನಿಷ್ಟದಂತೆಯೇ ಆಗಲಿ. ಅದು ಸರಿ, ಅವನ ಮನೆತನದ ಬಗ್ಗೆ ಒಂದಿಷ್ಟು ಹೇಳು’ ಅಂದಾಗ ‘ಅದು ಗೊತ್ತಿಲ್ಲ, ನನಗೆ ಕೇವಲ ಅವನು ಪರಿಚಯ ಅಷ್ಟೇ’ ಎಂದು ತಡವರಿಸಿದಳು.ಅವನ ಮನೆತನ, ಹಿನ್ನೆಲೆ, ಅವನ ಚಾರಿತ್ರ್ಯ, ಉದ್ಯೋಗ, ಬಂಧುಗಳು, ಅವನ ಭವಿಷ್ಯ ಇದ್ಯಾವುದರ ಬಗ್ಗೆ ನಿನಗೆ ತಿಳಿದಿದೆ ಹೇಳು ಎಂದಾಗ ಸೌಮ್ಯಾ ಸ್ತಬ್ಧಳಾದಳು. ಯಾಕೆಂದರೆ ಇವಾವವೂ ಅವಳಿಗೆ ಗೊತ್ತಿರಲಿಲ್ಲ. ಹುಡುಗನ ಬಾಹ್ಯಸೌಂದರ್ಯ ಮಾತ್ರವೇ ಅವಳ ಪ್ರೀತಿಗೆ ಕಾರಣವಾಗಿತ್ತು. ‘ನೀನು ವಿದ್ಯಾವಂತಳಾಗಿ, ವಿವೇಕವಂತಳಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಮುಂದಾಗುವ ಎಲ್ಲ ಅನಾಹುತಗಳಿಗೂ ನೀನೇ ಕಾರಣಳಾಗಬೇಕಾಗುತ್ತದೆ. ವರನಲ್ಲಿ ಎಷ್ಟೊಂದು ಒಳ್ಳೆಯ ಗುಣಗಳಿರಬೇಕು. ಅಂತಹ ಗುಣಗಳಿದ್ದು, ಸತ್ಪಾತ್ರನಾಗಿದ್ದರೆ ಮಾತ್ರವೇ ನಿನ್ನ ತಂದೆ ಕನ್ಯಾದಾನ ಮಾಡಬಹುದು. ಇಲ್ಲದಿದ್ದರೆ ಅಪಾತ್ರರಿಗೆ ಕನ್ಯಾದಾನ ಮಾಡಿದ ಅಪಕೀರ್ತಿ ಅವರನ್ನಂಟಿಕೊಳ್ಳುತ್ತದೆ. ನಮ್ಮ ಹಿರಿಯರು ಶಾಸ್ತ್ರಾದಿಗಳಲ್ಲಿ ಎಷ್ಟು ಸ್ಪಷ್ಟವಾಗಿ ಹೇಳಿದ್ದಾರೆ ನೋಡು: ಕುಲಂ ಚ ಶೀಲಂ ಚ ವಪುಃ ವಯಶ್ಚ ವಿತ್ತಂ ಚ ವಿದ್ಯಾಂ ಚ ಸನಾಥತಾ ಚ|/ ಏತಾನ್ ಗುಣಾನ್ ಸಪ್ತ ಪರೀಕ್ಷ್ಯ ದೇಯಾ ಕನ್ಯಾ ಬುಧೈಃ ಶಿಷ್ಟಮಚಿಂತನೀಯಮ್|

ಹುಡುಗನ ಮನೆತನ, ಅವನ ಹಿನ್ನೆಲೆ, ನಡತೆ, ಚೆಲುವು, ಯೋಗ್ಯವಾದ ವಯಸ್ಸು, ಜೀವನ ನಿರ್ವಹಣೆಗೆ ಬೇಕಾದ ಸಂಪತ್ತು, ವಿದ್ಯೆ, ಭದ್ರತೆಯ ಭವಿಷ್ಯ, ಇವು ಏಳು ವಿಷಯಗಳು ತೃಪ್ತಿಕರವಾಗಿದ್ದಲ್ಲಿ ಅಂತಹ ವರನಿಗೆ ನಿಶ್ಚಿಂತೆಯಾಗಿ ಕನ್ಯೆಯನ್ನು ಕೊಡಬಹುದು. ನಮ್ಮ ಸಂಸ್ಕೃತಿಯಲ್ಲಿ ಮಾಂಗಲ್ಯದ ಸ್ಥಾನ ಮಹತ್ವದ್ದು, ಅಷ್ಟೇ ಪವಿತ್ರವಾದದ್ದು. ಮಾಂಗಲ್ಯವನ್ನು ಒಮ್ಮೆ ಗಂಟು ಹಾಕಬಹುದೇ ವಿನಃ ಬಿಚ್ಚಲು ಅವಕಾಶವಿಲ್ಲ. ಅಂದರೆ ವಿಚ್ಛೇದನವೇ ಮೊದಲಾದ ಅಪಸವ್ಯಗಳಿಗೆ ಅವಕಾಶವಿಲ್ಲ. ಕನ್ಯಾದಾನವು ಮಹಾದಾನಗಳಲ್ಲೊಂದು. ಅಂತಹ ದಾನ ಮಾಡುವಾಗ ಸತ್ಪಾತ್ರರನ್ನು ಆರಿಸುವ ಜವಾಬ್ದಾರಿಯನ್ನು ತಂದೆತಾಯಿಯರಿಗೆ ವಹಿಸಬೇಕು. ಹಾಗಾದಾಗ ನಮ್ಮ ಮುಂದಿನ ಜೀವನವನ್ನು ನಿಶ್ಚಿಂತೆಯಿಂದ ಕಳೆಯಬಹುದು. ಅದನ್ನು ಬಿಟ್ಟು ಕೇವಲ ರೂಪಕ್ಕೆ ಮರುಳಾಗಿ ಜೀವನವನ್ನು ಹಾಳುಮಾಡಿಕೊಳ್ಳಬಾರದಮ್ಮ’ ಎಂದು ನರಹರಿಯವರು ಹೇಳುವಷ್ಟರಲ್ಲಿ ಸೌಮ್ಯಳ ಕಣ್ಣಲ್ಲಿ ನೀರು ಜಿನುಗಿತು.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)