ಭಾಗ 1
ಸೋರೆಕಾಯಿಯ ಹೆಸರನ್ನು ಕೇಳದವರು ಯಾರೂ ಇರಲಿಕ್ಕಿಲ್ಲ. ಇದರ ಹೆಸರನ್ನು ಕೇಳುತ್ತಿದ್ದಂತೆಯೇ ಉದ್ದದ ಹಸುರಾಗಿರುವ ತರಕಾರಿಯ ನೆನಪಿಗೆ ಬರುತ್ತದೆ. ಬಳ್ಳಿಯಲ್ಲಿ ಬಿಡುವ ತರಕಾರಿಗಳಲ್ಲೊಂದಾದ ಸೋರೆಕಾಯಿಯು ಅಧಿಕ ಪ್ರಮಾಣದಲ್ಲಿ ನೀರಿನಂಶವನ್ನು ಹೊಂದಿದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾದಂತೆ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆಗ ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಇದನ್ನು ಪೂರೈಸಲು ಹೆಚ್ಚು ನೀರಿನಂಶ ಇರುವ ತರಕಾರಿ ಮತ್ತು ಹಣ್ಣುಗಳ ಸೇವನೆ ಅತ್ಯಗತ್ಯ. ಹೆಚ್ಚು ನೀರಿನಂಶವನ್ನು ಹೊಂದಿರುವ ಸೋರೆಕಾಯಿಯು ದೇಹವನ್ನು ತಂಪಾಗಿರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದು ಜೀರ್ಣಿಸಿಕೊಳ್ಳಲು ತುಂಬ ಸುಲಭವಾದ ತರಕಾರಿ. ಸೋರೆಕಾಯಿಯಲ್ಲಿ ರೈಬೊಫ್ಲೆವಿನ್, ಸತು, ಥೈಮೆನ್, ವಿಟಮಿನ್ ಎ, ಸಿ, ಸೋಡಿಯಂ, ಕ್ಯಾಲ್ಸಿಯಂ, ವಿಟಮಿನ್ ಬಿ6, ಪೊಟ್ಯಾಶಿಯಂ, ಪ್ರೋಟೀನ್ ಮತ್ತು ಕಾಬೋಹೈಡ್ರೇಟ್ಸ್ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ. ಜತೆಗೆ ನಾರಿನಾಂಶವೂ ಇದೆ. ಇದರಿಂದ ಸಾಂಬಾರ್, ಪಲ್ಯ, ಹುಳಿ, ಜ್ಯೂಸ್ ಸೇರಿ ನಾನಾ ಬಗೆಯ ಆಹಾರಪದಾರ್ಥಗಳನ್ನು ತಯಾರಿಸುತ್ತಾರೆ.
ಈ ಸಂದರ್ಭದಲ್ಲಿ ಒಂದು ಎಚ್ಚರಿಕೆಯ ಅಂಶವನ್ನೂ ಅರ್ಥಮಾಡಿಕೊಳ್ಳಬೇಕು. ಕಹಿಯಾದ ಸೋರೆಕಾಯಿಯಲ್ಲಿ ನಿರ್ದಿಷ್ಟ ಪ್ರಕಾರದ ವಿಷಕಾರಿ ಅಂಶವಿರುತ್ತದೆ. ಇದು ನಮ್ಮ ದೇಹವನ್ನು ಸೇರಿದರೆ ವಾಂತಿಯಾಗಿ ಸಾವು ಸಂಭವಿಸಬಹುದು. ಸೋರೆಕಾಯಿ ಜ್ಯೂಸ್ ಸೇವಿಸಿದ್ದರಿಂದ 2010ರಲ್ಲಿ ಒಬ್ಬ ವಿಜ್ಞಾನಿ ತೀರಿಕೊಂಡಿದ್ದರು. ಅವರ ಪತ್ನಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಸೋರೆಕಾಯಿ ಕಹಿಯಾಗಿದ್ದರೆ ಅದನ್ನು ಅಡುಗೆಗೆ ಬಳಸಲೇಬಾರದು.
* ಊಟಕ್ಕೆ ಮೊದಲು ಸೋರೆಕಾಯಿ ಜ್ಯೂಸ್ ಸೇವಿಸುವುದು ತೂಕ ಇಳಿಸಿಕೊಳ್ಳಲು ಸಹಕಾರಿ. * ಬೇಸಿಗೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿರಿಸಬಹುದು.
* ಅಧಿಕ ಕೊಲೆಸ್ಟ್ರರಾಲ್ನಿಂದ ಬಳಲುತ್ತಿರುವವರಿಗೆ ಇದು ಉತ್ತಮ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಸೇವಿಸುವುದರಿಂದ ಬೊಜ್ಜು ಬೇಗ ಕರಗುತ್ತದೆ. * ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡಬಹುದು.
* ನಿಂಬೆರಸ ಸೇರಿಸಿದ ಸೋರೆಕಾಯಿ ಜ್ಯೂಸ್ ಕುಡಿದರೆ ಮೂತ್ರ ಉರಿ ಸಮಸ್ಯೆ ಪರಿಹಾರವಾಗುತ್ತದೆ.