ಪ್ರಾಣವಾಯುವಿನಲ್ಲಿರುವ ವಿದ್ಯುತ್ತಿನಂಥ ಶಕ್ತಿ ಅಥವಾ ಔಜಸ್ಸನ್ನು ವಿವಿಧ ನಾಡಿಗಳಿಗೆ, ಧಮನಿಗಳಿಗೆ ಸಾಗಿಸುವ ಸಾಧನಗಳೇ ಈ ಚಕ್ರಗಳು. ಇವು ಚೆನ್ನಾಗಿ ಕೆಲಸ ಮಾಡಿದರೆ ಪ್ರಾಣಶಕ್ತಿಯ ವಿತರಣಾಕಾರ್ಯ ಸಮರ್ಪಕವಾಗಿ ಆಗುತ್ತವೆ. ಇವು ದೂಷಿತಗೊಂಡರೆ ಈ ಕೆಲಸ ಕುಂಟುತ್ತದೆ. ಪ್ರಾಣಾಯಾಮ, ಮುದ್ರೆ, ಬಂಧ, ಕ್ರಿಯೆಗಳಿಂದ ಇದನ್ನು ದೂಷಿತವಾಗದಂತೆ ನೋಡಿಕೊಳ್ಳಬಹುದು ಎನ್ನುತ್ತವೆ ಯೋಗಶಾಸ್ತ್ರ.
ಈ ನಿರ್ನಾಳ ಗ್ರಂಥಿಗಳು ಸರ್ವಾಂಗ ವ್ಯೂಹದ ರಕ್ಷಣೆ ಮಾಡುತ್ತ ಇತರ ಅಂಗಗಳು ಹಾಗೂ ಮಿದುಳಿಗೆ ಪೋಷಣೆಯನ್ನು ನೀಡುತ್ತವೆ. ಬದಲಾಗುವ ಪರಿಸರಕ್ಕೆ ಅನುಗುಣವಾಗಿ ಎಲ್ಲ ಗುಣವಿಶೇಷಗಳು ಸಮತೋಲನ ಸಾಧ್ಯವಾಗುವುದು ಇವುಗಳಿಂದಲೇ. ಮನೋಧರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾಗುವುದು ಅಥವಾ ಪರಿಹಾರವಾಗುವುದು ಇವುಗಳ ಪ್ರಭಾವದಿಂದಲೇ. ಈ ನಿರ್ನಾಳ ಗ್ರಂಥಿಗಳು (ಚಕ್ರ) ನಮ್ಮ ಕ್ಷೇಮಕರವಾದ ಜೀವನಕ್ಕೆ ಹಾಗೂ ಸುಖಪ್ರಾಪ್ತಿಗೆ ಪ್ರಧಾನಪಾತ್ರವಾಗಿ ನೆರವಾಗುವುವು.
ಈ ಗ್ರಂಥಿಗಳು ಉತ್ಪಾದಿಸುವ ಚೈತನ್ಯರಸಗಳು ನಮ್ಮ ಎಲ್ಲ ಶಾರೀರಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ವಯಸ್ಸು ಹೆಚ್ಚಿದಂತೆ ಶರೀರದಲ್ಲಿನ ಕೋಶಗಳು ಹಾಗೂ ಅಂಗಗಳಲ್ಲಿ ಕ್ರಮೇಣ ಬರುವ ದುರ್ಬಲತೆಯಿಂದಾಗಿಯೇ ಆ ಚೈತನ್ಯರಸವೂ ದುರ್ಬಲವಾಗಿ ಮನುಷ್ಯನಿಗೆ ಮುಪ್ಪು ಬರುತ್ತದೆ ಎಂದು ಇತ್ತೀಚಿನ ಸ್ವಾಸ್ಥ್ಯ ಅನುಸಂಧಾನಗಳು ಬಲವಾದ ಸಾಕ್ಷ್ಯಾಧಾರಗಳೊಡನೆ ಬಹಿರಂಗಪಡಿಸಿವೆ.
ನಾವಿಲ್ಲಿ ಹೇಳಲಿರುವ ಹಿಮಾಲಯ ಯೌಗಿಕ ಕ್ರಿಯೆಗಳು ಶರೀರಿದ ಈ ಏಳು ಚಕ್ರಗಳಲ್ಲಿ ಕಾಣುವ ಅಸಮತೋಲನವನ್ನು ದೂರಮಾಡಿ ಚೈತನ್ಯರಸವು ಮತ್ತೊಮ್ಮೆ ಸಹಜವಾಗಿ ಹರಿಯುವಂತೆ ಮಾಡುತ್ತವೆ. ಇದರಿಂದಾಗಿ ಶರೀರಿದ ಕೋಶಗಳು ಬೆಳೆಯುತ್ತವೆ. ಶಕ್ತಿಶಾಲಿಗಳೂ ಆಗುತ್ತವೆ. ವ್ಯಕ್ತಿಗೂ ತಾನು ದಿನದಿನಕ್ಕೆ ‘ತರುಣ’ನಾಗುತ್ತಿರುವ ಅನುಭವ ಬರುತ್ತದೆ.
ಸಹಜ ಆರೋಗ್ಯವಿರುವ ದೇಹದಲ್ಲಿ ಈ ಚೈತನ್ಯ ಕೇಂದ್ರಗಳು ಅಥವಾ ಚಕ್ರಗಳು ಬಹುವೇಗದಲ್ಲಿ ತಿರುಗುತ್ತ ಪ್ರಾಣಶಕ್ತಿಯು (ಇದನ್ನು ಕುಂಡಲಿನೀ ಶಕ್ತಿ ಎಂದೂ ಹೇಳುತ್ತಾರೆ) ಈ ನಿರ್ನಾಳ ಗ್ರಂಥಿಗಳ ಮೂಲಕ ಮೇಲಕ್ಕೆ ಏರುವಂತೆ ಮಾಡುತ್ತವೆ. ಆದರೆ ಈ ಚಕ್ರಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಚಕ್ರಗಳ ವೇಗ ಕಡಿಮೆ ಆದಾಗ ಪ್ರಾಣಶಕ್ತಿಯ ಸಹಜ ಪ್ರವಾಹಕ್ಕೆ ಅಡಚಣೆ ಆಗುತ್ತದೆ ಅಥವಾ ತಡೆಯುಂಟಾಗುತ್ತದೆ. ವಾಸ್ತವವಾಗಿ ಇದೇ ಕಾರಣದಿಂದ ಶರೀರದಲ್ಲಿ ರೋಗವೂ ಬರುತ್ತದೆ. ಮುಪ್ಪು ಬರಲೂ ಇದೇ ಕಾರಣವಾಗುತ್ತದೆ.
ಶರೀರ ಬಹುಕಾಲ ಆರೋಗ್ಯವಾಗಿ ಉಳಿಯಬೇಕು. ಮುಪ್ಪುಬರಬಾರದು ಅಥವಾ ಮುಪ್ಪು ಬರುವುದನ್ನು ನಿಧಾನ ಮಾಡಲು ಇರುವ ಒಂದೇ ಉಪಾಯ - ಈ ಚಕ್ರಗಳು ಮತ್ತೊಮ್ಮೆ ಸ್ವಾಭಾವಿಕ ವೇಗದಲ್ಲಿ ಸುತ್ತುವಂತೆ ಮಾಡುವುದು. ಹಿಮಾಲಯ ಯೌಗಿಕ ಕ್ರಿಯೆಗಳನ್ನು ನಿತ್ಯವೂ ಮಾಡುತ್ತ ಬಂದಲ್ಲಿ ಈ ಚಲನೆಗಳು ಸಹಜವಾಗುತ್ತವೆ. ಆದ್ದರಿಂದ, ಈ ಕ್ರಿಯೆಗಳ ಮೂಲಕ ಲಾಭ ಪಡೆಯಲು ಇಚ್ಛಿಸುವವರು ಪ್ರತಿನಿತ್ಯವೂ ಸ್ವಲ್ಪ ಸಮಯ ಹಾಗೂ ಶಕ್ತಿಗಳನ್ನು ಈ ಕ್ರಿಯೆಗಳಿಗಾಗಿ ಮೀಸಲಿಡಬೇಕು. ಇವುಗಳನ್ನು ಶುದ್ಧ ಮನಸ್ಸಿನಿಂದ ಅಭ್ಯಾಸ ಮಾಡಬೇಕು. ಪ್ರತಿನಿತ್ಯವೂ ಬೆಳಗ್ಗೆ ಅಥವಾ ಸಂಜೆ ಸುಮಾರು 20 ನಿಮಿಷಗಳನ್ನು ಈ ಕ್ರಿಯೆಗಳಿಗಾಗಿ ವಿನಿಯೋಗಿಸಿ ನೋಡಿ. ನಿಮಗೇ ಅನುಭವ ಉಂಟಾಗುತ್ತದೆ.