ಲೈಫ್‌ಸ್ಟೈಲ್

ಕೆಳಬೆನ್ನಿಗೆ ವಿಶ್ರಾಂತಿ ನೀಡುವ ಭಂಗಿ ಮಕರಾಸನ

kumarvrl

ಬೆನ್ನ ಕೆಳಗೆ ವಿಪರೀತ ನೋವು. ಯೋಗದ ಮೂಲಕ ಪರಿಹಾರ ತಿಳಿಸಿ.

| ಡೇನಿಸ್ ಫೆರ್ನಾಂಡಿಸ್ ಮಂಗಳೂರು

ಕೆಳಬೆನ್ನು ಅನೇಕ ಜನರಿಗೆ ಸೂಕ್ಷ್ಮ ಭಾಗವಾಗಿದೆ. ಕೆಳಬೆನ್ನುನೋವಿಗೆ ಹಲವಾರು ಕಾರಣಗಳಿವೆ. ಕಚೇರಿಯಲ್ಲಿ ದಿನವಿಡೀ ಕುಳಿತುಕೊಳ್ಳುವುದು, ಕಳಪೆ ಭಂಗಿಯಲ್ಲಿರುವುದು, ಕೆಳಬೆನ್ನು ಮತ್ತು ಸೊಂಟವನ್ನು ಅತಿಯಾಗಿ ಬಳಕೆ (ಕೆಲಸ) ಮಾಡುವುದು. ಈ ನೋವುಗಳು ಸಾಮಾನ್ಯವಾಗಿದ್ದರೂ ನಿರ್ಲಕ್ಷಿಸಬಾರದು.

ಇದಕ್ಕೆ ಸ್ವಲ್ಪ ಸೌಮ್ಯವಾದ ಯೋಗ ಮಾಡುವುದರಿಂದ ಬಿಗಿತವನ್ನು ನಿವಾರಿಸಲು ಸಹಾಯವಾಗುತ್ತದೆ. ಕೆಳಬೆನ್ನಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ. ತೀವ್ರವಾದ ನೋವು ಇದ್ದಾಗ ಹೆಚ್ಚು ಯೋಗ ಬೇಡ. ಅದರೂ ಕುರ್ಚಿಯಲ್ಲಿ ಕುಳಿತು ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ, ಕುತ್ತಿಗೆ ಮತ್ತು ಭುಜಗಳ ವ್ಯಾಯಾಮ, ಕೈಗಳ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ. ನಿಂತುಕೊಂಡು ಗೋಡೆಗೆ ಒರಗಿ ತಾಡಾಸನ, ಅರ್ಧಕಟಿಚಕ್ರಾಸನ, ಮಲಗಿಕೊಂಡು ಉತ್ಥಿತ ಏಕಪಾದಾಸನ, ಸೇತುಬಂಧ ಮಕರಾಸನ, ಶಲಭಾಸನ, ಶವಾಸನ ಮಾಡಿ ಹಾಗೂ ತಲಾ ಹತ್ತು ನಿಮಿಷದ ಪ್ರಾಣಾಯಾಮ, ಧ್ಯಾನ ಮಾಡಿ ಹಾಗೂ ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಮಕರಾಸನದ ಬಗ್ಗೆ ಮಾಹಿತಿ ತಿಳಿಸಿ.

| ನೀರಜಾ ಚಿಕ್ಕಪೇಟೆ (48 ವರ್ಷ)

ಮಕರ ಎಂದರೆ ಮೊಸಳೆ. ಆಸನ ಎಂದರೆ ಭಂಗಿ. ಈ ಭಂಗಿಯು ನೀರಿನಲ್ಲಿ ಮೊಸಳೆಯು ವಿಶ್ರಾಂತಿ ತೆಗೆದುಕೊಳ್ಳುವು ದನ್ನು ಹೋಲುತ್ತದೆ. ಅದರ ಮುಖ ಮತ್ತು ಕುತ್ತಿಗೆ ನೀರಿನ ಮಟ್ಟಕ್ಕಿಂತ ಮೇಲಿರುತ್ತದೆ (ಮೇಲ್ಮೈ).

ವಿಧಾನ: ಜಮಖಾನೆಯ ಮೇಲೆ ಕವುಚಿ ಮಲಗಿರಿ. ಆಮೇಲೆ ಕಾಲುಗಳನ್ನು ಎರಡು ಅಡಿಗಳಷ್ಟು ವಿಸ್ತರಿಸಿ. ಕಾಲ ಬೆರಳುಗಳು ಹೊರಮುಖವಾಗಿದ್ದು ನೆಲಕ್ಕೆ (ಜಮಖಾನೆಗೆ) ತಾಗಿರಲಿ. ಎರಡೂ ಕೈಗಳನ್ನು ಕಟ್ಟಿ ಗಲ್ಲವನ್ನು ಕೈಗಳ ಮೇಲಿರಿಸಿ. ಎಡ ಅಥವಾ ಬಲಬದಿಯ ತಲೆ, ಕೆನ್ನೆಯನ್ನು ಕೈಗಳ ಮೇಲಿರಿಸಬಹುದಾಗಿದೆ. 3ರಿಂದ 5 ನಿಮಿಷ ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಿರಿ ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಿ. ಈ ಆಸನದಲ್ಲಿ ಪರಿಣತಿ ಹೊಂದಿದ ನಂತರ ಸ್ವಲ್ಪ ಹೊತ್ತು ಮನಃಪೂರ್ವಕವಾಗಿ ಸಮ ಉಸಿರಾಟವನ್ನೇ ಗಮನಿಸುತ್ತಿರಿ. ಮನಸ್ಸಿನ ಒತ್ತಡ ಮತ್ತು ಬೆನ್ನುನೋವು ಇದ್ದವರು ಈ ಆಸನವನ್ನು ದಿನಕ್ಕೆ 3-4 ಬಾರಿ ಮಾಡಿ.

ಪ್ರಯೋಜನ: ಭುಜ, ಬೆನ್ನುಮೂಳೆಗೆ ಆಳವಾದ ವಿಶ್ರಾಂತಿ. ಸ್ಲಿಪ್ ಡಿಸ್ಕ್, ಸ್ಪಾಂಡಿಲೈಟಿಸ್ ಮತ್ತು ಸಿಯಾಟಿಕಾವನ್ನು ನಿಯಂತ್ರಿಸಲು ಸಹಕಾರಿ. ಸೊಂಟದ ಸ್ನಾಯುಗಳ ವಿಸ್ತರಣೆ. ದೇಹವನ್ನು ಸಂಪೂರ್ಣವಾಗಿ ಸಡಿಲಗೊಳಿಸುತ್ತದೆ. ಇದು ದೇಹ ಮತ್ತು ಮನದ ಉದ್ವೇಗವನ್ನು ನಿವಾರಿಸುತ್ತದೆ. ಅಸ್ತಮಾ, ಕೆಮ್ಮು, ಮೊಣಕಾಲು ನೋವು, ಬೆನ್ನುನೋವು ನಿಯಂತ್ರಣವಾಗುತ್ತದೆ. ದೇಹದಲ್ಲಿನ ಬಿಗಿಯಾದ ಗಂಟುಗಳನ್ನು ಸಡಿಲ ಮಾಡುತ್ತದೆ. ಗಮನಿಸಿ, ಬೆನ್ನು, ಕುತ್ತಿಗೆ, ಕಾಲುಗಳಿಗೆ ಗಾಯವಾಗಿದ್ದರೆ ಅಭ್ಯಾಸ ಬೇಡ. ಅಗತ್ಯವಿದ್ದಲ್ಲಿ ದಪ್ಪ ಜಮಖಾನೆಯಲ್ಲಿ ಅಭ್ಯಾಸ ಮಾಡಿ.