| ಶಿವರಾಂ, 48 ವರ್ಷ, ಮಂಗಳೂರು
ತಪ್ಪಾದ ಜೀವನಶೈಲಿ, ಅನಾರೋಗ್ಯಕರ ಆಹಾರಪದ್ಧತಿ, ವ್ಯಾಯಾಮದ ಕೊರತೆ ಮತ್ತು ಹೆಚ್ಚಿನ ಒತ್ತಡಗಳು ಇತ್ಯಾದಿ ಕಾರಣಗಳು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಯೋಗವನ್ನು ಸಾಂಪ್ರದಾಯಿಕವಾಗಿ ಏರೋಬಿಕ್ ವ್ಯಾಯಾಮವೆಂದು ಪರಿಗಣಿಸಲಾಗದಿದ್ದರೂ, ಕೆಲವು ವಿಧದ ಯೋಗಗಳು ಇತರ ಪದ್ಧತಿಗಳಿಗಿಂತ ಹೆಚ್ಚು ಭೌತಿಕವಾಗಿವೆ. ಯೋಗದ ಸಕ್ರಿಯ, ತೀವ್ರವಾದ ಶೈಲಿಗಳು ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತವೆ.
ಹೊಟ್ಟೆಯ ಕೊಬ್ಬು ಸೇರಿದಂತೆ ಅಧಿಕ ತೂಕ ಹೊಂದಿರುವವರಿಗೆ ತೂಕ ಇಳಿಸಿಕೊಳ್ಳಲು ಯೋಗವು ಪರಿಣಾಮಕಾರಿಯಾಗಿದೆ. ದಿನಚರಿಯಲ್ಲಿ ಯೋಗದೊಂದಿಗೆ ಸರಿಯಾದ ಆಹಾರಕ್ರಮ, ಉತ್ತಮ ಫಿಟ್ನೆಸ್ ಸೇರಿದರೆ, ಹೊಟ್ಟೆಯ ಕೊಬ್ಬನ್ನು ಬೇಗನೆ ಕಡಿಮೆ ಮಾಡಲು ಸಹಾಯವಾಗುತ್ತದೆ. ಒಮ್ಮೆ ಯೋಗಚಿಕಿತ್ಸಕರೊಂದಿಗೆ ಸಮಾಲೋಚಿಸಿ ಅಭ್ಯಸಿಸಿ. ಎಲ್ಲರಿಗೂ ಎಲ್ಲ ಬಗೆಯ ವ್ಯಾಯಾಮಗಳು ಹಾಗೂ ಯೋಗ ಸೂಕ್ತವಾಗುವುದಿಲ್ಲ. ನಿಮ್ಮ ದೈಹಿಕ ಮತ್ತು ವೈದ್ಯಕೀಯ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂದು ಸೂಕ್ತವಾದ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ.
ಹೊಟ್ಟೆಯ ಬೊಜ್ಜನ್ನು ಕರಗಿಸಲು ಯಾವ ಆಸನಗಳು ಸೂಕ್ತವಾಗಿವೆ? ಇದರೊಂದಿಗೆ ಯಾವ ಯಾವ ಮುದ್ರೆಗಳನ್ನು ಅಭ್ಯಾಸ ಮಾಡಬೇಕು?
| ವರ್ಮ, 35 ವರ್ಷ, ಬೆಂಗಳೂರು
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಎಲ್ಲ ಬಗೆಯ ಜಂಕ್ ಆಹಾರಗಳ ಸೇವನೆಯನ್ನು ಬಿಟ್ಟು ಆರೋಗ್ಯಕರ ಆಹಾರಕ್ಕೆ ಬದಲಾಗಬೇಕು.
ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ಉತ್ಥಿತ ಪಾರ್ಶ್ವಕೋಣಾಸನ, ಪಶ್ಚಿಮೋತ್ಥಾನಾಸನ, ಮಂಡೂಕಾಸನ, ಉಷ್ಟ್ರಾಸನ, ನೌಕಾಸನ, ಊರ್ಧ್ವಪ್ರಸಾರಿತ ಪಾದೋತ್ಥಾನಾಸನ, ಜಠರ ಪರಿವರ್ತನಾಸನ, ಪವನಮುಕ್ತಾಸನ, ಹಲಾಸನ, ಭುಜಂಗಾಸನ, ಧನುರಾಸನ, ಚಕ್ರಾಸನ, ಶವಾಸನ, ಆರಂಭದಲ್ಲಿ ಸಾಧ್ಯವಾಗುವ ವ್ಯಾಯಮಗಳು, ಸೂರ್ಯನಮಸ್ಕಾರಗಳನ್ನು ಅಭ್ಯಾಸ ಮಾಡಿ. ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮಗಳು ಕೂಡ ಈ ನಿಟ್ಟಿನಲ್ಲಿ ಸಹಕಾರಿಯಾಗುತ್ತವೆ.
ಸೂಚಿತ ಮುದ್ರೆಗಳು: ಸೂರ್ಯಮುದ್ರೆ, ಮಹಾಸೂರ್ಯ ಮುದ್ರೆ, ಪ್ರಾಣ ಮುದ್ರೆ.
ಸೂಚನೆ: ಯೋಗಾಸನಗಳು ಹಾಗೂ ಯೋಗಮುದ್ರೆಗಳನ್ನು ಪರಿಣತ ಗುರುಗಳ ಮಾರ್ಗದರ್ಶನದಲ್ಲಿಯೇ ಕಲಿತುಕೊಂಡು ಅಭ್ಯಾಸ ಮಾಡಿ.