ಶೀತ, ಕೆಮ್ಮು ಕಡಿಮೆಯಾಗಲು ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ-ಆಸನಗಳು ಹೇಗೆ ಸಹಕಾರಿ?
| ಕಿಶೋರ್ ಉಡುಪಿ, 24 ವರ್ಷ
ಪ್ರಾಣಾಯಾಮಗಳು
ಭಸ್ತ್ರಿಕಾ, ಕಪಾಲಭಾತಿ, ಅನುಲೋಮ-ವಿಲೋಮ ಯಾ ನಾಡಿಶುದ್ಧಿ, ಉಜ್ಜಾಯೀ ಪ್ರಾಣಾಯಾಮ.
ಯೋಗಭಂಗಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿರುವ ಥೈಮಸ್ ಗ್ರಂಥಿಯ ಹಾಮೋನ್ಸ್ಗಳು ವೈರಸ್ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ. ಥೈಮಸ್ ಗ್ರಂಥಿಯನ್ನು ಉತ್ತೇಜಿಸಲು ಆಯ್ದ ಯೋಗಭಂಗಿಗಳು ಸಹಕಾರಿಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಎದೆಯ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಗ್ರಂಥಿಯು ಎದೆಯ ವಿಸ್ತರಣೆಯಿಂದ ಸಕ್ರಿಯಗೊಳ್ಳುತ್ತದೆ. ಈ ಕೆಳಗೆ ತಿಳಿಸಿದ ಆಸನಗಳು ಎದೆಯ ವಿಸ್ತರಣೆ ಹಾಗೂ ವ್ಯಕ್ತಿಯ ಆರೋಗಕ್ಕೆ ಸಹಕಾರಿಯಾಗುತ್ತವೆ.
ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ಪರ್ವತಾಸನ, ವೃಕ್ಷಾಸನ, ಅರ್ಧ ಉಷ್ಟ್ರಾಸನ, ಉತ್ಥಾನಪಾದಾಸನ, ಸೇತುಬಂಧ, ಸರ್ವಾಂಗಾಸನ, ಭುಜಂಗಾಸನ, ಧನುರಾಸನ, ಚಕ್ರಾಸನ, ಅಧೋಮುಖ ಶ್ವಾನಾಸನ, ಪರ್ಯಂಕಾಸನ, ಶವಾಸನ ಇತ್ಯಾದಿಗಳು.
ಯೋಗವನ್ನು ಯಾವ ಹೊತ್ತಿನಲ್ಲಿ ಎಷ್ಟು ಹೊತ್ತು ಅಭ್ಯಾಸ ಮಾಡಬೇಕು?
| ವಿಷ್ಣು ಸುಳ್ಯ, 30 ವರ್ಷ
ಯೋಗವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ (ಮುಂಜಾನೆ ಉತ್ತಮ ಸಮಯ). ಎರಡನೆ ಸಮಯ ಸೂರ್ಯಾಸ್ತದ ಆಸುಪಾಸಿನಲ್ಲಿ. ಯೋಗವನ್ನು ಕನಿಷ್ಠ ಮೂವತ್ತು ನಿಮಿಷ ಅಭ್ಯಾಸ ಮಾಡಿ. ಒಂದು ಗಂಟೆಯ ಹೊತ್ತಿನ ಅಭ್ಯಾಸ ಮಾಡಿದರೆ ತುಂಬ ಉತ್ತಮ. ಗುರುಮುಖೇನ ಯೋಗದ ಮಾಹಿತಿ ಅರಿತು, ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಿ.