ಲೈಫ್‌ಸ್ಟೈಲ್

ಕಿಬ್ಬೊಟ್ಟೆಯ ಕೊಬ್ಬು ಕರಗಿಸುವ ಯೋಗಾಭ್ಯಾಸ

kumarvrl

ನನಗೆ ಕಿಬ್ಬೊಟ್ಟೆಯಲ್ಲಿ ತುಂಬ ಬೊಜ್ಜು ಇದೆ. ವಾಕಿಂಗ್ ಮಾಡುತ್ತೇನೆ. ಆದರೂ ಪರಿಹಾರ ಆಗಿಲ್ಲ. ಯೋಗದ ಪರಿಹಾರ ತಿಳಿಸಿ. ಆಹಾರಪದ್ಧತಿಯನ್ನೂ ತಿಳಿಸಿ.

| ಅರುಣ್​ಕುಮಾರ್ ವೈ. 52 ವರ್ಷ, ಸೌದಿ ಅರೇಬಿಯಾ

ಅಗತ್ಯ ವ್ಯಾಯಾಮದ ಕೊರತೆ, ತಪ್ಪಾದ ಜೀವನಶೈಲಿ, ಅನಾರೋಗ್ಯಕರ ಆಹಾರಪದ್ಧತಿ, ಹೆಚ್ಚಿನ ಒತ್ತಡ ಮಟ್ಟಗಳು ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತವೆ. ಕಿಬ್ಬೊಟ್ಟೆಯ ಶಕ್ತಿಯ ಕೊರತೆಯು ಸಾಮಾನ್ಯವಾಗಿ ಅಲ್ಪಪ್ರಮಾಣದ ಬೆನ್ನುನೋವಿನ ರೂಪದಲ್ಲಿ ಪ್ರಕಟವಾಗುತ್ತದೆ. ಸರಿಯಾದ ಆಹಾರಕ್ರಮ, ಉತ್ತಮ ಫಿಟ್​ನೆಸ್ (ಯೋಗ, ವ್ಯಾಯಾಮಗಳು) ದಿನಚರಿಯೊಂದಿಗೆ ಸೇರಲಿ. ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಯಾವುದೇ ಶಾರ್ಟ್​ಕಟ್​ಗಳಿಲ್ಲ. ಆಯ್ದ ವ್ಯಾಯಾಮಗಳು, ಸೂರ್ಯನಮಸ್ಕಾರ, ಆಸನಗಳು ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆಸನಗಳಲ್ಲಿ ಮುಖ್ಯವಾಗಿ ಪಾದಹಸ್ತಾಸನ, ಪಾಶ್ವೋತ್ಥಾನಾಸನ, ಪಶ್ಚಿಮೋತ್ಥಾನಾಸನ, ಶಶಾಂಕಾಸನ, ಮಂಡೂಕಾಸನ, ಊರ್ಧ್ವಪ್ರಸಾರಿತ ಪಾದಾಸನ, ಜಠರ ಪರಿವರ್ತನಾಸನ, ಹಲಾಸನ, ಭುಜಂಗಾಸನ, ಚಕ್ರಾಸನ, ಶವಾಸನ ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ.

ಆಹಾರಪದ್ಧತಿ: ಸತ್ವಯುತವಾದ ಸಾತ್ವಿಕ ಆಹಾರವನ್ನು ಹಸಿವಾದಾಗಲೇ ತಿನ್ನಿ. ಆಹಾರಸೇವನೆಯ ಸಂದರ್ಭದಲ್ಲಿ ಬಾಯಿಮುಚ್ಚಿ ಜಗಿದು ಸೇವಿಸಿ. ಪೋಷಾಂಕಾಂಶಗಳನ್ನು ತಿನ್ನಿ. ಹಸಿವೆ ಇಲ್ಲದ ಸಮಯದಲ್ಲಿ ಆಹಾರಸೇವನೆ ಬೇಡ. ಅತೀ ಹುಳಿ, ಅತೀ ಖಾರ, ಅತೀ ಮಸಾಲೆಯುಕ್ತ ಆಹಾರ ಬೇಡ.

ನನಗೆ ಎರಡು ವರ್ಷಗಳಿಂದ ಉಬ್ಬಿರುವ ರಕ್ತನಾಳಗಳ ತೊಂದರೆ ಇದೆ. ನಾನು ವಜ್ರಾಸನ, ಪ್ರಾಣಾಯಾಮ ಮಾಡುತ್ತೇನೆ. ಈ ಸಮಸ್ಯೆ ಪರಿಹರಿಸಲು ಯಾವ ಯೋಗಾಸನಗಳು ಉತ್ತಮ ತಿಳಿಸಿ.

| ವೆಂಕಟೇಶ್ 65 ವರ್ಷ, ಬೆಂಗಳೂರು

ಉಬ್ಬಿರುವ ರಕ್ತನಾಳಗಳ (ವೆರಿಕೋಸ್ ವೆಯಿನ್ಸ್) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಯೋಗವು ಸಹಕಾರಿಯಾಗುತ್ತದೆ. ಉಬ್ಬಿರುವ ರಕ್ತನಾಳಗಳು ಹೃದಯಕ್ಕೆ ಅನಿಯತ ರಕ್ತ ಪೂರೈಕೆಯಿಂದಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಬೊಜ್ಜು, ಅಧಿಕ ತೂಕ, ಅನುವಂಶಿಕತೆ, ಹಾಮೋನುಗಳ ಬದಲಾವಣೆಗಳು, ಜಡ ಜೀವನ ಶೈಲಿ, ಹೆಚ್ಚು ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆ ಕೊರತೆ ಇತ್ಯಾದಿಗಳು ಇದಕ್ಕೆ ಕಾರಣ. ಆದ್ದರಿಂದ ನಿಮ್ಮ ವೆರಿಕೋಸ್ ವೆಯಿನ್ಸ್​ಗೆ ಹೆಚ್ಚಿನ ಶಕ್ತಿ ಯೋಗಕ್ಕೆ ಇಲ್ಲವಾದರೂ ಅವುಗಳನ್ನು ನಿರ್ವಹಿಸಲು ಯೋಗ ಸಹಕಾರಿ. ಕಾಲಿನ ಊತ, ನೋವು ನಿಯಂತ್ರಣಕ್ಕೆ ಸ್ಟ್ರೆಚಿಂಗ್ (ಎಳೆತಕ್ಕೆ) ಯೋಗಾಸನಗಳು ಸಹಕಾರಿಯಾಗುತ್ತವೆ. ಕಾಲುಗಳನ್ನು ವಿಸ್ತರಿಸುವ ಆಸನಗಳು, ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತನಾಳಗಳ ಒತ್ತಡವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಂಗ್ರಹವಾದ ದುಗ್ಧರಸ ಮತ್ತು ರಕ್ತವನ್ನು ಕಾಲಿನ ಎತ್ತರದ ಭಂಗಿಗಳು ಹೃದಯಕ್ಕೆ ಹರಿಯುವಂತೆ ಮಾಡುತ್ತವೆ. ಇದರಿಂದ ರಕ್ತಪರಿಚಲನೆ ಸುಗಮವಾಗುತ್ತದೆ.

ಸೂಚಿತ ಆಸನಗಳು: ಪರ್ವತ ಭಂಗಿ, ಬದ್ಧಕೋಣಾಸನ, ಉತ್ಥಿತ ಏಕಪಾದಾಸನ, ಊರ್ಧ್ವಪ್ರಸಾರಿತ ಪಾದಾಸನ, ಶಶಾಂಕಾಸನ, ಮಂಡೂಕಾಸನ, ಸರ್ವಾಂಗಾಸನ, ಪಾದಹಸ್ತಾಸನ, ನೌಕಾಸನ, ಪವನಮುಕ್ತಾಸನ, ಶಲಭಾಸನ, ಚಕ್ರಾಸನ, ಶವಾಸನ ಹಾಗೂ ಇದರೊಂದಿಗೆ ತಲಾ ಹತ್ತು ನಿಮಿಷದ ನಾಡಿಶುದ್ಧಿ ಪ್ರಾಣಾಯಾಮ ಮತ್ತು ಧ್ಯಾನ ಮಾಡಿ. ಯೋಗಚಿಕಿತ್ಸಕರೊಂದಿಗೆ ಸಮಾಲೋಚಿಸಿ.