ನನಗೆ ದೀರ್ಘಕಾಲದಿಂದ ಮಲಬದ್ಧತೆ ಇದೆ. ಯೋಗ ಹಾಗೂ ಮುದ್ರೆಗಳ ಪರಿಹಾರಗಳನ್ನು ತಿಳಿಸಿ.
| ಎಂ.ಎಂ. ಬಳೆಗಾರ ರಾಣೆಬೆನ್ನೂರು (68 ವರ್ಷ)
ಹೆಚ್ಚು ವಯಸ್ಸಾದವರಲ್ಲಿ ದೀರ್ಘಕಾಲದ ಮಲಬದ್ಧತೆ ಇರುವ ಪ್ರಮುಖ ಕಾರಣಗಳೆಂದರೆ - ಕಳಪೆ ಆಹಾರ, ಮಧುಮೇಹ, ಸಾಕಷ್ಟು ದ್ರವ ಅಥವಾ ನೀರನ್ನು ಕುಡಿಯದಿರುವುದು, ದೈಹಿಕ ಚಟುವಟಿಕೆಯ ಕೊರತೆ, ಪ್ರಚೋದನೆಯನ್ನು ವಿರೋಧಿಸುವುದು ಇತ್ಯಾದಿ.
ಕರುಳಿನಲ್ಲಿ ರಕ್ತದ ಹರಿವು ಹೆಚ್ಚಿ ಆಹಾರ ಚಲನೆಗೆ ಸುಲಭವಾಗುತ್ತದೆ. ತಿರುಚುವಿಕೆ ಭಂಗಿಗಳು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನ ನೀಡುತ್ತದೆ. ಕೆಲವು ಮುಂದಕ್ಕೆ ಬಾಗುವ ಭಂಗಿಗಳಲ್ಲಿ ಪಶ್ಚಿಮೋತ್ಥಾನಾಸನ, ಮಂಡೂಕಾಸನ ಇತ್ಯಾದಿ ಅಭ್ಯಾಸ ನಡೆಸಿ. ನಿಯತವಾಗಿ ಆಸನಗಳನ್ನು ಮಾಡಿದರೆ ಜೀರ್ಣಕಾರಿ ಅಂಗಗಳಿಗೆ ಮಸಾಜ್ ಒದಗಿ ಮಲ ಚಲಿಸುವಂತೆ ಉತ್ತೇಜಿಸುತ್ತದೆ. ಆರೋಗ್ಯಕರ ಕರುಳಿನ ಚಲನೆ ಉಂಟಾಗುತ್ತದೆ. ಯೋಗದಿಂದ ಒತ್ತಡ ನಿಯಂತ್ರಣವಾಗಿ ನಿಮ್ಮ ಆರೋಗ್ಯ ಉತ್ತಮಗೊಳ್ಳುವುದು.
ಮುದ್ರೆಗಳು: ಅಪಾನ ಮುದ್ರೆ 30 ನಿಮಿಷ, ಹೃದಯಮುದ್ರೆ 10 ನಿಮಿಷ, ಪ್ರಾಣ ಮುದ್ರೆ 10 ನಿಮಿಷ ಮಾಡಿ.
ಬದ್ಧಕೋಣಾಸನದ ಬಗ್ಗೆ ಮಾಹಿತಿ ತಿಳಿಸಿ.
| ನೇತ್ರಾ ರಾಜು 38 ವರ್ಷ
ಇದು ಮಹಿಳೆಯರಿಗೆ ವರದಾನವಾಗಿರುವ ಭಂಗಿ. ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಿ. ನಂತರ ಎರಡೂ ಕಾಲಿನ ಪಾದಗಳನ್ನು ತೊಡೆಗಳ ಮೂಲದಲ್ಲಿ ಅಳವಡಿಸಿ ಕಾಲ್ಬೆರಳುಗಳನ್ನು ಎರಡು ಕೈಗಳಿಂದ ಹಿಡಿದು ಮೊಣಕಾಲುಗಳನ್ನು ಚಿಟ್ಟೆಯ ರೆಕ್ಕೆಗಳನ್ನು ಬಡಿಯುವಂತೆ ಮೇಲೆ ಕೆಳಕ್ಕೆ ತನ್ನಿ. ಈ ಸ್ಥಿತಿಯಲ್ಲಿ ಸುಮಾರು ಎರಡು ನಿಮಿಷದಿಂದ ಮೂರು ನಿಮಿಷದವರೆಗೆ ಸಹಜ ಉಸಿರಾಟದಲ್ಲಿ ಇರಿ. ವಿಶ್ರಮಿಸಿ. ಈ ರೀತಿ ಎರಡು ಬಾರಿ ಅಭ್ಯಾಸ ನಡೆಸಿ. ಆರಂಭದಲ್ಲಿ ನಿಧಾನವಾಗಿ ಅಭ್ಯಾಸ ನಡೆಸಿ. ಅಭ್ಯಾಸ ನಡೆಸುವಾಗ ಬೆನ್ನು ಕುತ್ತಿಗೆ ಶಿರಸ್ಸು ನೇರವಾಗಿರಲಿ.
ಉಪಯೋಗ: ಸೊಂಟದ ಸುತ್ತಲಿನ ಮತ್ತು ಗರ್ಭಾಶಯದ ಭಾಗಗಳಿಗೆ ಉತ್ತಮ ವ್ಯಾಯಾಮ ಹಾಗೂ ರಕ್ತ ಪರಿಚಲನೆ ಜರುಗಿ ಮುಟ್ಟಿನ ದೋಷ ನಿವಾರಣೆ. ಓವರೀಸ್, ಬ್ಲಾಡರ್ ಮತ್ತು ಕಿಡ್ನಿಯ ಅಂಗಗಳು ಪುನಶ್ಚೇತನಗೊಳ್ಳುತ್ತದೆ. ಪುರುಷರ ಪ್ರಾಸ್ಟೇಟ್ ಸಮಸ್ಯೆ ನಿಯಂತ್ರಣ. ಇಲ್ಲಿ ಪ್ರಮುಖವಾಗಿ ಹಿಪ್, ಕಾಲುಗಳೂ, ಹೊಟ್ಟೆ ಕೆಳಗಿನ ಸೊಂಟದ ಭಾಗಗಳು ಬಲಗೊಳ್ಳುತ್ತವೆ.