ಲೈಫ್‌ಸ್ಟೈಲ್

ಅಷ್ಟಾಂಗಯೋಗದ ನಿಯಮಗಳು

ಯೋಗಗದಲ್ಲಿನ ನಿಯಮ ಎಂದರೇನು? ಅಷ್ಟಾಂಗ ಯೋಗದಲ್ಲಿರುವ ನಿಯಮದ ಬಗ್ಗೆಯ ಮಾಹಿತಿ ತಿಳಿಸಿ.

| ತೃಪ್ತಿ ಮೈಸೂರು

ಮಹಾಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಎಂಟು ಮೆಟ್ಟಲುಗಳಿವೆ. ಅವು 1) ಯಮ 2) ನಿಯಮ 3) ಆಸನ

4) ಪ್ರಾಣಾಯಮ 5) ಪ್ರತ್ಯಾಹಾರ 6) ಧಾರಣ 7) ಧ್ಯಾನ ಮತ್ತು 8) ಸಮಾಧಿ

ಪತಂಜಲಿ ತನ್ನ ಯೋಗಸೂತ್ರಗಳಲ್ಲಿ ವಿವರಿಸಿದಂತೆ ನಿಯಮ ಆಧ್ಯಾತ್ಮಿಕ ಮಾರ್ಗದ ಎರಡನೇ ಅಂಗವಾಗಿದೆ. ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಮಾಡಬೇಕಾದ ಐದು ವಿಷಯಗಳನ್ನು ಪಟ್ಟಿ ಮಾಡುತ್ತದೆ. ಯೋಗಸಾಧನೆಯ ಎರಡನೇ ಮೆಟ್ಟಿಲು ‘ನಿಯಮ’. ‘ಶೌಚ’ವೆಂಬುದು ದೇಹ ಮನಸ್ಸು ಮತ್ತು ಹೃದಯದ ಶುದ್ಧಿ. ಯೋಗಾಭ್ಯಾಸಿಗಳಿಗೆ ಶುಚಿತ್ವ ಮತ್ತು ಶುಭ್ರತೆ ಬಹಳ ಅಗತ್ಯ. ಶರೀರ ಶುದ್ಧಿಯಾದರೆ ಮನಸ್ಸು ಶುದ್ಧವಾಗುತ್ತದೆ. ‘ಸಂತೋಷ’: ಸಂತೃಪ್ತಿ ನಮ್ಮ ಸಹಜ ಸ್ಥಿತಿ ಆನಂದ ಸ್ವರೂಪ. ತೃಪ್ತಿಯನ್ನು ಬೆಳಸಿಕೊಳ್ಳಬೇಕು. ಯಾರಿಗೆ ತೃಪ್ತಿ ಇರುವುದಿಲ್ಲವೋ ಅಂತಹವರಿಗೆ ಏಕಾಗ್ರತೆ ಲಭಿಸಲಾರದು. ‘ತಪಸ್ಸು’: ಈ ಪದವು ತಪ್ ಎನ್ನುವ ಶಬ್ದದಿಂದ ಬಂದಿದ್ದು. ಇದರಲ್ಲಿ ಯಾವುದಾದರೊಂದು ನಿರ್ದಿಷ್ಟ ಗುರಿಯನ್ನು ಸಾಧಿಸುವ ಉದ್ದೇಶವಿರುತ್ತದೆ. ಆತ್ಮಶುದ್ಧೀಕರಣ, ಭಗವಂತನ ಕಡೆಗೆ ಒಲವಿದ್ದು ಈಶ್ವರಾರ್ಪಣ ಬುದ್ಧಿಯಿಂದ ಮಾಡುವ ಎಲ್ಲ ಕರ್ಮಗಳೂ ತಪಸ್ಸೇ ಆಗಿದೆ. ‘ಸ್ವಾಧ್ಯಾಯ’: ಸ್ವಯಂ ಅಧ್ಯಯನ ಯಾ ಆತ್ಮಾವಲೋಕನ. ಧರ್ಮಗ್ರಂಥಗಳ ಅಧ್ಯಯನ ಎಂದೂ ಹೇಳಲಾಗುತ್ತದೆ. ಅಂದರೆ ಒಳ್ಳೆಯ ಪುಸ್ತಕಗಳನ್ನು ಓದುವುದು, ಚಿಂತನ,ಮಂಥನ ಮಾಡಿ, ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವುದು. ಸಜ್ಜನರ ಸಹವಾಸ ಮಾಡುವುದು. ‘ಈಶ್ವರ ಪ್ರಣಿಧಾನ’: ಪರಮಾತ್ಮನ ಆರಾಧನೆ. ತಾನು ಮಾಡಿದ ಕೆಲಸಗಳನ್ನೆಲ್ಲ ಇಷ್ಟದೇವರಿಗೆ ಅರ್ಪಣೆ ಮಾಡುವುದು ಮುಖ್ಯ. ಅಹಂಕಾರವನ್ನು ತೊರೆದು ಇಷ್ಟದೇವರ ಚಿಂತನೆಯನ್ನು ಮಾಡಬೇಕು. ಈಶ್ವರಪ್ರಣಿಧಾನದಿಂದ ಸುಖದುಃಖವನ್ನು ಭಗವದರ್ಪಣ ಮಾಡಿದರೆ ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಾನೆ ಎಂಬ ಭಾವನೆಯಿಂದ ಇರಬೇಕು.

ಯೋಗ ನಮಗೆ ಹೇಗೆ ಸಹಾಯ ಮಾಡುತ್ತದೆ?

| ರಾಜು ಸುರತ್ಕಲ್ ಮಂಗಳೂರು

ಯೋಗವು ಶಕ್ತಿ ನಮ್ಯತೆ ಮತ್ತು ಮನಸ್ಸು ದೇಹದ ಅರಿವನ್ನು ನೀಡುತ್ತದೆ. ಕೀಲುಗಳಿಗೆ ಹೆಚ್ಚಿನ ಒತ್ತಡವನ್ನು ನೀಡದೆ ಸುಲಭವಾಗಿ ಬಲಗೊಳ್ಳಲು ಯೋಗ ಸಹಾಯ ಮಾಡುತ್ತದೆ. ವಿಶ್ರಾಂತಿ ಮತ್ತು ಚೈತನ್ಯ ತುಂಬಲು ಸಹಾಯ ಮಾಡುತ್ತದೆ. ಯೋಗ ಎಲ್ಲ ತರಹದ ಬಂಧನಗಳಿಂದ ವಿಮುಕ್ತಿಗೊಳಿಸಲು ಯೋಗ ಒಂದು ಅವಶ್ಯವಾದ ಮಾರ್ಗ. ಬಹಳಷ್ಟು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಯೋಗ ಲಭ್ಯ ಮಾಡುತ್ತದೆಯೆಂದು ಲಕ್ಷಾಂತರ ಯೋಗಾಭ್ಯಾಸಿಗಳ ಅನುಭವವನ್ನು ಇತ್ತೀಚೆಗಿನ ವೈದ್ಯಕೀಯ ಸಂಶೋಧನೆಗಳು ತೋರ್ಪಡಿಸಿವೆ.

ದೈಹಿಕ ಸಮರ್ಥತೆ ಸ್ನಾಯು ಮತ್ತು ಮೂಳೆಗಳ ಕಾರ್ಯಕ್ಷಮತೆ ಮತ್ತು ಹೃದಯಸಂಬಂಧಿ ರಕ್ತನಾಳಗಳ ಆರೋಗ್ಯ ಇವುಗಳಿಗೆ ಯೋಗ ಪ್ರಯೋಜನಕಾರಿ. ಯೋಗವು ಡಯಾಬಿಟಿಸ್ (ಸಕ್ಕರೆ ಕಾಯಿಲೆ) ನಿಯಂತ್ರಣ, ಉಸಿರಾಟ ಸಮಸ್ಯೆಗಳು ಅಧಿಕ ರಕ್ತದೊತ್ತಡ, ಕನಿಷ್ಠ ರಕ್ತದೊತ್ತಡ ಮತ್ತು ಬಹಳಷ್ಟು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ / ತೊಂದರೆಗಳಿಗೆ ಗುಣಕಾರಿ. ಖಿನ್ನತೆಗೊಳಗಾಗುವುದು, ಆಯಾಸಗೊಳ್ಳುವುದು, ಗಾಬರಿಗೊಳ್ಳುವುದು ಮತ್ತು ಒತ್ತಡಕ್ಕೊಳಗಾಗುವುದು ಇವುಗಳನ್ನು ಯೋಗಾಭ್ಯಾಸದಿಂದ ಕಡಿಮೆ ಮಾಡಬಹುದು. ಋತುಬಂಧ ಲಕ್ಷಣಗಳನ್ನು ಯೋಗವು ಹತೋಟಿಯಲ್ಲಿಡುತ್ತದೆ.