ಲೈಫ್‌ಸ್ಟೈಲ್

ದುರ್ಗಂಧ ಶ್ವಾಸ ನಿಯಂತ್ರಣಕ್ಕೆ ಯೋಗ; ಸದಂತ ಪ್ರಾಣಾಯಾಮದ ಬಗೆಗೊಂದಿಷ್ಟು ಮಾಹಿತಿ

ನನಗೆ ಬಾಯಿ ವಿಪರೀತ ಕೆಟ್ಟ ವಾಸನೆ. ಹೋಮಿಯೋಪತಿ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಪರಿಹಾರ ಆಗಿಲ್ಲ. ಯೋಗದ ಪರಿಹಾರ ತಿಳಿಸಿ. ಮಂಡಿನೋವಿಗೆ ಯಾವ ಆಸನ ಮಾಡಬೇಕೆಂದು ತಿಳಿಸಿ.

| ಸಾವಿತ್ರಮ್ಮ ನಾಗಪ್ಪ

ಬಾಯಿಯಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆ ಆಗುವುದರಿಂದ ದುರ್ವಾಸನೆ ಉಂಟಾಗುತ್ತದೆ. ನೀವು ಕಾರಣಗಳನ್ನು ಗುರುತಿಸಿ ವೈದ್ಯರ ಮುಖಾಂತರ ಒಮ್ಮೆ ಸೂಕ್ತ ಉಪಚಾರ ಪಡೆಯಿರಿ. ಕೆಟ್ಟ ಉಸಿರಾಟ ಹೊಂದಿರುವುದು ಮುಜುಗರ.

ಬಾಯಲ್ಲಿನ ದುರ್ವಾಸನೆಗೆ - ಕಳಪೆ ಮೌಖಿಕ ನೈರ್ಮಲ್ಯ, ಕಳಪೆ ಹಲ್ಲಿನ ನೈರ್ಮಲ್ಯ, ಹುಳುಕು ಹಲ್ಲು, ಸೈನಸ್, ಅಜೀರ್ಣ ತೊಂದರೆ, ಮಧುಮೇಹ, ಆಮ್ಲೀಯತೆ ಇತ್ಯಾದಿ ಅನೇಕ ಕಾರಣಗಳು. ನಿಮ್ಮ ದೇಹವನ್ನು ಶುದ್ಧೀಕರಿಸುವ ಕೆಟ್ಟ ಉಸಿರಾಟದ ನಿಯಂತ್ರಣಕ್ಕೆ ಯೋಗ ಪ್ರಾಣಾಯಾಮ, ಕ್ರಿಯೆಗಳು, ಸಹಕಾರಿಯಾಗುತ್ತದೆ. ಯೋಗಾಸನಗಳಲ್ಲಿ ಸಿಂಹಾಸನ, ಮತ್ಸ್ಸ್ಯಾಸನ  , ಸರ್ವಾಂಗಾಸನ, ಪಶ್ಚಿಮೋತ್ಥಾನಾಸನ, ಅರ್ಧಹಲಾಸನ, ಅಧೋಮುಖ ಶ್ವಾನಾಸನ, ಶವಾಸನ ಸಹಕಾರಿಯಾಗುತ್ತದೆ. ಪ್ರಾಣಾಯಾಮಗಳಲ್ಲಿ ಸಿತ್ಕಾರಿ, ಸದಂತ, ಉಜ್ಜಯೀ ಉತ್ತಮ. ಮುಂಜಾನೆ ಚಿಕ್ಕ ಧ್ಯಾನ ಮಾಡಿ. ನಿಮ್ಮ ಆಹಾರ ಸೇವನೆಯ ಕ್ರಮವನ್ನು ಸರಿಪಡಿಸಿ (ತುಟಿ ಮುಚ್ಚಿ ಆಹಾರವನ್ನು ಜಗಿದು ಸೇವಿಸಿ) ಒಮ್ಮೆ ದಂತವೈದ್ಯರನ್ನು ಭೇಟಿಯಾಗಿ (ಹಲ್ಲಿನ ಆರೋಗ್ಯದ ಬಗ್ಗೆ) ಒಸಡುಗಳಿಗೆ ಕೈ ಬೆರಳುಗಳ ಸಹಾಯದಿಂದ ಮಸಾಜ್ ಮಾಡಿ. ಎರಡು ಏಲಕ್ಕಿ ಬೀಜಗಳನ್ನು ನಿಧಾನವಾಗಿ ಜಿಗಿದು ತಿನ್ನಿ. ಕೊತ್ತಂಬರಿ, ಜೀರಿಗೆ ಕಷಾಯ ಸೇವಿಸಿ.

ಮಂಡಿನೋವಿನ ನಿಯಂತ್ರಣಕ್ಕೆ ಸಾಧ್ಯವಾಗುವ ಸರಳ ಆಸನಗಳನ್ನು ಉತ್ಥಿತ ಏಕಪಾದಾಸನ, ಪವನಮುಕ್ತಾಸನ, ಸರ್ವಾಂಗಾಸನ, ಅರ್ಧಹಲಾಸನ, ಅನಂತಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಚತುರಂಗ ದಂಡಾಸನ (ದ್ವಿಪಾದ ಪ್ರಸರಣಾಸನ), ಶವಾಸನ ಕಲಿತು ಅಭ್ಯಾಸ ಮುಂದುವರಿಸಿ.

ಸದಂತ ಪ್ರಾಣಾಯಾಮದ ಬಗ್ಗೆ ಒಂದಷ್ಟು ತಿಳಿಯೋಣ. ಒಬ್ಬರ ಜೀವ ಶಕ್ತಿಗೆ ಪ್ರವೇಶ ಪಡೆಯಲು ನಿಯಂತ್ರಿತ ಉಸಿರಾಟದ ಅಭ್ಯಾಸವನ್ನು ಪ್ರಾಣಾಯಾಮ ಎಂದು ಕರೆಯಲಾಗುತ್ತದೆ. ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಉಂಟು ಮಾಡುವ ಅತ್ಯುತ್ತಮ ಉಸಿರಾಟದ ಅಭ್ಯಾಸವೆಂದರೆ ಸದಂತ ಪ್ರಾಣಾಯಾಮ. ಈ ಪ್ರಾಣಾಯಾಮ ಹಲ್ಲುಗಳ ಬದಿಗಳಲ್ಲಿ ಗಾಳಿಯನ್ನು ಉಸಿರಾಡಲು ಅನುವು ಮಾಡಿಕೊಡುತ್ತದೆ.

ವಿಧಾನ: ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು, ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿಸಿ. ಬಾಯಿಯನ್ನು ತುಸು ಅಗಲಿಸಿ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಜೋಡಿಸಿ. ಹಲ್ಲುಗಳ ಸಂಧಿಗಳ ಮೂಲಕ ನಿಧಾನವಾಗಿ ಹಿಸ್ ಶಬ್ದದಂತೆ ಗಾಳಿಯನ್ನು ಒಳಕ್ಕೆ ಎಳೆದುಕೊಂಡು ತುಸು ಹೊತ್ತು ಒಳಗೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ. ಈ ರೀತಿ 3ರಿಂದ 9 ಬಾರಿ ಅಭ್ಯಾಸ ಮಾಡಿ.

ಪ್ರಯೋಜನ: ಒಸಡುಗಳು ಮತ್ತು ಹಲ್ಲುಗಳನ್ನು ಆರೋಗ್ಯವಾಗಿರಿಸುತ್ತದೆ. ಮೌಖಿಕ ಕುಳಿಯನ್ನು ಸಡಿಲಗೊಳಿಸುತ್ತದೆ. ದೇಹದಲ್ಲಿನ ಹೆಚ್ಚಿನ ಶಾಖ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಪೂರಕ. ನರಮಂಡಲ ಸಚೇತನಗೊಳ್ಳುತ್ತದೆ. ಆತಂಕ ಖಿನ್ನತೆ, ಬಾಯಿ ಹುಣ್ಣಿನ ಸಮಸ್ಯೆ ನಿಯಂತ್ರಣವಾಗುತ್ತದೆ. ಅತೀ ಸೂಕ್ಷ್ಮತೆಯನ್ನು ಹೊಂದಿರುವ ಒಸಡುಗಳಿಗೆ ಈ ಪ್ರಾಣಾಯಾಮ ಪ್ರಯೋಜನಕಾರಿ.

ಮುನ್ನೆಚ್ಚರಿಕೆಗಳು: ಅವಸರದಿಂದ ಹಾಗೂ ಒತ್ತಡದಿಂದ ಯೋಗ ಅಭ್ಯಾಸ ಮಾಡಬೇಡಿ. ಕೃತಕ ಹಲ್ಲಿನವರು ಅಭ್ಯಾಸ (ಸೆಟ್ ಹಲ್ಲಿನವರು) ಮಾಡುವುದು ಬೇಡ. ಗುರುಮುಖೇನ ಕಲಿತು ಅಭ್ಯಾಸ ಮಾಡಿ.