ಲೈಫ್‌ಸ್ಟೈಲ್

ಯೋಗ ಕ್ಷೇಮ: ಸಹಜ ಪ್ರಸವಕ್ಕೆ ಯೋಗಾಭ್ಯಾಸ

ಗೋಪಾಲಕೃಷ್ಣ ದೇಲಂಪಾಡಿ


ಗರ್ಭಿಣೆಯರು ಯಾವೆಲ್ಲ ಆಸನ ಮಾಡಬಹುದು? ಉತ್ತಮ ಆರೋಗ್ಯ ಪಾಲನೆಗೆ ಬೇಕಾದ ಸೂತ್ರಗಳನ್ನು ತಿಳಿಸಿ.
| ಟಿ.ಎಂ. ರೂಪಾ

ಗರ್ಭಧಾರಣೆ ಎಂಬುದು ಸುಂದರವಾದ ಮತ್ತು ಅದ್ಭುತ ಅನುಭವ. ಗರ್ಭದಲ್ಲಿ ಬೆಳೆದ ಮಗು ಪ್ರಕೃತಿಸಹಜವಾಗಿ ಜನಿಸಲಿ ಎಂದು ಎಲ್ಲರೂ ಬಯಸುತ್ತಾರೆ. ಒಂಬತ್ತು ತಿಂಗಳು ಹೆಚ್ಚು ಆರಾಮದಾಯಕವಾಗಲು ಆರೋಗ್ಯಪಾಲನೆಗೆ ವ್ಯಾಯಾಮ, ಯೋಗ, ನಿಯತ ವೈದ್ಯಕೀಯ ಪರೀಕ್ಷೆ ಪೋಷಕಾಂಶ ಆಹಾರ ಇತ್ಯಾದಿಗಳು. ಗರ್ಭಿಣಿಯರಿಗೆ ಯೋಗವು ವಿಶೇಷವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ವ್ಯಾಯಾಮವಾಗಿದೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಪರಿಹಾರವನ್ನು ನೀಡುವುದರ ಜೊತೆಗೆ ಇದು ನಿಮ್ಮ ದೇಹವನ್ನು ಹೆರಿಗೆಗೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಶಾಂತ ಚಲನೆಗಳು ಮತ್ತು ನಿಧಾನ ಉಸಿರಾಟದ ಒತ್ತಡವನ್ನು ನಿವಾರಿಸುತ್ತದೆ. ನುರಿತ ಚಿಕಿತ್ಸಕರೊಂದಿಗೆ ಸಮಾಲೋಚಿಸಿ ಯೋಗ, ಮುದ್ರೆಗಳನ್ನು ಪ್ರಾರಂಭಿಸಿ. ಗರ್ಭಾವಸ್ಥೆಯಲ್ಲಿ ನೀವು ಯಾವುದೇ ಯೋಗವನ್ನು ಪ್ರಯತ್ನಿಸುವಾಗ ನಿಮಗೆ ಅನನುಕೂಲವಾಗಿದ್ದರೆ ಅಥವಾ ನೋವು ಅನುಭವಿಸಿದರೆ

ತಕ್ಷಣ ಯೋಗ ಅಭ್ಯಾಸ ನಿಲ್ಲಿಸಿ.
ಸೂಚಿತ ಆಸನಗಳು: ತಾಡಾಸನ, ವೃಕ್ಷಾಸನ, ಉತ್ಕಟಾಸನ, ವೀರಭದ್ರಾಸನ ಅರ್ಧಕಟಿಚಕ್ರಾಸನ, ಬದ್ಧಕೋನಾಸನ, ವಜ್ರಾಸನ, ಮಾರ್ಜಾಲಾಸನ, ಭರದ್ವಾಜಾಸನ, ಸುಪ್ತವೀರಾಸನ (ತಲೆದಿಂಬಿನ ಸಹಾಯದಿಂದ), ಆರಂಭದ ಹಂತದ ಉಪವಿಷ್ಟ ಕೋನಾಸನ, ಬಾಲಾಸನ, ವಿಶ್ರಾಂತಿ ಆಸನ. ಇದರಿಂದ ಗರ್ಭಿಣಿಯರ ಪೆಲ್​ವಿಸ್ ಮತ್ತು ಕಿರುಬೆನ್ನಿನ ಮಾಂಸಖಂಡಗಳಿಗೆ ಉತ್ತಮ ಬಲ ಸಿಗುತ್ತದೆ. ಈ ಆಸನಗಳಿಂದ ಪ್ರಸವವೇದನೆ ಬಹುಮಟ್ಟಿಗೆ ತಗ್ಗುತ್ತದೆ. ಕಿಬ್ಬೊಟ್ಟೆ, ಬೆನ್ನಿನ ಭಾಗ ಇವುಗಳಿಗೆಲ್ಲ ಸಾಕಷ್ಟು ರಕ್ತ ಪರಿಚಲನೆಯಾಗಿ ಅವೆಲ್ಲ ಹುರುಪುಗೊಂಡು ಶಕ್ತಿ ಪಡೆಯುತ್ತವೆ.

ಮುದ್ರೆಗಳು: ಪ್ರಾಣಮುದ್ರೆ, ವಾಯುಮುದ್ರೆ, ಚಿನ್ಮುದ್ರೆ. ಯೋಗಾಸನ, ಧ್ಯಾನವೇ ಮೊದಲಾದ ಚಟುವಟಿಕೆಗಳಲ್ಲದೆ ದೈಹಿಕ-ಮಾನಸಿಕ ಹಿತಕ್ಕೆ ಉತ್ತಮರ ಸಹವಾಸ, ಮೌಲ್ಯಯುತ ಪುಸ್ತಕಗಳ ಓದು, ಸಂಸ್ಕಾರಭರಿತ ಕಾರ್ಯಕ್ರಮಗಳ ವೀಕ್ಷಣೆ, ಸೂಕ್ತ ಆಹಾರ ಸೇವನೆ ಎಲ್ಲವನ್ನೂ ಗರ್ಭಿಣಿಯಾದವಳು ರೂಢಿಸಿಕೊಂಡರೆ ದೇಹ ಮನಸ್ಸುಗಳು ಉಲ್ಲಸಿತವಾಗಿರುತ್ತವೆ, ಆರೋಗ್ಯದಿಂದಿರುತ್ತವೆ.