ಲೈಫ್‌ಸ್ಟೈಲ್

ಕೀಲುನೋವಿನ ಪರಿಹಾರಕ್ಕೆ ಯೋಗಾಭ್ಯಾಸ

ನನಗೆ ಎರಡು ವರ್ಷಗಳಿಂದ ಜಾಯಿಂಟ್ ಪೇನ್ ಇದೆ. ರಕ್ತಪರೀಕ್ಷೆ ಮಾಡಿಸಿದಾಗ ರೂಮಟಾಯ್್ಡ ಆರ್ಥರೈಟಿಸ್ ಇದೆ ಎಂದು ಹೇಳಿದ್ದಾರೆ. ಇದರ ಪರಿಹಾರಕ್ಕೆ ಯೋಗ್ಯವಾದ ಆಸನಗಳನ್ನು ಸೂಚಿಸಿ.

| ತಿರುಪತಿ ಚವ್ಹಾಣ್ ಕಲಬುರಗಿ (18 ವರ್ಷ )

ಸಂಧಿವಾತವು ದೀರ್ಘಕಾಲದ ಉರಿಯೂತದ ಕಾಯಿಲೆ. ಸ್ವಯಂನಿರೋಧಕ ಕಾಯಿಲೆಯಾದ ಇದು ಕ್ರಮೇಣ ದೇಹದಾದ್ಯಂತ ಕೀಲುನೋವು ಮತ್ತು ಹಾನಿಯನ್ನುಂಟುಮಾಡುತ್ತದೆ. ತೋಳು ಮತ್ತು ಕಾಲುಗಳಲ್ಲಿ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ನೋವು, ಒತ್ತಡ ಮತ್ತು ಆತಂಕದಂತಹ ದೈಹಿಕ ಹಾಗೂ ಮಾನಸಿಕ ಲಕ್ಷಣಗಳನ್ನು ಸುಧಾರಿಸಲು ಯೋಗವು ಸಹಾಯ ಮಾಡುತ್ತದೆ. ವಿವಿಧ ರೀತಿಯ ಸಂಧಿವಾತ ಹೊಂದಿರುವ ಜನರು ನಿಯತವಾಗಿ ಯೋಗವನ್ನು ಅಭ್ಯಾಸ ಮಾಡುವ ಮೂಲಕ ಕೀಲುನೋವವನ್ನು ಕಡಿಮೆ ಮಾಡಬಹುದು. ಕೀಲುಗಳ ನಮ್ಯತೆ ಮತ್ತು ಕಾರ್ಯವನ್ನು ಸುಧಾರಿಸಬಹುದು. ಸಂಧಿವಾತ ಹೊಂದಿರುವ ವ್ಯಕ್ತಿಯು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಯೋಗದ ಆರಂಭದಲ್ಲಿ ಕೆಲವು ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು. ವ್ಯಾಯಾಮ ಮಾಡುವವರು ಕಡಿಮೆ ನೋವು ಹೊಂದಿರುವುದನ್ನು ಗಮನಿಸಬಹುದು. ವ್ಯಾಯಾಮವು ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆಸನಗಳು, ಉಸಿರಾಟದ ಕ್ರಿಯೆ (ಪ್ರಾಣಾಯಾಮ), ವಿಶ್ರಾಂತಿಯ ವಿಧಾನ ಹಾಗೂ ಧ್ಯಾನಗಳ ಅಭ್ಯಾಸದಿಂದ ದೇಹದ ಜಡತ್ವ ಹೋಗಿ ಮೃದುತ್ವ ಉಂಟಾಗಿ ದೇಹದಲ್ಲಿ ಉತ್ತಮರಕ್ತ ಪರಿಚಲನೆ ಜರುಗಿ ಕೀಲುಗಳನ್ನು ರಕ್ಷಿಸುತ್ತದೆ. ಆರಂಭದಲ್ಲಿ ಸಾಧ್ಯವಾಗುವ ಆಸನಗಳನ್ನು ಮಾತ್ರ ಮಾಡಿ.

ಸೂಚಿತ ಆಸನಗಳು: ಗೋಡೆಗೆ ಒರಗಿ ತಾಡಾಸನ ಮಾಡಿ. ಮುಂದಕ್ಕೆ ಬಾಗುವ ಪಾಸಹಸ್ತಾಸನ, ಪ್ರಸ್ತಾರಿತ ಪಾದೋತ್ಥಾನಾಸನ, ಬದ್ಧಕೋಣಾಸನ, ಮಾರ್ಜಾಲಾಸನ, ಉತ್ಥಿತ ಏಕಪಾದಾಸನ, ವಿಪರೀತಕರಣಿ, ಮಕರಾಸನ, ಭುಜಂಗಾಸನ, ಏಕಪಾದಸನ, ಶಲಭಾಸನ, ಸಾಧ್ಯವಾದರೆ ಉಪಕರಣಗಳ ನೆರವಿನಿಂದ ಇನ್ನು ಕೆಲವು ಆಸನಗಳನ್ನು ಮಾಡಬಹುದು (ಇದನ್ನೆಲ್ಲ ಗುರುಮುಖೇನನೇ ಕಲಿತು ಅಭ್ಯಾಸ ಮಾಡಿ). ಇದರೊಂದಿಗೆ ಕೆಲವು ತಿರುಚುವಿಕೆಯೆ ಆಸನಗಳು ಸಹಾಯವಾಗುತ್ತದೆ. ಉತ್ತಮ ಪೋಷಕಾಂಶಯುಕ್ತ ಆಹಾರಪದಾರ್ಥಗಳನ್ನು ಸೇವಿಸಿ.

ಬೈಲ್ಯಾಟರಲ್ ಫ್ಲಾಟ್ ಫೂಟ್ ಸಮಸ್ಯೆ ಇದೆ. ನೇರವಾಗಿ ನಿಂತರೆ ಎರಡೂ ಮಂಡಿಗಳು ಒಟ್ಟಿಗೆ ಸೇರಿ ನಡೆಯಲು ತೊಡಕಾಗುತ್ತದೆ. ಯಾವುದಾದರೂ ಆಸನ ತಿಳಿಸಿ.

| ಬಿ. ಎಸ್. ಕುಲಕರ್ಣಿ

ಪಾದಗಳು ದೇಹದ ಪ್ರಮುಖ ಅಡಿಪಾಯ ಮತ್ತು ಆ ಅಡಿಪಾಯವನ್ನು ಬಲಗೊಳಿಸಲು ಮತ್ತು ಸ್ಥಿರಗೊಳಿಸಲು ಯೋಗ ಸಹಾಯ ಮಾಡುತ್ತದೆ. ದೇಹದಲ್ಲಿನ ರಚನಾತ್ಮಕ ಸಮಸ್ಯೆಗಳನ್ನು ನಿಯಂತ್ರಿಸಲು ಆಸನಗಳು ಸಹಕಾರಿಯಾಗುತ್ತದೆ. ಒಮ್ಮೆ ವೈದ್ಯರೊಂದಿಗೆ ಸಮಲೋಚಿಸಿ ಪರಿಶೀಲಿಸಿ. ಆಮೇಲೆ ಸೂಕ್ತ ಆಸನಗಳನ್ನು ಅಭ್ಯಾಸ ಮಾಡಿ. ಯೋಗದಿಂದ ದೈಹಿಕ ಆರೋಗ್ಯ, ಚಿತ್ತಶಾಂತಿ, ದೇಹದ ವಿಕಾರ ತಡೆಯಲು ಸಹಾಯವಾಗುತ್ತದೆ.

ಸೂಚಿತ ಆಸನಗಳು: ತಾಡಾಸನ, ಉತ್ಕಟಾಸನ, ತ್ರಿಕೋಣಾಸನ, ಗೋಡೆಗೆ ಒರಗಿ ವೃಕ್ಷಾಸನಗಳನ್ನು 3ರಿಂದ 6 ಬಾರಿ ಮಾಡಿ. ಮಾಲಾಸನ ಭಂಗಿ ಮೂರು ಬಾರಿ ಮತ್ತು ಮಾರ್ಜಾಲಾಸನ ಉತ್ಥಿತ ಏಕಪಾದಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಸರ್ವಾಂಗಾಸನ,ಭುಜಂಗಾಸನ, ಏಕಪಾದಾಸನ, ಶಲಭಾಸನ ಶವಾಸನ ಆಸನಗಳನ್ನು ಯೋಗಶಿಕ್ಷಕರ ಸಮ್ಮುಖ ಕಲಿತು ಮಾಡಿ.