ಮಿದುಳಿನ ಯಾವುದೇ ಭಾಗದಲ್ಲಿ ರಕ್ತ ಸಂಚಾರಕ್ಕೆ ತಕ್ಷಣ ಸಮಸ್ಯೆ ಉಂಟಾದಾಗ (ಇಶ್ಚಿಮಕ್ ಸ್ಟ್ರೋಕ್) ಅಥವಾ ಮಿದುಳಿನ ರಕ್ತನಾಳವೊಂದು ಸ್ಪೋಟಗೊಂಡು ರಕ್ತಸ್ರಾವ (ಹೆಮೊರೇಜ್ ಸ್ಟ್ರೋಕ್) ಆಗುವು ದರಿಂದ ಮಿದುಳಿಗೆ ಆಘಾತ ಉಂಟಾಗುತ್ತದೆ. ಇದರಿಂದ ಪಾರ್ಶ್ವವಾಯು (ಸ್ಟ್ರೋಕ್)ಸಂಭವಿಸುತ್ತದೆ. ಈ ಪಾರ್ಶ್ವವಾಯುವಿನ ಒಟ್ಟಾರೆ ಪ್ರಕರಣಗಳಲ್ಲಿ ಶೇ. 80 ರಕ್ತದ ಹೆಪು್ಪಗಟ್ಟುವಿಕೆಯಿಂದ ಸಂಭವಿಸುತ್ತವೆ. ಇನ್ನು ಮಿದುಳಿನ ಯಾವ ಭಾಗದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿದೆ ಎಂಬುದರ ಮೇಲೆ ಇದರ ಚಿಕಿತ್ಸೆ ಅವಲಂಬಿತವಾಗಿರುತ್ತದೆ. ಹಾಗಾಗಿ ರೋಗಿಯು ಮತ್ತು ಸಂಬಂಧಿಕರು ಹೆಚ್ಚು ತಡ ಮಾಡದೆ ಸುವರ್ಣ ಸಮಯ (ಗೋಲ್ಡನ್ ಅವರ್)ದಲ್ಲಿ (ಮೊದಲ ನಾಲ್ಕೂವರೆ ಗಂಟೆ) ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಲ್ಲಿ ಹೆಚ್ಚಿನ ಹಾನಿ ತಪ್ಪಿಸಬಹುದಾಗಿದೆ.
ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆ ನಡೆಸಿ, ಚಿಕಿತ್ಸೆ ದೊರೆಯುವುದು ಅವಶ್ಯವಾಗಿದೆ. ಹಾಗಾಗಿ ಪಾರ್ಶ್ವವಾಯು ಲಕ್ಷಣಗಳು ಕಂಡ ಕೂಡಲೇ ಸಿಟಿ ಸ್ಕಾ್ಯನ್ ಅಥವಾ ಎಂಆರ್ಐ ಸೌಲಭ್ಯ ಮತ್ತು ತಜ್ಞರ ಸೇವೆ ದೊರೆಯುವ ಆಸ್ಪತ್ರೆಗೆ ದಾಖಲು ಮಾಡಬೇಕು. ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್, ಗೊರಕೆ (ಸ್ಲೀಪ್ ಆಪ್ನೇಯಾ), ಅತಿಧೂಮಪಾನ, ಮದ್ಯಪಾನ, ಕತ್ತಿನ ರಕ್ತನಾಳದಲ್ಲಿ ಕೊಬ್ಬು ಶೇಖರಣೆ, ಹೃದಯ ಬಡಿತದಲ್ಲಿ ಏರುಪೇರು, ಒತ್ತಡ, ಚಟುವಟಿಕೆ ರಹಿತ ಜೀವನ ಶೈಲಿ, ನಿದ್ರಾಹೀನತೆ, ಒಂದು ತಾಸಿಗೂ ಹೆಚ್ಚು ಸಮಯ ಒಂದೇ ಕಡೆ ಕುಳಿತಿರುವುದು ಪಾರ್ಶ್ವವಾಯುವಿಗೆ ಪ್ರಮುಖ ಕಾರಣಗಳಾಗಿವೆ. ಇವಲ್ಲದೆ, ಅನುವಂಶೀಯ, ವ್ಯಾಸ್ಕುಲೋಪತಿ ಸಮಸ್ಯೆ ಸೇರಿ ಕೆಲ ಅಪರೂಪದ ಕಾರಣಗಳಿಂದ ಪಾರ್ಶ್ವವಾಯು ಸಂಭವಿಸುತ್ತದೆ. ಪಾರ್ಶ್ವವಾಯು ಪ್ರಕರಣಗಳ ಸಂಖ್ಯೆ ಶೀತ ಕಾಲದಲ್ಲಿ ಹೆಚ್ಚು ವರದಿಯಾಗುತ್ತವೆ. ಹಾಗಾಗಿ ಪಾರ್ಶ್ವವಾಯುವಿಗೆ ಒಳಗಾದವರು, ಅದಕ್ಕೆ ಸಂಬಂಧಿಸಿದ ರೋಗ ಲಕ್ಷಣ ಉಳ್ಳವರು ಚಳಿಗಾಲದಲ್ಲಿ ಬೆಚ್ಚಗಿರಬೇಕು.
ಕತ್ತಿನ ರಕ್ತನಾಳದಲ್ಲಿ ಕೊಬ್ಬು ರಕ್ತದ ಗಡ್ಡೆ ಮತ್ತಿತರ ಸಮಸ್ಯೆಗಳಿಂದ ರಕ್ತ ಸಂಚಾರಕ್ಕೆ ತಡೆಯಾದರೆ ಕ್ಯಾಥ್ ಲ್ಯಾಬ್ನಲ್ಲಿ ಕ್ಯಾಥೀಟರ್ ಮೂಲಕ ಕೆರೋಟಿಡ್ ಆಂಜಿಯೋ ಪ್ಲಾಸ್ಟಿ ಮತ್ತು ಸ್ಟೆಂಟ್ ಅಳವಡಿಸಲಾಗುತ್ತದೆ. ಇದಲ್ಲದೆ ಮಿದುಳಿನ ರಕ್ತನಾಳಗಳಿಗೆ ಇನ್ಜೆಕ್ಷನ್ ನೀಡುವ ಮೂಲಕ ರಕ್ತ ಸಂಚಾರದಲ್ಲಿನ ಅಡೆತಡೆಗಳನ್ನು ಗಮನಿಸಬಹುದು. ಸಕಾಲಕ್ಕೆ ಆಸ್ಪತ್ರೆ ತಲುಪಿದಲ್ಲಿ ರಕ್ತದ ಗಡ್ಡೆಗಳಿಂದ ಮುಚ್ಚಿ ಹೋಗಿರುವ ರಕ್ತನಾಳವನ್ನು ಮೆಕ್ಯಾನಿಕಲ್ ತ್ರೋಂಬೆಕ್ಟಮಿ ಚಿಕಿತ್ಸೆ ಮೂಲಕ ಸುಗಮಗೊಳಿಸಬಹುದಾಗಿದೆ.
ಪಾರ್ಶ್ವವಾಯುವಿನ ರೋಗ ಲಕ್ಷಣಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಿ-ಫಾಸ್ಟ್ ಎಂಬ ಸಂಕ್ಷಿಪ್ತ ರೂಪ ಬಳಸಲಾಗುತ್ತದೆ. ಬಿ-ಬ್ಯಾಲೆನ್ಸ್ (ದೇಹದ ಸಮತೋಲನ), ಇ-ಐಸ್ (ಕಣ್ಣಿನ ಸಮಸ್ಯೆಯಿಂದ ಹಠಾತ್ ಕುರುಡುತನ), ಎಫ್ - ಫೇಶಿಯಲ್ ಡ್ರೂಪಿಂಗ್ (ಮುಖ ವಕ್ರವಾಗು ವುದು), ಎ- ಆಮ್ರ್ ಲಿಫ್ಟ್ (ಕೈಗಳ ಚಲನೆ ಶಕ್ತಿ ಸ್ವಾಧೀನ ಕಳೆದುಕೊಳ್ಳುವುದು), ಎಸ್- ಸ್ಪೀಚ್ (ಮಾತಿನಲ್ಲಿ ತೊದಲುವಿಕೆ), ಟಿ- ಟೈಮ್ ಆಫ್ ಆನ್ಸೆಟ್ (ಪಾರ್ಶ್ವವಾಯು ಸಂಭವಿಸಿದಾಗ ಸುವರ್ಣ ಸಮಯದಲ್ಲಿ ಆಸ್ಪತ್ರೆಗೆ ತಲುಪುವುದು) ಇವಲ್ಲದೆ ತಲೆಸುತ್ತು, ಮೂರ್ಛೆರೋಗ, ತಲೆನೋವು, ಪ್ರಜ್ಞಾಹೀತ ಸ್ಥಿತಿ, ಮರೆವು, ವರ್ತನೆಯಲ್ಲಿ ಬದಲಾವಣೆ ಸಹ ಪಾರ್ಶ್ವ ವಾಯುವಿನ ರೋಗಲಕ್ಷಣಗಳಾಗಿವೆ.
ಪಾರ್ಶ್ವವಾಯುವಿನಿಂದ ಗುಣಮುಖರಾದ ನಂತರವೂ ರೋಗಿಗಳು ಉತ್ತಮ ಆಹಾರ ಪದ್ಧತಿ ಮತ್ತು ಪಥ್ಯ ಪಾಲಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ.