ಲೈಫ್‌ಸ್ಟೈಲ್

ಮನೋಲ್ಲಾಸ: ಪ್ರಪಂಚವೇ ಮಹಾಗುರು

vinaymk1969

| ಪ್ರೊ.ಕೆ.ಕೃಷ್ಣಮೂರ್ತಿ ಮಯ್ಯ

ಭಾಗವತದ ಒಂದು ಪ್ರಸಂಗವಿದು. ಯಾದವ ವಂಶದ ಮೂಲಪುರುಷನಾದ ಯದುಮಹಾರಾಜ ಒಂದು ಬಾರಿ ತರುಣ ಬ್ರಾಹ್ಮಣನನ್ನು ಕಂಡನು. ಅವನು ಸರ್ವಸಂಗಪರಿತ್ಯಾಗಿಯಂತೆ ಕಂಡರೂ ಸದಾ ಸಂತೋಷವಾಗಿಯೇ ಇದ್ದ. ಯದುರಾಜ ಅವನನ್ನು ಕೇಳಿದ, ‘ನೀನು ಸದಾ ಆನಂದವಾಗಿ ಹೇಗೆ ಇರುವೆ? ಇದನ್ನು ಯಾರಿಂದ ಕಲಿತೆ? ನಿನ್ನ ಗುರು ಯಾರು?’ ಆ ಯುವಕನು ಹೀಗೆ ಉತ್ತರಿಸಿದ- ‘ಮಹಾರಾಜನೇ, ನನಗೆ ಒಬ್ಬ ಗುರುವಿಲ್ಲ. ಪ್ರತಿಯೊಬ್ಬರಿಂದ, ಪ್ರತಿ ವಸ್ತುವಿನಿಂದ ಕಲಿತಿದ್ದೇನೆ. ನನ್ನ ಮೊದಲ ಗುರು ಭೂಮಿ. ನಾವೆಲ್ಲ ಎಷ್ಟೇ ತುಳಿದರೂ ಸಹನೆಯಿಂದ ಲಕ್ಷಾಂತರ ವರ್ಷಗಳಿಂದ ಆಹಾರ ನೀಡಿ ಸಲಹುತ್ತಿದೆ. ಸಹನೆಯ ಪಾಠವನ್ನು ಭೂಮಿಯಿಂದ ಕಲಿತೆ. ಗಾಳಿ ಮತ್ತೊಂದು ಗುರು. ವಾಯು ನಮ್ಮ ಜೀವನದ ಆಧಾರ. ಅದು ಎಲ್ಲೆಲ್ಲಿಯೋ ಹಾರಿ ಬರುತ್ತದೆ. ಅದು ತರುವ ಸುಗಂಧ, ದುರ್ಗಂಧ ಅದರದ್ದಲ್ಲ. ಅದಕ್ಕೆ ಯಾವ ಲೇಪವೂ ಇಲ್ಲ. ನಾವು ಎಂಥದ್ದೇ ಸುಖ-ದುಃಖಗಳ ಸಂದರ್ಭದಲ್ಲೂ ಅಂಟದೆ ಇರಬೇಕು ಎನ್ನುವುದನ್ನು ಈ ಮೂಲಕ ಕಲಿತೆ. ಇನ್ನು ನೀರು. ಮನಸ್ಸು ಅದರಂತೆ ಸ್ವಚ್ಛವಾಗಿ ಇರಬೇಕೆಂದು ತಿಳಿದೆ. ಅಗ್ನಿ ಹಾಕಿದುದನ್ನೆಲ್ಲ ತಿಂದು ಮುಗಿಸುತ್ತದೆ. ಆದರೂ ಅದು ಶುದ್ಧ. ಆ ಮೂಲಕ ಯೋಗಿ ಆದವನು ಯಾವುದೇ ಸಮಯದಲ್ಲೂ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಂಡಿರಬೇಕೆಂದು ತಿಳಿದೆ.

ದಿನವೂ ಸೂರ್ಯಚಂದ್ರರನ್ನು ನೋಡುತ್ತೇವೆ. ಅವರು ತಾವು ಉರಿದು ಜಗತ್ತನ್ನು ಬೆಳಗಿಸುತ್ತಾರೆ. ಹೊಳಪನ್ನು ನೀಡುತ್ತಾರೆ. ಸ್ವಾರ್ಥರಹಿತ ಬಾಳಿಗೆ ಇವರೇ ಗುರುಗಳು. ಸಮುದ್ರಕ್ಕೆ ನೂರಾರು ನದಿಗಳು ಬಂದು ಸೇರಿದರೂ ಉಕ್ಕುವುದಿಲ್ಲ. ಎಂಥ ಬಿಸಿಲು ಬಂದರೂ ಬತ್ತುವುದಿಲ್ಲ. ಐಶ್ವರ್ಯ ಬಂದಾಗ ಹಿಗ್ಗಬಾರದು, ಬಡತನ ಬಂದಾಗ ಕುಗ್ಗಬಾರದು ಎಂಬ ನೀತಿಯನ್ನು ಸಮುದ್ರ ತಿಳಿಸುತ್ತದೆ. ಪತಂಗಗಳು ಬೆಂಕಿಯನ್ನು ಕಂಡು ಆಕರ್ಷಿತವಾಗಿ ಹೋಗಿ ಸುಟ್ಟು ಹೋಗುತ್ತವೆ. ಅಂತೆಯೇ ಮಾನವನೂ ಇಂದ್ರಿಯಸುಖಗಳಿಂದಲೇ ನಮಗೆ ಸುಖವೆಂದು ಭಾವಿಸಿ ಹೋಗಿ ಕಷ್ಟಗಳಿಗೆ ಗುರಿಯಾಗುತ್ತಾನೆ. ಇಂದ್ರಿಯ ನಿಗ್ರಹವನ್ನು ಪತಂಗದಿಂದ ಕಲಿತೆ. ಜೇನುಹುಳುವು ಹೂವಿಗೆ ಸ್ವಲ್ಪವೂ ತೊಂದರೆ ಆಗದಂತೆ ಮಧುವನ್ನು ಹೀರಿ, ಶೇಖರಿಸಿ ಇಡುತ್ತದೆ. ಆದರೆ ತಾನು ಸಂಗ್ರಹಿಸಿದ ಮಧುವನ್ನು ತಾನು ಬಳಸದೆ ಇತರರಿಗೆ ಹಂಚುತ್ತದೆ. ಹಾಗೆಯೇ ನಾನು ಒಂದೊಂದರಿಂದ ಒಂದೊಂದು ಗುಣವನ್ನು ಕಲಿತಿರುವೆ’.

ನಾವೂ ಹಾಗೆ ಒಂದೊಂದು ವ್ಯಕ್ತಿ, ಪಶು-ಪಕ್ಷಿ, ಪಂಚಭೂತಗಳಿಂದ ಒಂದೊಂದು ಗುಣ ಪಡೆದು ಸಜ್ಜನ ಶ್ರೇಷ್ಠರಾಗಬೇಕು. ಸರ್ವಜ್ಞರಾಗಬೇಕು. ಒಬ್ಬ ಗುರುವಿನಿಂದ ಸರ್ವವೂ ಲಭಿಸದು. ಕೇವಲ ಪುಸ್ತಕದಿಂದ ಜ್ಞಾನ ಲಭಿಸದು. ತಾನೇ ಸರ್ವಜ್ಞನೆಂಬ ಅಹಂಕಾರವನ್ನು ಬಿಟ್ಟು ಕುತೂಹಲದ ಕಣ್ಣಿನಿಂದ, ನಿರ್ಮಲ ಮನಸ್ಸಿನಿಂದ ಸುತ್ತಲಿನ ಪ್ರಪಂಚವನ್ನು ನೋಡಲು ಪ್ರಾರಂಭಿಸಿದರೆ ಅದು ನಮಗೆ ಗುರುವಾಗುತ್ತ ಹೋಗುತ್ತದೆ. ನಾವು ಕಲಿತು ಪರಿಪೂರ್ಣರಾಗುತ್ತ ಹೋಗುತ್ತೇವೆ. ಎಲ್ಲರಿಂದಲೂ ಒಳ್ಳೆಯದನ್ನು, ಪ್ರೇರಣಾದಾಯಿಯಾದದ್ದನ್ನು ಕಲಿಯುತ್ತ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತ ಆತ್ಮಾನಂದವನ್ನು ಹೊಂದಬೇಕು.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)