Autism | ಪ್ರತಿ ವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಆಟಿಸಂ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದು ಈ ದಿನದ ಉದ್ದೇಶವಾಗಿದೆ.
ಆಟಿಸಂ ಒಂದು ನರವೈಜ್ಞಾನಿಕ ಅಸ್ವಸ್ಥತೆಯ ಕಾಯಿಲೆಯಾಗಿದೆ. ಈ ರೋಗದ ಲಕ್ಷಣಗಳು ಮಕ್ಕಳಲ್ಲಿ ಬಾಲ್ಯದಲ್ಲಿಯೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಕಾಯಿಲೆಗೆ ತುತ್ತಾದ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ, ಹಾಗೂ ಬೇರೆಯವರೊಂದಿಗೆ ಸಂವಹನ ನಡೆಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾರೆ. ಆಟಿಸಂ ಕಾಯಿಲೆ ಇರುವ ಜನರು ವಿಭಿನ್ನ ರೀತಿಯಲ್ಲಿ ಯೋಚಿಸುವುದು ಹಾಗೂ ವಿಭಿನ್ನ ರೀತಿಯಲ್ಲಿ ವರ್ತಿಸುವುದು ಸಾಮಾನ್ಯವಾಗಿದೆ.
ಈ ಕಾಯಿಲೆ ಇರುವ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ವರ್ತಿಸುತ್ತಾರೆ. ಜನನದ ಒಂದು ವರ್ಷದ ನಂತರ ಮಕ್ಕಳಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಪೋಲೋ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ.ಅನಿಮೇಶ್ ಗುಪ್ತಾ ಈ ಬಗ್ಗೆ ಮಾತನಾಡಿದ್ದು, ಆಟಿಸಂ ಇರುವ ಮಕ್ಕಳಿಗೆ ವಿಶೇಷ ಗಮನ ವಹಿಸಬೇಕು. ಸಕಾಲಿಕ ಮತ್ತು ಸರಿಯಾದ ಚಿಕಿತ್ಸೆಯಿಂದ, ಈ ಕಾಯಿಲೆ ಇರುವ ಮಕ್ಕಳನ್ನು ಸ್ವಲ್ಪ ಮಟ್ಟಿಗೆ ಸಾಮಾನ್ಯ ಸ್ಥಿತಿಗೆ ತರಬಹುದು ಎಂದಿದ್ದಾರೆ.
ಆಟಿಸಂ ಸಮಸ್ಯೆ ಎದುರಿಸುವ ಮಕ್ಕಳಿಗೆ ಮೆದುಳು ಸರಿಯಾಗಿ ಬೆಳವಣಿಗೆ ಆಗುವುದಿಲ್ಲ ಹಾಗೂ ಕಣ್ಣಿನ ನೋಟದಲ್ಲಿ ತೊಂದರೆ ಇರುತ್ತದೆ ಎಂದು ಡಾ. ಅನಿಮೇಶ್ ಗುಪ್ತಾ ಹೇಳುತ್ತಾರೆ. ಈ ಕಾಯಿಲೆ ಇರುವ ಮಕ್ಕಳು ಹೆಚ್ಚಾಗಿ ನಿಮ್ಮ ಕಡೆಗೆ ಕಣ್ಣು ಹಾಯಿಸುವುದಿಲ್ಲ ಅಥವಾ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅವರಿಂದ ಸಾಧ್ಯವಾಗುವುದಿಲ್ಲ. ಅವರು ಯಾರನ್ನಾದರೂ ನೋಡಿದರೆ ನಗುವುದು ಅಥವಾ ಅವರ ಕೈ ಕುಲುಕುವಂತಹ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗುವುದಿಲ್ಲ.
ಇತರ ಮಕ್ಕಳಿಗೆ ಹೋಲಿಸಿದರೆ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ನಿಮ್ಮ ಮಗುವಿನಲ್ಲಿ ಅಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯವಾಗಿದೆ. ಮಕ್ಕಳ ವೈದ್ಯರು ಮತ್ತು ನರವಿಜ್ಞಾನಿಗಳನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದರಿಂದ ಆ ಮಗು ಅಲ್ಪ-ಸ್ವಲ್ಪವಾದರೂ ಗುಣಮುಖವಾಗಲು ಸಹಾಯವಾಗುತ್ತದೆ.
(ಏಜೆನ್ಸೀಸ್)
ಆಟಿಸಂ ಕಾಯಿಲೆಯನ್ನು ಔಷಧಿ ಮತ್ತು ಚಿಕಿತ್ಸೆಯಿಂದ ನಿಯಂತ್ರಿಸಬಹುದಾಗಿದೆ. ಆದರೆ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದಾಗ್ಯೂ ರೋಗಲಕ್ಷಣಗಳನ್ನು ಸಕಾಲಿಕವಾಗಿ ಗುರುತಿಸುವುದರಿಂದ, ಅದನ್ನು ನಿಯಂತ್ರಿಸಬಹುದು ಮತ್ತು ರೋಗಿಯು ಸ್ವಲ್ಪಮಟ್ಟಿಗೆ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.