ಲೈಫ್‌ಸ್ಟೈಲ್

ಮಕ್ಕಳು ಏಕೆ ಬೆರಳು ಚೀಪುತ್ತಾರೆ? ಪಾಲಕರು ಯಾವಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು?

ಮಕ್ಕಳು ಬೆರಳನ್ನು ಚೀಪುವುದು ಸಾಮಾನ್ಯ. ಇದೊಂದು ಸ್ವಾಭಾವಿಕ ಆಭ್ಯಾಸವಾಗಿದ್ದು ಮಗುವಿಗೆ ಸುರಕ್ಷತೆಯ ಭಾವ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಬೆರಳು ಚೀಪುವ ಅಭ್ಯಾಸವು ಗರ್ಭಾವಸ್ಥೆಯಲ್ಲೇ ಆರಂಭವಾಗುತ್ತದೆ ಮತ್ತು ಜನನದ ನಂತರ ಶೇ. 46ರಷ್ಟು ಮಕ್ಕಳಲ್ಲಿ ಇದು ಮುಂದುವರಿಯುತ್ತದೆ. ಎರಡನೇ ವಯಸ್ಸಿನ ಹೊತ್ತಿಗೆ ಈ ಅಭ್ಯಾಸವು ಕಡಿಮೆಯಾಗಿ ಮಕ್ಕಳು ನಿದ್ರೆ ಮಾಡುವಾಗ, ಒತ್ತಡದ ಸಮಯದಲ್ಲಿ ಅಥವಾ ಅತಿಯಾಗಿ ಆಯಾಸಗೊಂಡಾಗ ಮಾತ್ರ ಕಾಣಬಹುದು. ಸುಮಾರು ನಾಲ್ಕನೇ ವಯಸ್ಸಿನಲ್ಲಿ ಮಕ್ಕಳು ಸಹಜವಾಗಿ ಈ ಅಭ್ಯಾಸವನ್ನು ಬಿಡುತ್ತಾರೆ. ಹಾಗೆ ಬಿಡದೆ ಮುಂದುವರಿದಲ್ಲಿ ಪೋಷಕರು ದಂತವೈದ್ಯರನ್ನು ಕಂಡು ಸಲಹೆ ಪಡೆಯುವುದು ಸೂಕ್ತ.

ಹೀಗೆ ಈ ಆಭ್ಯಾಸ 5-6 ವಯಸ್ಸಿನ ನಂತರವೂ ಮುಂದುವರಿದರೆ ಮೇಲ್ದವಡೆಯ ಮೇಲೆ ಅಧಿಕ ಒತ್ತಡದಿಂದಾಗಿ ಉಬ್ಬುಹಲ್ಲುಗಳಾಗುತ್ತವೆ. open bite, cross bite ಮತ್ತು TMJ ಸಮಸ್ಯೆಗಳು ಉಂಟಾಗಬಹುದು. ಕೆಲವು ಬಾರಿ ಶಾಶ್ವತ ಹಲ್ಲುಗಳು ಹುಟ್ಟುವುದಕ್ಕೂ ತೊಂದರೆಯಾಗುತ್ತದೆ. ಬೆರಳನ್ನು ಚೀಪುವುದರಿಂದ ಮುಖದ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಮೇಲ್ದವಡೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಗದ್ದದ ಮೇಲೆ ಮಣಿಕಟ್ಟಿನ ಒತ್ತಡ ಬೀಳುವುದರಿಂದ ಕೆಳದವಡೆಯ ಬೆಳವಣಿಗೆಯೂ ಕುಂಠಿತಗೊಳ್ಳುವುದು. ಇಷ್ಟೇ ಅಲ್ಲದೆ ಸದಾ ಬೆರಳನ್ನು ಚೀಪುವುದರಿಂದ ಉಗುರಿನ ಸುತ್ತ ಸೋಂಕು ಉಂಟಾಗುತ್ತದೆ ಮತ್ತು ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆ ಕೂಡ ಹೆಚ್ಚು.

ಈ ಅಭ್ಯಾಸವನ್ನು ಬಿಡಿಸುವುದು ಹೇಗೆ?: ಕೆಲವು ಮಕ್ಕಳಿಗೆ ಪೋಷಕರ ಅಥವಾ ಪಾಲಕರ ಗಮನ ಪ್ರೀತಿ ಸರಿಯಾಗಿ ಸಿಗದ ಕಾರಣ ಅವರು 4-5 ವಯಸ್ಸಿನ ನಂತರವೂ ಈ ಅಭ್ಯಾಸವನ್ನು ಮುಂದುವರಿಸುತ್ತಾರೆ. ಇದನ್ನು ಒಂದು ಸಮಸ್ಯೆಯಾಗಿ ಪರಿಗಣಿಸದೆ ಮಗುವಿಗೆ ಈ ಅಭ್ಯಾಸವನ್ನು ಬಿಡಲು ಉತ್ತೇಜಿಸುವ ಮೂಲಕ ಸಹಾಯ ಮಾಡಬೇಕು. ಅವರ ಭಾವನಾತ್ಮಕ ಅಗತ್ಯಗಳನ್ನು ಆಲಿಸಿ ಅವರಿಗೆ ಪ್ರೀತಿ, ಬೆಂಬಲ ಮತ್ತು ಸದಾ ನಾವು ನಿನ್ನೊಂದಿಗಿದ್ದೇವೆ ಎನ್ನುವ ಭರವಸೆಯನ್ನೂ ಕೊಡಿ. ಅವರಿಗೆ ಹೆಚ್ಚು ಇಷ್ಟವಾದ ಆಟಿಕೆಗಳನ್ನು ಕೊಡಿಸುವುದು ಮತ್ತು ಇತರ ರಚನಾತ್ಮಕ ಕಾರ್ಯಗಳಲ್ಲಿ (ಉದಾ: ಪೇಂಟಿಂಗ್, ಕುಶಲಕಲೆ ಇತ್ಯಾದಿ) ತೊಡಗಿಸುವುದು ಸೂಕ್ತ. ಅಲ್ಲದೆ ಬೆರಳನ್ನು ಚೀಪದಿದ್ದಾಗ ಅವರಿಗೆ ಉಡುಗೊರೆ ನೀಡುವ ಮೂಲಕ ಪ್ರಶಂಸೆ, ಬೆಂಬಲ ನೀಡಬೇಕು. ಆದಾಗ್ಯೂ ಮಗು ಬೆರಳು ಚೀಪುವುದನ್ನು ಮುಂದುವರಿಸಿದರೆ ದಂತವೈದ್ಯರ ಬಳಿ ಸಲಹೆ ಪಡೆಯಬೇಕಾಗುತ್ತದೆ. ಅವರು ಮಗುವಿನ ಬಾಯಿಯಲ್ಲಿ palatal crib ಅಥವಾ palatal bar ಎನ್ನುವ appliances ಅಳವಡಿಸಿ ಈ ಅಭ್ಯಾಸವನ್ನು ಬಿಡಲು ಸಹಾಯ ಮಾಡುತ್ತಾರೆ.

ಪ್ರಶ್ನೋತ್ತರ

ನನ್ನ ಮುಂದಿನ ಮೇಲಿನ ಹಲ್ಲುಗಳ ಅಂತರದಲ್ಲಿವೆ. ಎರಡು ಹಲ್ಲುಗಳ ಮಧ್ಯೆ ಅಂತರವಿದೆ. ದಂತವೈದ್ಯರ ಸಲಹೆ ಪಡೆದಿಲ್ಲ. ಎಲ್ಲಿ ಕ್ಲಿಪ್ ಹಾಕಿಸಿಕೊ ಎನ್ನುವರೇನೋ ಅಂತ ಸಂಕೋಚ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆ ತಿಳಿಸಿ.

| ಮದನ್ ದಾವಣಗೆರೆ, 27 ವರ್ಷ

ಮೇಲ್ದವಡೆಯ ಮುಂದಿನ ಎರಡು ಹಲ್ಲುಗಳ ನಡುವೆ ಅಂತರವಿದ್ದಲ್ಲಿ ಅದನ್ನು Midline Diastema ಎಂದು ಕರೆಯುತ್ತೇವೆ. ಇದಕ್ಕೆ ಹಲವು ಕಾರಣಗಳಿದ್ದು ಕಾರಣವನ್ನು ತಿಳಿದು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಕ್ಲಿಪ್ ಹಾಕಿಸಿಕೊಳ್ಳಲು ಮುಜುಗರಪಡುವುದು ಬೇಡ. ceramic brackets ಅಥವಾ invisalgin ಮೂಲಕ ಚಿಕಿತ್ಸೆ ಪಡೆಯಬಹುದು. 

ನೀವೂ ಪ್ರಶ್ನೆ ಕೇಳಿ

ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ವಿಳಾಸ: ಸಂಪಾದಕರು, ಡೆಂಟಲ್ ಕೇರ್ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018