ಲೈಫ್‌ಸ್ಟೈಲ್

ಮಕ್ಕಳಿಗೇಕೆ ಇಷ್ಟೊಂದು ಕೋಪ! ಹೆಚ್ಚುತ್ತಿರುವ ಆಕ್ರಮಣಕಾರಿ ವರ್ತನೆ

ಮಕ್ಕಳ ಕೈಯಲ್ಲಿ ಮೊಬೈಲ್ ಇದೆ. ಬೆರಳ ತುದಿಯಲ್ಲಿ ಜಗತ್ತಿನ ಮಾಹಿತಿಯಿದೆ. ಆದರೆ ಅದೇ ಮೊಬೈಲ್​ನಲ್ಲಿ ಕ್ರೌರ್ಯವನ್ನು ವೈಭವೀಕರಿಸುವ ವಿಡಿಯೋಗಳು, ಹಿಂಸಾತ್ಮಕ ಆಟಗಳು, ಅವರ ವಯಸ್ಸಿಗೆ ಮೀರಿದ ಅಶ್ಲೀಲ ದೃಶ್ಯಗಳು ಸುಲಭವಾಗಿ ಸಿಗುತ್ತಿವೆ. ಇವುಗಳನ್ನು ನೋಡುವ ಮಕ್ಕಳು ಎಲ್ಲರೂ ಹಿಂಸಕರಾಗುತ್ತಾರೆ ಎಂದಲ್ಲ. ಆದರೆ ನಿರಂತರವಾಗಿ ಇಂತಹ ವಿಷಯಗಳಿಗೆ ಒಡ್ಡಿಕೊಳ್ಳುವುದು ಅವರ ಆಲೋಚನೆ, ಭಾವನೆ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ಕೆಲವು ಘಟನೆಗಳು ಮಕ್ಕಳಲ್ಲಿ ಹೆಚ್ಚುತ್ತಿರುವ ಆಕ್ರಮಣಕಾರಿ ವರ್ತನೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ಹರಿಯಾಣದ ಪಂಚಕುಲದಲ್ಲಿ ಅ. 28ರಂದು ನಡೆದ ಘಟನೆಯು ಮಕ್ಕಳಲ್ಲಿ ಹೆಚ್ಚುತ್ತಿರುವ ಆಕ್ರಮಣಕಾರಿ ವರ್ತನೆಗೆ ಇತ್ತೀಚಿನ ಉದಾಹರಣೆ. ಸರಕಾರಿ ಶಾಲೆಯ ಖಾಲಿ ತರಗತಿ ಕೊಠಡಿಯಲ್ಲಿ ಎಂಟು ವರ್ಷದ ಬಾಲಕ, ಆರು ವರ್ಷದ ಬಾಲಕಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಾಲಕಿ ಗಂಭೀರವಾಗಿ ಗಾಯಗೊಂಡು ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಪ್ರಕರಣದ ತನಿಖೆಯ ಜತೆಗೆ ಶಾಲೆಯ ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಬಾಲಕನ ಇಂತಹ ವರ್ತನೆಗೆ ನಿಖರ ಕಾರಣವೇನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿಯಬೇಕಿದೆ. ಆದರೆ ಪ್ರಾಥಮಿಕ ವರದಿಗಳ ಪ್ರಕಾರ, ಇದರ ಹಿಂದೆ ಸಾಮಾಜಿಕ ಜಾಲತಾಣದ ಪ್ರಭಾವವಿದೆ ಎಂಬುದು ಸ್ಪಷ್ಟ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 2024ರ ಏ. 24ರಂದು ನಡೆದ ಮತ್ತೊಂದು ಘಟನೆ ಇನ್ನಷ್ಟು ಆತಂಕಕಾರಿ. ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಳಿಕ 13 ವರ್ಷದ ಬಾಲಕ ತನ್ನ 9 ವರ್ಷದ ಸಹೋದರಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ವಿಷಯವನ್ನು ಮನೆಯವರಿಗೆ ತಿಳಿಸಬಹುದೆಂಬ ಭಯದಿಂದ ಕೊಲೆ ಮಾಡಿದ್ದಾನೆ! ಇದನ್ನು ಪೊಲೀಸರು ದೃಢಪಡಿಸಿದ್ದಾರೆ.

ಈ ಪ್ರಕರಣದಲ್ಲಿ ತಾಯಿ ಮತ್ತು ಇಬ್ಬರು ಅಕ್ಕಂದಿರು ಅಪರಾಧವನ್ನು ಮುಚ್ಚಿಹಾಕಲು ನೆರವಾದ ಆರೋಪವೂ ಕೇಳಿಬಂದಿತ್ತು. ಇಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆಯ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದರೂ, ಇಂತಹ ಅಪರಾಧಕ್ಕೆ ಒಂದೇ ಕಾರಣವಿದೆ ಎಂದೇನಲ್ಲ. ಚೆನ್ನೈನಲ್ಲಿ 2025ರ ಫೆಬ್ರವರಿಯಲ್ಲಿ 28 ವರ್ಷದ ಚಿನ್ನಾ ರಾಬರ್ಟ್ ಎಂಬಾತನನ್ನು ಆರು ಮಂದಿ ಹತ್ಯೆ ಮಾಡಿ, ಬಳಿಕ ಇನ್​ಸ್ಟಾಗ್ರಾಂನಲ್ಲಿ ಆತನ ಸಾವನ್ನು ಘೊಷಿಸುವ ರೀತಿಯಲ್ಲಿ ವಿಡಿಯೋ ಮಾಡಿ ಹಾಕಿದ್ದರು. ಈ ಘಟನೆ ಹಿಂಸೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನದ ವಸ್ತುವಾಗಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿಗೆ ಸಾಕ್ಷಿ. ಈ ಘಟನೆಗಳೆಲ್ಲವೂ ಒಂದೇ ಕಾರಣದಿಂದ ನಡೆದಿವೆ ಎನ್ನಲಾಗದು. ಆದರೆ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಹಿಂಸಾತ್ಮಕ ವರ್ತನೆ, ಲೈಂಗಿಕ ಅಪರಾಧಗಳ ಅನುಕರಣೆ, ಕೋಪವನ್ನು ನಿಯಂತ್ರಿಸಲಾಗದ ಸ್ಥಿತಿ ಹಾಗೂ ಕ್ರೌರ್ಯವನ್ನು ಸಾಮಾನ್ಯವೆಂದು ಭಾವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಆನ್​ಲೈನ್ ಆಟಗಳೂ ಕಾರಣವೇ?

ಎಲ್ಲ ಆನ್​ಲೈನ್ ಆಟಗಳೂ ಕೆಟ್ಟವು ಎನ್ನಲಾಗದು. ಕೆಲವು ಆಟಗಳು ಸೃಜನಶೀಲತೆ, ತಾರ್ಕಿಕ ಚಿಂತನೆ ಮತ್ತು ಟೀಮ್ ಸ್ಪಿರಿಟ್ ಬೆಳೆಸುತ್ತವೆ. ಆದರೆ ಹಿಂಸಾತ್ಮಕ ಆಟಗಳಲ್ಲಿ ಎದುರಾಳಿಯನ್ನು ಕೊಲ್ಲುವುದು, ಶಸ್ತ್ರಾಸ್ತ್ರಗಳಿಂದ ದಾಳಿ ಮಾಡುವುದು, ಪ್ರತೀಕಾರ ತೀರಿಸಿಕೊಳ್ಳುವುದು ಮುಂತಾದವುಗಳೇ ಮುಖ್ಯ ಗುರಿಯಾಗಿರುತ್ತವೆ. ಇಂತಹ ಆಟಗಳನ್ನು ದೀರ್ಘಕಾಲ ಆಡುವ ಮಕ್ಕಳಲ್ಲಿ ಹಿಂಸಾತ್ಮಕ ದೃಶ್ಯಗಳ ಬಗ್ಗೆ ಸಂವೇದನೆ ಕಡಿಮೆಯಾಗುತ್ತದೆ.ಇದಲ್ಲದೆ, ಕೆಲವು ಆಟಗಳಲ್ಲಿ ಧ್ವನಿ ಅಥವಾ ಪಠ್ಯ ಸಂದೇಶಗಳ ಮೂಲಕ ಅಪರಿಚಿತರೊಂದಿಗೆ ಸಂವಹನ ನಡೆಸುವ ಅವಕಾಶವಿರುತ್ತದೆ. ಅಲ್ಲಿ ಅಸಭ್ಯ ಭಾಷೆ, ಬೆದರಿಕೆ, ಅವಮಾನ, ಸವಾಲು ಹಾಕುವುದು ಮತ್ತು ಅಪಾಯಕಾರಿ ವರ್ತನೆಗೆ ಪ್ರಚೋದನೆ ಸಿಗಬಹುದು. ಆಟದಲ್ಲಿ ಸೋತಾಗ ಅಥವಾ ಗೆಲುವು ಕೈತಪ್ಪಿದಾಗ ಅತಿಯಾದ ಕೋಪ, ಕೈಯಲ್ಲಿರುವುದನ್ನು ಎಸೆಯುವುದು, ಮನೆಯವರ ಮೇಲೆ ರೇಗಾಡುವುದು ಕಂಡುಬಂದರೆ ಅದನ್ನು ಕೇವಲ ಆಟದ ಹುಚ್ಚು ಎಂದು ನಿರ್ಲಕ್ಷಿಸಬಾರದು.

ಹಿಂಸೆಯೇ ಮನರಂಜನೆ

ಮಕ್ಕಳ ಮನಸ್ಸು ಅನುಕರಣೆಯಿಂದ ಬಹಳಷ್ಟು ಕಲಿಯುತ್ತದೆ. ಮನೆಯಲ್ಲಿ ಹಿರಿಯರು ಹೇಗೆ ಮಾತನಾಡುತ್ತಾರೆ, ಕೋಪ ಬಂದಾಗ ಹೇಗೆ ವರ್ತಿಸುತ್ತಾರೆ, ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಮಕ್ಕಳು ಗಮನಿಸುತ್ತಾರೆ. ಇದೇ ರೀತಿ ಪರದೆಯ ಮೇಲೆ ಕಾಣುವ ಪಾತ್ರಗಳ ವರ್ತನೆಯನ್ನೂ ಅವರು ಅನುಕರಿಸಬಹುದು. ಸಿನಿಮಾಗಳು, ವೆಬ್ ಸರಣಿಗಳು, ಕಿರು ವಿಡಿಯೋಗಳು ಮತ್ತು ಆಟಗಳಲ್ಲಿ ಹೊಡೆದಾಟ, ಕೊಲೆ, ಬೆದರಿಕೆ, ಪ್ರತೀಕಾರದ ದೃಶ್ಯಗಳು ನಿರಂತರವಾಗಿ ಕಾಣಿಸುತ್ತಿದ್ದರೆ, ಅವುಗಳ ಪರಿಣಾಮ ಅವರ ಮನಸ್ಸಿನ ಮೇಲಾಗುತ್ತದೆ. ಹಿಂಸಾತ್ಮಕ ದೃಶ್ಯಗಳನ್ನು ಪದೇಪದೆ ನೋಡುವುದರಿಂದ ಕೆಲ ಮಕ್ಕಳಲ್ಲಿ ಇತರರ ನೋವಿನ ಬಗ್ಗೆ ಸಂವೇದನೆ ಕಡಿಮೆಯಾಗುತ್ತದೆ. ಸಮಸ್ಯೆ ಎದುರಾದಾಗ ಮಾತುಕತೆ ಅಥವಾ ಸಹನೆಯ ಬದಲು ಬಲಪ್ರಯೋಗವೇ ಪರಿಹಾರ ಎಂಬ ಭಾವನೆ ಮೂಡುತ್ತದೆ. ಅಮೆರಿಕದ ‘ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯರ ಸಂಘ’ದ ಪ್ರಕಾರ, ಪರದೆಯ ಮೇಲಿನ ಹಿಂಸೆಯನ್ನು ನೋಡುವುದರಿಂದ ಮಕ್ಕಳು ಹಿಂಸೆಗೆ ಒಗ್ಗಿಕೊಳ್ಳುವುದು, ಅದನ್ನು ಅನುಕರಿಸುವುದು ಮತ್ತು ಸಮಸ್ಯೆ ಪರಿಹಾರಕ್ಕೆ ಹಿಂಸೆಯನ್ನೇ ಮಾರ್ಗವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆದರೆ ಹಿಂಸಾತ್ಮಕ ವಿಡಿಯೋ ನೋಡಿದ ಪ್ರತಿಯೊಂದು ಮಗುವೂ ಹಿಂಸಕ ಪ್ರವೃತ್ತಿ ಬೆಳೆಸಿಕೊಳ್ಳುತ್ತದೆ ಎಂದರ್ಥವಲ್ಲ.

ಮೊಬೈಲ್ ಮಾತ್ರವೇ ಕಾರಣವಲ್ಲ

ಮಕ್ಕಳ ಆಕ್ರಮಣಕಾರಿ ವರ್ತನೆಗೆ ಮೊಬೈಲ್ ಅಥವಾ ವಿಡಿಯೋಗಳನ್ನೇ ಸಂಪೂರ್ಣ ಕಾರಣವೆಂದು ಹೇಳುವುದು ವೈಜ್ಞಾನಿಕವಾಗಿ ಸರಿಯಲ್ಲ. ಕುಟುಂಬದ ವಾತಾವರಣ, ಮನೆಯಲ್ಲಿ ನಡೆಯುವ ಜಗಳ ಮತ್ತು ಹಿಂಸೆ, ಪಾಲಕರ ನಿರ್ಲಕ್ಷ್ಯ, ಶಾಲೆಯಲ್ಲಿ ಕಿರುಕುಳ, ಸ್ನೇಹಿತರ ಒತ್ತಡ, ಏಕಾಂಗಿತನ, ನಿದ್ರೆಯ ಕೊರತೆ ಹಾಗೂ ಮಾನಸಿಕ ಒತ್ತಡವೂ ಮಕ್ಕಳ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಮಗುವಿಗೆ ತನ್ನ ಸಮಸ್ಯೆ ಹೇಳಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಅದರ ಕೋಪ ಒಳಗೇ ಉಳಿಯಬಹುದು. ನಿರಂತರವಾಗಿ ಅವಮಾನಿಸುವುದು, ಇತರ ಮಕ್ಕಳೊಂದಿಗೆ ಹೋಲಿಸುವುದು, ಹೊಡೆಯುವುದು ಅಥವಾ ಭಯದ ವಾತಾವರಣ ನಿರ್ವಿುಸುವುದೂ ಆಕ್ರಮಣಕಾರಿ ವರ್ತನೆಗೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಕ್ಕಳ ಮೇಲಿನ ಹಿಂಸೆ ಮತ್ತು ಯುವಜನರ ಹಿಂಸಾತ್ಮಕ ವರ್ತನೆಗೆ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಪರಿಸರದ ಹಲವು ಅಂಶಗಳು ಕಾರಣವಾಗುತ್ತವೆ. ಹೀಗಾಗಿ ಪರಿಹಾರವೂ ಬಹುಮುಖವಾಗಿರಬೇಕು.

ಅಶ್ಲೀಲ ವಿಷಯಗಳ ಅಡ್ಡಪರಿಣಾಮ

ಮಕ್ಕಳಿಗೆ ಅಶ್ಲೀಲ ವಿಷಯಗಳು ತಲುಪುವುದು ಈಗ ಕಷ್ಟದ ಕೆಲಸವಲ್ಲ. ಸಾಮಾಜಿಕ ಜಾಲತಾಣದ ವಿಷಯಗಳು, ವೆಬ್​ಸೈಟ್​ಗಳು, ಮೆಸೇಜ್​ಗಳ ಮೂಲಕ ಬರುವ ಲಿಂಕ್​ಗಳು ಮತ್ತು ಸ್ನೇಹಿತರು ಹಂಚುವ ವಿಡಿಯೋಗಳ ಮೂಲಕ ಇಂತಹ ದೃಶ್ಯಗಳು ಅವರ ಮೊಬೈಲ್​ಗೆ ತಲುಪಬಹುದು. ಕೆಲವೊಮ್ಮೆ ಕುತೂಹಲದಿಂದ ಆರಂಭವಾಗುವ ವೀಕ್ಷಣೆ ಕ್ರಮೇಣ ಅಭ್ಯಾಸವಾಗಬಹುದು. ಅಶ್ಲೀಲ ವಿಡಿಯೋಗಳಲ್ಲಿ ತೋರಿಸುವ ಸಂಬಂಧಗಳು, ದೈಹಿಕ ವರ್ತನೆ ಮತ್ತು ಲೈಂಗಿಕ ಕ್ರಿಯೆಗಳು ವಾಸ್ತವ ಜೀವನದ ಆರೋಗ್ಯಕರ ಸಂಬಂಧಗಳ ಪ್ರತಿಬಿಂಬವಾಗಿರುವುದಿಲ್ಲ. ಒಪ್ಪಿಗೆ, ಪರಸ್ಪರ ಗೌರವ, ವೈಯಕ್ತಿಕ ಮಿತಿ ಮತ್ತು ಜವಾಬ್ದಾರಿಯ ಬಗ್ಗೆ ಅರಿವಿಲ್ಲದ ವಯಸ್ಸಿನಲ್ಲಿ ಇವುಗಳನ್ನು ನೋಡುವ ಮಕ್ಕಳು ತಪ್ಪು ಕಲ್ಪನೆಗಳನ್ನು ಬೆಳೆಸಿಕೊಳ್ಳಬಹುದು. ವಿಶೇಷವಾಗಿ ಬಲವಂತ ಅಥವಾ ಅವಮಾನವನ್ನು ಒಳಗೊಂಡ ದೃಶ್ಯಗಳು ಹಾನಿಕಾರಕ ಮನೋಭಾವಕ್ಕೆ ಕಾರಣವಾಗುವ ಅಪಾಯವಿದೆ ಎನ್ನುತ್ತದೆ ಯುನಿಸೆಫ್. ಮಕ್ಕಳಿಗೆ ವಯಸ್ಸಿಗೆ ತಕ್ಕ ಲೈಂಗಿಕ ಶಿಕ್ಷಣ, ಆರೋಗ್ಯಕರ ಸಂಬಂಧಗಳ ಅರಿವು ಮತ್ತು ಸುರಕ್ಷಿತ ಅಂತರ್ಜಾಲ ಬಳಕೆಯ ತಿಳಿವಳಿಕೆ ನೀಡಬೇಕು ಎಂಬುದು ಅದರ ಸಲಹೆ.

ಮಕ್ಕಳಿಗೆ ಬೇಕು ಸುರಕ್ಷಿತ ಸ್ವಾತಂತ್ರ್ಯ

ಮೊಬೈಲ್, ಇಂಟರ್​ನೆಟ್ ಮತ್ತು ಆನ್​ಲೈನ್ ಆಟಗಳನ್ನು ಮಕ್ಕಳಿಂದ ಸಂಪೂರ್ಣ ದೂರವಿಡುವುದು ಇಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಅವು ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗೆ ಅಗತ್ಯವಾದ ಸಾಧನಗಳೂ ಹೌದು. ಆದರೆ ಯಾವ ವಯಸ್ಸಿನಲ್ಲಿ ಯಾವ ವಿಷಯ ನೋಡಬೇಕು, ಯಾವುದರಿಂದ ದೂರವಿರಬೇಕು, ಆನ್​ಲೈನ್​ನಲ್ಲಿ ಎದುರಾಗುವ ಅಪಾಯಗಳನ್ನು ಹೇಗೆ ಗುರುತಿಸಬೇಕು ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಮಕ್ಕಳ ಕೈಗೆ ದುಬಾರಿ ಮೊಬೈಲ್ ಕೊಡುವುದಕ್ಕಿಂತ ಮೊದಲು ಅದನ್ನು ಸುರಕ್ಷಿತವಾಗಿ ಬಳಸುವ ತಿಳಿವಳಿಕೆ ನೀಡುವುದು ಮುಖ್ಯ. ಪಾಲಕರು ತಾವೂ ಮೊಬೈಲ್ ಬಳಕೆಯಲ್ಲಿ ಮಾದರಿಯಾಗಬೇಕು. ಮನೆಯಲ್ಲಿ ಎಲ್ಲರೂ ಸದಾ ಮೊಬೈಲ್​ನಲ್ಲೇ ಮುಳುಗಿದ್ದರೆ ಮಕ್ಕಳಿಂದ ಮಾತ್ರ ನಿಯಂತ್ರಣ ನಿರೀಕ್ಷಿಸುವುದು ಕಷ್ಟ. ಮಕ್ಕಳ ಕೋಪವನ್ನು ಕೇವಲ ಅವರ ಸ್ವಭಾವದ ಸಮಸ್ಯೆ ಎಂದು ತಳ್ಳಿಹಾಕಲಾಗದು. ಅದು ಕೆಲವೊಮ್ಮೆ ಅವರೊಳಗಿನ ನೋವು, ಒತ್ತಡ, ಭಯ ಅಥವಾ ಗೊಂದಲದ ಅಭಿವ್ಯಕ್ತಿಯಾಗಿರಬಹುದು. ಅವರ ಮಾತು ಕೇಳುವವರು, ಸಮಸ್ಯೆ ಹಂಚಿಕೊಳ್ಳಲು ಸುರಕ್ಷಿತ ವಾತಾವರಣ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕರೆ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯಬಹುದು. ಮಕ್ಕಳನ್ನು ಮೊಬೈಲ್​ನಿಂದ ದೂರವಿಡುವುದಷ್ಟೇ ಅಲ್ಲ, ಅವರ ಮನಸ್ಸಿಗೆ ಹತ್ತಿರವಾಗುವುದೂ ಇಂದಿನ ಪಾಲಕರ ದೊಡ್ಡ ಜವಾಬ್ದಾರಿ.

ಪಾಲಕರು ಗಮನಿಸಬೇಕಾದ ಬದಲಾವಣೆಗಳು

ಮಕ್ಕಳ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಪಾಲಕರು ಎಚ್ಚರಿಕೆ ವಹಿಸಬೇಕು. ಸಣ್ಣ ವಿಷಯಕ್ಕೂ ಅತಿಯಾಗಿ ಕೋಪಗೊಳ್ಳುವುದು, ಇತರ ಮಕ್ಕಳನ್ನು ಹೊಡೆಯುವುದು, ಪ್ರಾಣಿಗಳಿಗೆ ಹಿಂಸೆ ನೀಡುವುದು, ಅಸಭ್ಯ ಪದಗಳನ್ನು ಬಳಸುವುದು, ಹಿಂಸಾತ್ಮಕ ದೃಶ್ಯಗಳನ್ನು ಮತ್ತೆ ಮತ್ತೆ ನೋಡಲು ಬಯಸುವುದು, ಇತರರ ನೋವಿನ ಬಗ್ಗೆ ನಿರ್ಲಕ್ಷ್ಯ ತೋರುವುದು ಇಂತಹ ಲಕ್ಷಣಗಳನ್ನು ಗಮನಿಸಬೇಕು. ಮಕ್ಕಳು ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಪಾಲಕರ ಜವಾಬ್ದಾರಿ. ಆದರೆ ಅವರ ಮೊಬೈಲ್ ಕಿತ್ತುಕೊಳ್ಳುವುದು ಅಥವಾ ಪ್ರತಿಯೊಂದು ಚಟುವಟಿಕೆಯನ್ನೂ ಅನುಮಾನದಿಂದ ನೋಡುವುದೇ ಪರಿಹಾರವಲ್ಲ. ಮಕ್ಕಳು ಏಕೆ ಆ ವಿಡಿಯೋ ನೋಡುತ್ತಿದ್ದಾರೆ, ಆಟದಲ್ಲಿ ಅವರಿಗೆ ಏನು ಆಸಕ್ತಿ, ಆನ್​ಲೈನ್​ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸ್ನೇಹಪೂರ್ವಕವಾಗಿ ತಿಳಿದುಕೊಳ್ಳಬೇಕು. ಪ್ರಶ್ನೆ ಕೇಳಿದಾಗ ಗದರಿಸುವ ಅಥವಾ ಶಿಕ್ಷಿಸುವ ಬದಲು ಮುಕ್ತವಾಗಿ ಮಾತನಾಡಲು ಅವಕಾಶ ನೀಡಬೇಕು.

ಮಕ್ಕಳ ವಯಸ್ಸಿಗೆ ತಕ್ಕಂತೆ ಮೊಬೈಲ್ ಬಳಕೆಯ ಸಮಯ ನಿಗದಿಪಡಿಸಬೇಕು. ಮಲಗುವ ಕೋಣೆಯಲ್ಲಿ ಮೊಬೈಲ್ ಇಡುವುದನ್ನು ತಪ್ಪಿಸಬೇಕು. ಊಟದ ಸಮಯ, ಓದುವ ಸಮಯ ಮತ್ತು ಮಲಗುವ ಮುನ್ನ ಮೊಬೈಲ್ ಬಳಕೆಗೆ ಮಿತಿ ಇರಲಿ. ಅಪರಿಚಿತರಿಂದ ಬರುವ ಸಂದೇಶಗಳು, ಲಿಂಕ್​ಗಳು ಮತ್ತು ವಿಡಿಯೋಗಳನ್ನು ತೆರೆಯಬಾರದು ಎಂದು ತಿಳಿಸಬೇಕು. ಯೂಟ್ಯೂಬ್, ಸಾಮಾಜಿಕ ಜಾಲತಾಣಗಳು ಮತ್ತು ಆಟಗಳಲ್ಲಿ ಲಭ್ಯವಿರುವ ಮಕ್ಕಳ ಸುರಕ್ಷತಾ ವ್ಯವಸ್ಥೆ ಹಾಗೂ ಪಾಲಕರ ನಿಯಂತ್ರಣದ ಆಯ್ಕೆಗಳನ್ನು ಬಳಸಬಹುದು. ಆದರೆ ತಾಂತ್ರಿಕ ನಿಯಂತ್ರಣವೊಂದೇ ಸಾಕಾಗುವುದಿಲ್ಲ; ಪಾಲಕರ ಗಮನವೂ ಅಗತ್ಯ.

ಶಾಲೆಗಳ ಜವಾಬ್ದಾರಿಯೂ ದೊಡ್ಡದು

ದಿನದ ಬಹುಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಆದ್ದರಿಂದ ಶಾಲೆಗಳು ಪಠ್ಯಪುಸ್ತಕದ ಶಿಕ್ಷಣದ ಜತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ಕೌಶಲಗಳಿಗೂ ಆದ್ಯತೆ ನೀಡಬೇಕು. ಕೋಪ ಬಂದಾಗ ಅದನ್ನು ಹೇಗೆ ನಿಯಂತ್ರಿಸಬೇಕು, ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸಬೇಕು, ಸ್ನೇಹಿತರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕು. ಶಾಲೆಯಲ್ಲಿ ಮಕ್ಕಳ ನಡುವಿನ ಜಗಳ, ಬೆದರಿಕೆ, ಕಿರುಕುಳ ಮತ್ತು ಏಕಾಂಗಿತನದ ಲಕ್ಷಣಗಳನ್ನು ಶಿಕ್ಷಕರು ಗಮನಿಸಬೇಕು. ಹಿಂಸಾತ್ಮಕ ವರ್ತನೆ ತೋರಿದ ಮಗುವನ್ನು ತಕ್ಷಣ ಅಪರಾಧಿ ಎಂದು ಹಣೆಪಟ್ಟಿ ಕಟ್ಟುವ ಬದಲು ಅದರ ಹಿನ್ನೆಲೆ ತಿಳಿದುಕೊಳ್ಳಬೇಕು. ಅಗತ್ಯವಿದ್ದರೆ ಮಕ್ಕಳ ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರ ನೆರವು ಪಡೆಯಬೇಕು.

ಶಿಕ್ಷೆಗಿಂತ ಸಂವಾದ ಮುಖ್ಯ

ಮಕ್ಕಳಲ್ಲಿ ಕೋಪ ಕಾಣಿಸಿಕೊಂಡಾಗ ಹೊಡೆಯುವುದು, ಬೈಯುವುದು ಅಥವಾ ಎಲ್ಲರ ಮುಂದೆ ಅವಮಾನಿಸುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೋಪಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು. ಮಗು ತನ್ನ ಭಾವನೆಗಳನ್ನು ಮಾತಿನಲ್ಲಿ ಹೇಳಿಕೊಳ್ಳಲು ಕಲಿಸಬೇಕು. ಕ್ರೀಡೆ, ಸಂಗೀತ, ಚಿತ್ರಕಲೆ, ಪುಸ್ತಕ ಓದು, ಹೊರಾಂಗಣ ಆಟಗಳಂತಹ ಚಟುವಟಿಕೆಗಳಿಗೆ ಸಮಯ ಮೀಸಲಿಡಬೇಕು. ಇವು ಮಕ್ಕಳ ಗಮನವನ್ನು ಪರದೆಯಿಂದ ಬೇರೆಡೆಗೆ ಸೆಳೆಯುವುದರ ಜತೆಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸುತ್ತವೆ.ಮಗು ನಿರಂತರವಾಗಿ ಹಿಂಸಾತ್ಮಕ ವರ್ತನೆ ತೋರಿದರೆ, ಇತರರಿಗೆ ಹಾನಿ ಮಾಡುವ ಬೆದರಿಕೆ ಹಾಕಿದರೆ ಅಥವಾ ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ತಜ್ಞರ ನೆರವು ಪಡೆಯುವುದು ಅಗತ್ಯ. ಮಗುವನ್ನು ದೂಷಿಸುವ ಬದಲು ಅದರ ವರ್ತನೆ ಹಿಂದಿನ ಕಾರಣ ಅರಿಯಬೇಕು.