Beer Damage: ಮದ್ಯಪಾನ ಪ್ರಿಯರಿಗೆ ಹಾಟ್ ಮತ್ತು ಬಿಯರ್ ಅಂದ್ರೆ ಚೆನ್ನಾಗಿ ಗೊತ್ತಿದೆ. ಒಂದಷ್ಟು ಮಂದಿ ಹಾಟ್ ಡ್ರಿಂಕ್ಸ್ ನೆಚ್ಚಿಕೊಂಡರೆ, ಇನ್ನೊಂದಷ್ಟು ಕುಡುಕರು, ಬಿಯರ್ ಅನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರಲ್ಲಿ, ಬಿಯರ್ ಕಿಡ್ನಿಯಲ್ಲಿನ ಕಲ್ಲುಗಳು ಕರಗಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಆಳವಾಗಿದೆ. ಈ ಪ್ರಯತ್ನಕ್ಕೆ ಹಲವರು ಮುಗಿಬೀಳುತ್ತಾರೆ. ಇನ್ನು, ವೈದ್ಯರ ಸಲಹೆಗಳಲ್ಲಿ, ಮದ್ಯಪಾನ ಆರೋಗ್ಯಕ್ಕೆ ಎಂದಿಗೂ ಹಾನಿಕಾರಕವೇ. ಆದರೆ, ಇತ್ತೀಚಿನ ಅಧ್ಯಯನವೊಂದರಲ್ಲಿ ಶಾಕಿಂಗ್ ಸತ್ಯಗಳು ಹೊರಬಿದ್ದಿರುವುದು ಸದ್ಯ ಹುಬ್ಬೇರಿಸುವಂತಿದೆ.
ಎಣ್ಣೆ ಕುಡಿಯೋದರಿಂದ ಕಿಡ್ನಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇಂದಿಗೂ ಹಲವರಲ್ಲಿದೆ. ಆದರೆ, ಈ ನಂಬಿಕೆಗೆ ವಿರುದ್ಧವಾದ ಅಂಶವೊಂದನ್ನು ಅಧ್ಯಯನ ಬಹಿರಂಗಪಡಿಸಿದೆ. ಬಿಯರ್ ಮಾತ್ರವಲ್ಲ, ವಿಸ್ಕಿ, ರಮ್ನಂತಹ ಮದ್ಯಪಾನವೂ ಕಿಡ್ನಿಗಳ ಆರೋಗ್ಯಕ್ಕೆ ಹೆಚ್ಚು ಅಪಾಯ ತಂದೊಡ್ಡಬಹುದು. ಅದರಲ್ಲೂ ತೀವ್ರವಾದ ಮೂತ್ರಪಿಂಡದ ಗಾಯದ (AKI) ಅಪಾಯ ಹೆಚ್ಚುವ ಸಾಧ್ಯತೆಯಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಬಿಯರ್ ಕುಡಿಯುವುದರಿಂದ ಕಿಡ್ನಿಗಳಿಗೆ ಯಾವುದೇ ಡ್ಯಾಮೇಜ್ ಆಗೋದಿಲ್ಲ. ಬದಲಿಗೆ ಕಲ್ಲುಗಳಿದ್ದರೆ, ಅವುಗಳು ನಿಧಾನವಾಗಿ ಮೂತ್ರದಲ್ಲಿ ಹೋಗುತ್ತದೆ. ಅದಕ್ಕೆ ಈ ಬಿಯರ್ ಸೇವನೆಯೇ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ, ಈ ಅಭಿಪ್ರಾಯ ತಪ್ಪು ಎಂದು ಅಧ್ಯಯನವೊಂದು ಅಂತಿಮಗೊಳಿಸಿದೆ. ಮದ್ಯಪಾನ ಮಾಡುವುದರಿಂದ ಲಿವರ್ ಮಾತ್ರವಲ್ಲ, ಕಿಡ್ನಿ ಆರೋಗ್ಯವೂ ಹಾಳಾಗುತ್ತದೆ. ಬಿಯರ್ ಮತ್ತು ವಿಸ್ಕಿ, ರಮ್ ಮತ್ತು ವೋಡ್ಕಾದಂತಹ ಸ್ಪಿರಿಟ್ಗಳನ್ನು ಕುಡಿಯುವ ಜನರು ತೀವ್ರವಾದ ಮೂತ್ರಪಿಂಡದ ಗಾಯದ (ಎಕೆಐ) ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಕಂಡುಬಂದಿದೆ.
ಆದಾಗ್ಯೂ, ಬಿಯರ್ಗೆ ಹೋಲಿಸಿದರೆ ವೈನ್ ಕುಡಿಯುವ ಜನರಲ್ಲಿ ಈ ಅಪಾಯ ಕಡಿಮೆಯಾಗಿದೆ. ಈ ಅಧ್ಯಯನವನ್ನು ಬ್ರಿಟನ್ನ ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ್ದರು. ಈ ವಿವರಗಳನ್ನು ವೈದ್ಯಕೀಯ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್ನಲ್ಲಿ ಪ್ರಕಟಿಸಲಾಗಿದೆ. ಮದ್ಯ ವ್ಯಸನ ಹೊಂದಿರುವ 2,50,791 ಜನರ ಆರೋಗ್ಯ ಡೇಟಾವನ್ನು ಯುಕೆ ಬಯೋಬ್ಯಾಂಕ್ ಮೂಲಕ ಪರಿಶೀಲಿಸಲಾಗಿದೆ. ಅವರ ಆರೋಗ್ಯವನ್ನು ಸರಾಸರಿ 14 ವರ್ಷಗಳ ಕಾಲ ಮೇಲ್ವಿಚಾರಣೆ ಮಾಡಲಾಯಿತು ಮತ್ತು ಆ ಸಮಯದಲ್ಲಿ, 10,335 ಜನರಲ್ಲಿ ತೀವ್ರವಾದ ಮೂತ್ರಪಿಂಡದ ಗಾಯಗಳಿರುವುದು ಗೊತ್ತಾಗಿದೆ.
ವಾರಕ್ಕೆ ಕೇವಲ ಒಂದು ಯೂನಿಟ್ ಮದ್ಯ ಸೇವಿಸುವವರಿಗೆ ಹೋಲಿಸಿದರೆ ವಾರಕ್ಕೆ ಸುಮಾರು 9 ಯೂನಿಟ್ ಕುಡಿಯುವವರಲ್ಲಿ ಮೂತ್ರಪಿಂಡದ ಸಮಸ್ಯೆಗಳು ಉಂಟಾಗುವ ಅಪಾಯವು ಶೇ.26ರಷ್ಟು ಹೆಚ್ಚು ಎಂದು ಕಂಡುಬಂದಿದೆ. ಅದೇ ರೀತಿ, ವಾರಕ್ಕೆ 3 ಯೂನಿಟ್ ಬಿಯರ್ ಸೇವಿಸಿದವರಿಗೆ ಹೋಲಿಸಿದರೆ 27 ಯೂನಿಟ್ ಸೇವಿಸಿದವರಿಗೆ ಶೇ.15ರಷ್ಟು ಹೆಚ್ಚಿನ ಅಪಾಯವಿದೆ. ಇದರರ್ಥ ನೀವು ಹೆಚ್ಚು ಬಿಯರ್ ಅಥವಾ ಸ್ಪಿರಿಟ್ ಕುಡಿಯುತ್ತೀರಿ ಎಂದರೆ, ಮೂತ್ರಪಿಂಡದ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ.
ಮೂತ್ರಪಿಂಡಗಳ ಮುಖ್ಯ ಕಾರ್ಯವೆಂದರೆ ಮೂತ್ರದ ಮೂಲಕ ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಹೊರಕಳಿಸುವುದು. ಹೆಚ್ಚು ಬಿಯರ್ ಅಥವಾ ವಿಸ್ಕಿ, ರಮ್ ಮತ್ತು ವೋಡ್ಕಾದಂತಹ ಆಲ್ಕೋಹಾಲ್ ಸೇವನೆಯು ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚಾಗಿ ಮೂತ್ರ ವಿಸರ್ಜಿಸುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರೊಂದಿಗೆ ಹೆಚ್ಚು ಬಿಯರ್ ಮತ್ತು ಸ್ಪಿರಿಟ್ ಕುಡಿಯುವುದರಿಂದ ಮೂತ್ರಕೋಶದಲ್ಲಿ ಊತ ಹೆಚ್ಚಾಗುತ್ತದೆ, ಇದು ಮೂತ್ರಪಿಂಡಗಳಿಗೆ ತುಂಬಾ ಅಪಾಯಕಾರಿ ಎಂದು ಸಂಶೋಧನೆ ಎತ್ತಿಹಿಡಿದಿದೆ.
ವಿಪರೀತ ಮೂತ್ರಪಿಂಡದ ಗಾಯ, ಅಥವಾ ಎಕೆಐ, ಮೂತ್ರಪಿಂಡಗಳು ಇದ್ದಕ್ಕಿದ್ದಂತೆ ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುವ ಸ್ಥಿತಿಯಾಗಿದೆ. ಇದು ರಕ್ತವನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರ ರೋಗಲಕ್ಷಣಗಳು, ಕಡಿಮೆ ಮೂತ್ರವಿಸರ್ಜನೆ, ವಾಂತಿ ಮತ್ತು ವಿಪರೀತ ಆಯಾಸವನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಡಯಾಲಿಸಿಸ್ ಅಗತ್ಯವಾಗಬಹುದು. ವೈನ್ ಬಿಯರ್ಗಿಂತ ಕಡಿಮೆ ಅಪಾಯಕಾರಿ ಎಂದು ತೋರಿಸಿದ್ದೇ ಆದರೂ, ಇದು ಮೂತ್ರಪಿಂಡಗಳಿಗೆ ಉತ್ತಮವಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).