ಲೈಫ್‌ಸ್ಟೈಲ್

ಸುಖವನ್ನು ಅರಸುವುದೆಲ್ಲಿ?

| ಚಿದಂಬರ ಮುನವಳ್ಳಿ

ನಮ್ಮ ಭವ್ಯ ಭಾರತ ದೇಶದಂತೆಯೇ ಪಾಶ್ಚಿಮಾತ್ಯ ಗ್ರೀಕ್ ಸಂಸ್ಕೃತಿಯೂ ಮನುಕುಲಕ್ಕೆ ಸಾಕ್ರೆಟಿಸ್, ಅರಿಸ್ಟಾಟಲ್, ಪ್ಲೇಟೋರಂಥ ಮಾನವರತ್ನಗಳನ್ನು ಕೊಟ್ಟಿದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಘಟನೆ. ವಿಶಾಲವಾದ ಆ ಈಜುಗೊಳದಲ್ಲಿ ಸ್ನಾನ ಮಾಡಲು ಶ್ರೀಮಂತ ಕುಟುಂಬದ ಅನೇಕ ಯುವಕ-ಯುವತಿಯರು ಬರುತ್ತಿದ್ದರು. ಮಹಾನ್ ತತ್ತ್ವಜ್ಞಾನಿ ಸಾಕ್ರೆಟಿಸ್ ತನ್ನ ಗಡ್ಡದ ಮೇಲೆ ಕೈಯಾಡಿಸುತ್ತ ಒಂದು ಮೂಲೆಯಲ್ಲಿ ಕಂಬಕ್ಕೆ ಒರಗಿ, ಆನಂದದಿಂದ ಕಾಲ ಕಳೆಯುತ್ತಿರುವ ಅವರನ್ನೇ ನೋಡುತ್ತ ನಿಂತಿದ್ದ. ಎರಡು ತಾಸಿನ ನಂತರ ಹೊರಬಂದ ಅವರನ್ನು ಕೇಳಿದ, ‘ನೀವೆಲ್ಲ ಇಲ್ಲಿ ಯಾಕೆ ಬರುತ್ತಿರಿ?’ ‘ನಮ್ಮ ಒತ್ತಡ, ಉದ್ವೇಗದ ಜೀವನದಿಂದ ಹೊರಬಂದು ಸುಖಪಡಲು ಬರುತ್ತೇವೆ. ಈಗ ಸಮಯವಾಗಿದೆ ನಾಳೆ ಮತ್ತೆ ಬರುತ್ತೇವೆ’ ಎಂದವರೇ ಹೊರಟು ಬಿಟ್ಟರು. ಮರುದಿನ ಅವರೆಲ್ಲ ಮತ್ತೆ ಬಂದು ಈಜಾಡಿ ಎರಡು ತಾಸಿನ ನಂತರ ಹೊರಟಾಗ ಕೇಳಿದ, ‘ಸುಖ ಸಿಕ್ಕಿತೇ?’ ‘ಹೌದು ನಿಶ್ಚಿತವಾಗಿ ಖುಷಿ ಸಿಕ್ಕಿದೆ, ಸಂಶಯವೇ ಇಲ್ಲ’. ‘ಹಾಗಾದರೆ ಸುಖ ಕೊಡುವ ಈ ಜಾಗವನ್ನು ಬಿಟ್ಟು ನೀವೆಲ್ಲ ಏಕೆ ಹೋಗುತ್ತೀರಿ, ಇಲ್ಲೇ ಇರಬಹುದಲ್ಲ? ಸುಖಕ್ಕೋಸ್ಕರ ಬರುತ್ತೀರಿ. ಎರಡು ಗಂಟೆಯ ನಂತರ ಸಾಕೆನಿಸಿ ಹೋಗಿ ಬಿಡುತ್ತೀರಿ. ಮತ್ತೆ ಸುಖಕ್ಕಾಗಿ ಹಾತೊರೆದು ಬರುತ್ತೀರಿ’. ಸಾಕ್ರೆಟಿಸ್ ಪ್ರಶ್ನೆ ಅವರಿಗೆ ಗೊಂದಲ ಮೂಡಿಸಿತು.

ಈ ಮುದುಕ ಏನು ಹೇಳುತ್ತಿದ್ದಾನೋ ತಿಳಿಯದು. ‘ಖುಷಿ ಪಡುವುದೆಂದರೆ ಹೀಗೆಯೇ ಇರುತ್ತದೆ. ನಿನಗೆ ಅರ್ಥವಾಗುವದಿಲ್ಲ ಅಷ್ಟೇ’ ಎಂದರು. ಆಗ ಸಾಕ್ರೆಟಿಸ್, ‘ತಪ್ಪು ಜಾಗದಲ್ಲಿ ನೀವು ಸುಖ ಹುಡುಕುತ್ತಿರುವಿರೆಂದು ಅನಿಸುವದಿಲ್ಲವೇ? ಇದಕ್ಕಿಂತ ಎಲ್ಲಿ ನಿರಂತರ ಸುಖ ಸಿಗುವುದೋ, ಎಲ್ಲಿ ಬೇಜಾರಾಗುವ ಪ್ರಶ್ನೆಯೇ ಇರುವುದಿಲ್ಲವೋ ಅಂಥ ಸ್ಥಳವನ್ನು ಹುಡುಕಬಹುದಲ್ಲವೇ?’ ‘ಹೌದಾ! ಅಂಥ ಜಾಗ ನಿನಗೆ ಗೊತ್ತಿದೆಯೋ?’ ಎಂದರು. ‘ನಿಮಗೆ ಆಸಕ್ತಿಯಿದ್ದು ನನ್ನೊಡನೆ ಬಂದರೆ ಅದನ್ನು ತೋರಿಸುತ್ತೇನೆ’ ಎಂದು ತತ್ತ್ವಜ್ಞಾನದ ಕಡೆಗೆ ಕರೆದೊಯ್ದು ಸ್ವಯಂಚಿಂತನೆಗೆ ಹಚ್ಚಿಸಿ ‘ಸುಖ ಎನ್ನುವುದು ಹೊರಗಿನ ಯಾವುದೇ ವಸ್ತು ಅಥವಾ ವ್ಯಕ್ತಿಯಲ್ಲಿ ಇರದೆ ಅದು ತನ್ನ ಸ್ವಂತ ಮನಸ್ಸಿನ ಸ್ಥಿತಿಯಾಗಿದೆ. ಒಂದು ಸಲ ಆ ಸುಖದ ಅನುಭವ ಅಂತರಂಗದಲ್ಲಿ ಸ್ಥಿರವಾದರೆ ಯಾವ ಬಾಹ್ಯವಸ್ತುವಿನ ಅವಶ್ಯಕತೆಯೂ ಇರುವದಿಲ್ಲ’ ಎಂದು ತನ್ನ ಪ್ರವಚನಗಳ ಮೂಲಕ ತಿಳಿಸಿ ಹೇಳಿದ. ಅವರಿಗೆ ಮನವರಿಕೆಯಾಯಿತು. ಕ್ರಮೇಣ ಅದನ್ನು ಅಳವಡಿಸಿಕೊಂಡು ಸ್ವಾನಂದದ ಸ್ಥಿತಿಯೆಡೆಗೆ ಸಾಗತೊಡಗಿದರು.

ಗೀತೆಯಲ್ಲಿ ‘ಉದ್ಧರೇದಾತ್ಮನಾತ್ಮಾನಂ ನಾತ್ಮಾ ನಮವಸಾದಯೇತ್’ ‘ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ಅಧೋಗತಿಗೆ ತಳ್ಳಿಕೊಳ್ಳಬಾರದು’ ಎಂದಿದ್ದಾನೆ ಭಗವಂತ. ನಿಜವಾದ ಕರ್ಮಯೋಗಿಯು ತನ್ನ ಸುಖ-ದುಃಖಕ್ಕೆ ಬೇರೆ ಯಾರನ್ನೂ ಹೊಣೆಗಾರರನ್ನಾಗಿ ಮಾಡದೆ ಅಂತಃಕರಣದಲ್ಲಿ ಸ್ಥಿರವಾಗಿ ಇರುತ್ತಾನೆ. ಯಾರಾದರೂ ಬಂದು ನಮ್ಮನ್ನು ಸುಖಿಯನ್ನಾಗಿ ಮಾಡುತ್ತಾರೆಂಬ ಭ್ರಾಂತಿ ಯಾಕೆ? ಅಥವಾ

ದುಃಖವನ್ನುಂಟು ಮಾಡಿದ್ದಾರೆಂಬ ನೆಪವೇಕೆ? ಅದು ನಮಗೇ ಸೇರಿದ್ದು. ಯಾವ ದಿವಸ ಈ ಮಾನಸಿಕ ಸ್ವತಂತ್ರತೆಯನ್ನು ನಾವು ಬೇರೆಯವರ ಕೈಯಲ್ಲಿ ಕೊಡುತ್ತೇವೆಯೋ ಅಂದು ನಾವೇ ನಮ್ಮ ಶತ್ರುಗಳಾಗಿ ಬಿಡುತ್ತೇವೆ. ನಮಗೆ ನಾವೇ ಮಿತ್ರರಾಗೋಣ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)