ಲೈಫ್‌ಸ್ಟೈಲ್

ಯಾವ ರೀತಿಯ ಎದೆನೋವು ತುಂಬಾ ಡೇಂಜರ್​? ಈ ಲಕ್ಷಣಗಳು ಕಾಣಿಸಿಕೊಂಡ್ರೆ ತಕ್ಷಣ ಎಚ್ಚೆತ್ತುಕೊಳ್ಳಿ!

ಎದೆನೋವು ಬಂದರೆ ಸಾಕು ಎಲ್ಲರು ಭಯಪಡುತ್ತಾರೆ ಮತ್ತು ತುಂಬಾ ಚಿಂತಿಸುತ್ತಾರೆ. ಎದೆನೋವು ಎಂದರೆ ಖಂಡಿತವಾಗಿಯೂ ಹೃದಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುತ್ತದೆ ಎಂದು ಎಲ್ಲರು ಭಾವಿಸುತ್ತಾರೆ. ಆದರೆ, ಎಲ್ಲ ಎದೆನೋವು ಹೃದಯ ಸಮಸ್ಯೆ ಅಥವಾ ಹೃದಯಾಘಾತದ ಲಕ್ಷಣವಲ್ಲ. ಇದು ಅಜೀರ್ಣ ಅಥವಾ ಸ್ನಾಯು ಸೆಳೆತವು ಆಗಿರಬಹುದು. ಹಾಗಾದರೆ ನೀವು ಯಾವ ರೀತಿಯ ಎದೆ ನೋವಿನ ಬಗ್ಗೆ ಎಚ್ಚರದಿಂದ ಇರಬೇಕು? ಎದೆ ನೋವು ಅಥವಾ ಹೃದಯ ನೋವನ್ನು ಕಂಡುಹಿಡಿಯುವುದು ಹೇಗೆ? ಎಂಬುದನ್ನು ನಾವೀಗ ತಿಳಿಯೋಣ.

ಅಂದಹಾಗೆ ಎಲ್ಲ ಎದೆ ನೋವು ಒಂದೇ ಆಗಿರುವುದಿಲ್ಲ. ತೀವ್ರವಾದ ಎದೆ ನೋವು ಸಾಮಾನ್ಯವಾಗಿ ಹೃದಯದ ಸಮಸ್ಯೆಗಳಿಗೆ ಸಂಬಂಧಿಸಿದೆ. ನಿಮ್ಮ ಎದೆಯ ಮೇಲೆ ಏನೋ ಭಾರವಾದ ವಸ್ತು ಕುಳಿತಿದೆ ಎಂದು ನೀವು ಭಾವಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎದೆನೋವು ನಿಮ್ಮ ತೋಳುಗಳು, ಕುತ್ತಿಗೆ, ದವಡೆ, ಅಥವಾ ಬೆನ್ನಿಗೂ ಹರಡಬಹುದು. ಈ ನೋವು ನಿಮ್ಮ ಎದೆಯ ಎಡಕ್ಕೆ ವಿಸ್ತರಿಸಿದರೆ ಅದು ಹೃದಯದ ಸಮಸ್ಯೆಯ ಸಂಕೇತವಾಗಿರಬಹುದು ಎಚ್ಚರ!

ನಿಮಗೆ ಎದೆ ನೋವು ಮತ್ತು ಉಸಿರಾಟದ ತೊಂದರೆ ಇದ್ದರೆ, ಅದು ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ. ಉಸಿರಾಟದ ತೊಂದರೆ ವಿಚಾರದಲ್ಲಿ ನೀವು ತಕ್ಷಣ ಗಮನವಹಿಸಬೇಕು.

ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಹೇಗೆ?

ಎದೆನೋವು, ಉಸಿರಾಟದ ತೊಂದರೆ ಮತ್ತು ಬೆವರುವಿಕೆಯಂತಹ ಹೃದಯಾಘಾತದ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನೀವು ಒಮ್ಮೆಗೆ ಇದನ್ನು ಅನುಭವಿಸಿದರೆ, ತಕ್ಷಣ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆ ಮಾಡಿ. ಒಂದು ವೇಳೆ ಯಾವುದೇ ಕಾರಣವಿಲ್ಲದೆ ನೀವು ಇದ್ದಕ್ಕಿದ್ದಂತೆ ದಣಿದಿದ್ದರೆ, ಅದು ಕೂಡ ನಿಮ್ಮ ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ತುಂಬಾ ಆಯಾಸವನ್ನು ಹೊಂದಿದ್ದರೆ, ವಿಶೇಷವಾಗಿ ಮಹಿಳೆಯರಲ್ಲಿ ವಿಪರೀತ ಆಯಾಸವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಹೃದಯಾಘಾತದ ಸಮಯದಲ್ಲಿ ಪ್ರತಿ ಸೆಕೆಂಡ್ ಕೂಡ ಎಣಿಕೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು ಎಷ್ಟು ಬೇಗನೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತೀರಿ ಎಂಬುದರ ಮೇಲೆ ನಿಮ್ಮ ಚೇತರಿಕೆ ಅವಲಂಬಿಸಿರುತ್ತದೆ.

ಸ್ನಾಯು ಸೆಳೆತ ಅಥವಾ ಪಕ್ಕೆಲುಬಿನ ಊತವು ಎದೆ ನೋವನ್ನು ಉಂಟುಮಾಡಬಹುದು. ಎದೆಯ ಮೇಲೆ ಒತ್ತಡದಿಂದ ನೋವು ಉಲ್ಬಣಗೊಂಡರೆ, ಅದು ಹೃದಯಕ್ಕೆ ಸಂಬಂಧಿಸಿಲ್ಲ ಎಂದು ಅರ್ಥ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.