ಲೈಫ್‌ಸ್ಟೈಲ್

ಎಂತಹ ಕೊಬ್ಬನ್ನು ಯಾವ ರೀತಿಯಲ್ಲಿ ಸೇವಿಸುವುದು ಆರೋಗ್ಯಕರ?

ಕೊಬ್ಬು ಎಂದರೆ ಮೂಗು ಮುರಿಯುವುದು ಹಲವರಿಗೆ ರೂಢಿಯಾಗಿಬಿಟ್ಟಿದೆ. ಆದರೆ ಒಳ್ಳೆಯ ಕೊಬ್ಬು ನಮ್ಮ ದೇಹದಲ್ಲಿ ಹಲವಾರು ಪ್ರಮುಖ ಕಾರ್ಯಗಳನ್ನು ಮಾಡುತ್ತದೆ. ಬೇರೆ ಯಾವ ಪೋಷಕಾಂಶದಿಂದಲೂ ಆ ಕಾರ್ಯ ಸಾಧ್ಯವಾಗುವುದಿಲ್ಲ. ಅವಶ್ಯಕತೆ ಇದ್ದಾಗ ಬಳಸಿಕೊಳ್ಳಲು ಬೇಕಾದ

ಶಕ್ತಿಯನ್ನು ಸಂಗ್ರಹಿಸಲು ಕೊಬ್ಬು ಬೇಕು. ಬಹಳಷ್ಟು ರೀತಿಯ ಪೋಷಕಾಂಶಗಳನ್ನು, ಅದರಲ್ಲೂ ವಿಶೇಷವಾಗಿ ವಿಟಮಿನ್ ಎ, ಡಿ ಮತ್ತು ಈ ಗಳನ್ನು ಕೊಬ್ಬಿನ ಸಹಾಯವಿಲ್ಲದೇ ದೇಹ ಹೀರಿಕೊಳ್ಳದು. ಜೀವಕೋಶಗಳು ಸರಿಯಾಗಿ ಕೆಲಸ ಮಾಡಲು, ವಿವಿಧ ಅಂಗಗಳು ಹಾರ್ವೇನ್​ಗಳನ್ನು ಸ್ವೀಕರಿಸಲು ಕೊಬ್ಬಿನ ಅವಶ್ಯಕತೆ ಇದೆ. ಹಸಿವು ಮತ್ತು ಹೊಟ್ಟೆ ತುಂಬುವಿಕೆಯ ನಿಯಂತ್ರಣಕ್ಕೆ ಇದು ಸಹಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಕೊಬ್ಬು ಬೇಕು. ರಕ್ತದಲ್ಲಿ ಸಕ್ಕರೆಯ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಕೊಬ್ಬಿನ ಪಾತ್ರ ತುಂಬಾ ದೊಡ್ಡದು. ಇನ್ಸುಲಿನ್ ಅನ್ನು ನಮ್ಮ ಜೀವಕೋಶಗಳು ಸರಿಯಾಗಿ ಬಳಸಿಕೊಳ್ಳಲೂ ಕೊಬ್ಬು ಬೇಕು. ಮಿದುಳು ಆಗಿರುವುದು ಕೊಬ್ಬಿನಿಂದಲೇ. ಹಾಗಾಗಿ ಮಿದುಳಿನ ಕಾರ್ಯ ಸರಿಯಾಗಿ ನಡೆಯಲು ಕೊಬ್ಬಿನ ಸರಿಯಾದ ಪ್ರಮಾಣದ ಸೇವನೆ ಆಗಲೇಬೇಕು. ದೇಹದ ಪ್ರಮುಖ ಅಂಗಗಳು ಪೆಟ್ಟಿಗೆ ಒಳಗಾಗದಂತೆ ಕುಶನ್ ರೀತಿಯಲ್ಲಿ ಕೊಬ್ಬು ರಕ್ಷಿಸುತ್ತದೆ. ನಮ್ಮ ಸಂಧಿಗಳಲ್ಲಿ ಇರುವುದು ಕೊಬ್ಬೇ. ಅದು ಕ್ಷಯಿಸಿದಂತೆ ಸಂಧಿಗಳ ಸವಕಳಿ ಆಗುತ್ತಾ ಹೋಗುತ್ತದೆ. ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಕೊಬ್ಬು ಅತ್ಯಂತ ಅವಶ್ಯಕ.

ಇಷ್ಟೆಲ್ಲಾ ಅನುಕೂಲಕರವಾದ ಕೊಬ್ಬನ್ನು ನಾವು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡದಿದ್ದರೆ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಲೇಬೇಕಾಗುತ್ತದೆ. ಹಾಗಾದರೆ ನಾವು ಎಂತಹ ಕೊಬ್ಬನ್ನು ಸೇವಿಸಬೇಕು? ಯಾವ ರೀತಿಯಲ್ಲಿ ಸೇವಿಸಬೇಕು? ಮತ್ತು ಸಾಲುಗಟ್ಟಿರುವ ಹಬ್ಬಗಳಲ್ಲಿ ಕರಿಯಲು ಯಾವ ರೀತಿಯ ಎಣ್ಣೆಯನ್ನು ಬಳಸಬೇಕು ಎಂಬುದನ್ನು ತಿಳಿಯೋಣ. ಸಾಮಾನ್ಯವಾಗಿ ರಿಫೈನ್ಡ್ ಎಣ್ಣೆಯನ್ನು ಬಳಸುವುದು ನಮಗೆ ರೂಢಿಯಾಗಿಬಿಟ್ಟಿದೆ. ಆದರೆ ರಾಸಾಯನಿಕಗಳ ಬಳಕೆಯ ಕಾರಣದಿಂದ ಅದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಹಾಗಾಗಿ ನಾವು ಒಳ್ಳೆಯ ಕೊಬ್ಬನ್ನು ಮಾತ್ರ ಸೇವಿಸುವುದರ ಬಗ್ಗೆ ಗಮನ ಹರಿಸಬೇಕು. ಮೊದಲನೆಯದಾಗಿ ತುಪ್ಪ. ಆಯುರ್ವೆದ ಗ್ರಂಥಗಳು ತುಪ್ಪವನ್ನು ಮಂಗಳಕರವೆಂದೂ, ಆರೋಗ್ಯಕ್ಕೆ ಅತ್ಯುತ್ತಮವಾದದ್ದೆಂದೂ, ನಿತ್ಯ ಸೇವನೆಗೆ ಯೋಗ್ಯವೆಂದೂ ಹೇಳುತ್ತವೆ. ಮಿದುಳಿಗೆ ಅದ್ಭುತ ಶಕ್ತಿಯನ್ನು ಕೊಡುವ, ದೇಹದ ಕಾಂತಿಯನ್ನು ಹೆಚ್ಚಿಸುವ, ಇಡೀ ದೇಹದ ಆರೋಗ್ಯಕ್ಕೆ ತುಂಬ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುವ ತುಪ್ಪವನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ಇನ್ನು, ಕೊಬ್ಬರಿ ಎಣ್ಣೆ. ಎದೆಯ ಹಾಲಿನಲ್ಲಿರುವ ಲಾರಿಕ್ ಆಸಿಡ್ ಅನ್ನು ಕೊಬ್ಬರಿ ಎಣ್ಣೆ ಹೊಂದಿದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುವ, ಮೂಳೆಗೆ ಶಕ್ತಿಯನ್ನು ಕೊಡುವ, ಸಂಧಿಗಳ ಶಕ್ತಿಯನ್ನು ವೃದ್ಧಿಸುವ, ಕೂದಲುಗಳ ಬುಡಕ್ಕೆ ಪುಷ್ಟಿಯನ್ನು ನೀಡುವ ಕೊಬ್ಬರಿ ಎಣ್ಣೆ ಅಡುಗೆಯಲ್ಲಿ ಬಳಕೆಗೆ ತುಂಬಾ ಯೋಗ್ಯವಾದುದು. ಶೇಂಗಾ ಎಣ್ಣೆ ಕೂಡಾ ಅತ್ಯಂತ ಪ್ರಯೋಜಕ. ಶೇಂಗಾ ಎಣ್ಣೆಯ ಬಳಕೆಯಿಂದ ಮಾಂಸಖಂಡಗಳು ಮತ್ತು ನರಗಳಿಗೆ ಶಕ್ತಿ ಸಿಗುತ್ತದೆ. ಜೀರ್ಣಕ್ರಿಯೆಗೆ ಇದು ಅನುಕೂಲಕರ. ಹೃದಯದ ಆರೋಗ್ಯಕ್ಕೆ, ರೋಗನಿರೋಧಕ ಶಕ್ತಿ ಹೆಚ್ಚಲು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು, ಚರ್ಮದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೂಡ ಇದು ಸಹಾಯಮಾಡುತ್ತದೆ. ಕುಸುಬಿ ಎಣ್ಣೆ ಉಷ್ಣ ಗುಣವನ್ನು ಹೊಂದಿದ್ದು ಕಫದೋಷವನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಹೃದಯದ ಆರೋಗ್ಯಕ್ಕೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು, ಸಂಧಿಗಳ ಶಕ್ತಿಯನ್ನು ಹೆಚ್ಚಿಸಿ ನೋವುಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಹಾಗಾಗಿ ನಾವು ರಿಫೈನ್ಡ್ ಎಣ್ಣೆಯನ್ನು ಬಿಟ್ಟು ಇಂತಹ ಆರೋಗ್ಯಕರ ಕೊಬ್ಬುಗಳನ್ನು ಬಳಸಲು ಪ್ರಾರಂಭಿಸಬೇಕು.

ಕರಿಯಲು ಯಾವ ಎಣ್ಣೆ ಸೂಕ್ತ?: ಕರಿಯಲು ಅತ್ಯಂತ ಸೂಕ್ತವಾದ ಎಣ್ಣೆ ಎಂದರೆ ಕೊಬ್ಬರಿ ಎಣ್ಣೆ. ಏಕೆಂದರೆ ಇದರ ಕುದಿಯುವ ಬಿಂದು ಸಾಮಾನ್ಯ ಎಣ್ಣೆಗಿಂತ ಹೆಚ್ಚಿರುತ್ತದೆ. ಹಾಗಾಗಿ ಅದರಲ್ಲಿರುವ ಕೊಬ್ಬು ಸುಲಭವಾಗಿ ಆಕ್ಸಿಡೈಸ್ ಆಗಲು ಸಾಧ್ಯವಿಲ್ಲ. ಅದು ಇಷ್ಟವಾಗದವರು ಶೇಂಗಾ ಎಣ್ಣೆ ಅಥವಾ ಕುಸುಬಿ ಎಣ್ಣೆಗಳನ್ನು ಬಳಸಬಹುದು. ಇಂತಹ ಎಣ್ಣೆಗಳನ್ನು ಬಳಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾದಂತೆ ಕಂಡರೂ ಅದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಕಾರಣದಿಂದ ಹಾಗೆ ಕಾಣುತ್ತದೆ. ಇದು ರಕ್ತದಲ್ಲಿ ಆಕ್ಸಿಡೆಸ್ಡ್ ಎಲ್​ಡಿಎಲ್ ಎಂಬ ಅತ್ಯಂತ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

(ಪ್ರತಿಕ್ರಿಯಿಸಿ: vvsudina@gmail.com)