ಮಗುವಿನ ಬೆಳವಣಿಗೆಯಲ್ಲಿ ಹಲ್ಲು ಮತ್ತು ಬಾಯಿಯ ಬೆಳವಣಿಗೆಗಳೂ ಬಹಳ ಮುಖ್ಯವಾಗಿರುತ್ತವೆ. ಮಗು ಹುಟ್ಟುವ ಮೊದಲೇ ಅಂದರೆ ಭ್ರೂಣಾವಸ್ಥೆಯಲ್ಲೇ ಹಲ್ಲುಗಳು ಬೆಳೆಯಲು ಪ್ರಾರಂಭವಾಗುತ್ತವೆ. ನಂತರ ಮಗುವಿಗೆ 6-12 ತಿಂಗಳಿರುವಾಗ ಮೊದಲನೆಯ ಹಲ್ಲು ಹುಟ್ಟುತ್ತದೆ. ಸಾಮಾನ್ಯವಾಗಿ ಮಗುವಿಗೆ ಮೂರು ವರ್ಷ ತುಂಬುವ ಹೊತ್ತಿಗೆ ಎಲ್ಲ ಹಲ್ಲುಗಳು ಬಂದಿರುತ್ತವೆ. ಇವುಗಳನ್ನು ಹಾಲುಹಲ್ಲುಗಳು (primary teeth) ಎಂದು ಕರೆಯುತ್ತಾರೆ. ಮಗುವು 6-7 ವರ್ಷವಿರುವಾಗ ಹಾಲುಹಲ್ಲುಗಳು ಉದುರತೊಡಗುತ್ತವೆ ಮತ್ತು 12-14ನೇ ವಯಸ್ಸಿನ ಹೊತ್ತಿಗೆ ಎಲ್ಲ ಹಾಲುಹಲ್ಲುಗಳನ್ನು ಕಳೆದುಕೊಂಡು ಶಾಶ್ವತ ಹಲ್ಲುಗಳನ್ನು ಕಾಣಬಹುದು.
ಹೇಗಿದ್ದರೂ ಹಾಲುಹಲ್ಲುಗಳು ಬಿದ್ದುಹೋಗಿ ಹೊಸ ಹಲ್ಲುಗಳು ಬರುತ್ತವೆ ಎಂದು ನಿರ್ಲಕ್ಷಿಸುವುದು ತಪ್ಪು. ಬಾಯಿಯ ಬೆಳವಣಿಗೆಯಲ್ಲಿ ಹಾಲುಹಲ್ಲುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಶಾಶ್ವತ ಹಲ್ಲುಗಳು ಬರುವ ತನಕ ಹಾಲುಹಲ್ಲುಗಳು ಅದರ ಜಾಗವನ್ನು ಕಾಯ್ದಿರಿಸುತ್ತವೆ ಮತ್ತು ಹಾಲುಹಲ್ಲಿನ ಬೇರುಗಳು ಶಾಶ್ವತ ಹಲ್ಲುಗಳು ಹುಟ್ಟಲು ಮಾರ್ಗಸೂಚಿಯಂತೆ ಕೆಲಸ ಮಾಡುತ್ತವೆ. ಇಷ್ಟೇ ಅಲ್ಲದೆ ಮಗುವಿನ ಮಾತಿನ ಬೆಳವಣಿಗೆ, ನಗು, ದವಡೆಯ ಮೂಳೆಗಳು, ಮುಖದ ಸ್ನಾಯುಗಳ ಬೆಳವಣಿಗೆ ಮತ್ತು ಆಹಾರವನ್ನು ಅಗಿಯುವುದಕ್ಕೂ ಹಾಲುಹಲ್ಲುಗಳು ಸಹಕಾರಿಯಾಗಿರುತ್ತವೆ. ಹುಳುಕಾದ ಹಾಲುಹಲ್ಲಿನಿಂದ ಕೆಳಗಿರುವ ಶಾಶ್ವತ ಹಲ್ಲಿಗೂ ಹಾನಿಯುಂಟಾಗಿ ವಿವಿಧ ಸಮಸ್ಯೆಗಳಿಗೆ ದಾರಿಯಾಗಬಹುದು. ಆದ್ದರಿಂದ ಹಾಲುಹಲ್ಲುಗಳನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕೆಲವು ಮಕ್ಕಳು ಬಾಯಿಯಲ್ಲಿ ಹಾಲಿನ ಬಾಟಲಿಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ತಪ್ಪು. ಇದರಿಂದ ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಗು ಬೆಳೆದು ತನ್ನ ಹಲ್ಲು ಮತ್ತು ಬಾಯಿಯ ಬಗ್ಗೆ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುವವರೆಗೂ ಅದನ್ನು ಸರಿಯಾಗಿ ನೋಡಿಕೊಳ್ಳುವುದು ಪಾಲಕರ ಕರ್ತವ್ಯ. ಪ್ರತಿ ಆರು ತಿಂಗಳಿಗೆ ಒಮ್ಮೆಯಾದರೂ ದಂತವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಪ್ರಶ್ನೋತ್ತರ
# ನಾನು ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತೇನೆ. ಆದರೂ ಹಲ್ಲುಗಳ ಮೇಲಿನ ಕಲೆ ಕಡಿಮೆಯಾಗಿಲ್ಲ. ಸೂಕ್ತ ಸಲಹೆ ನೀಡಿ.
| ಗಿರೀಶ ಆರ್. ಗುಡಿ 23 ವರ್ಷ
ಹಲ್ಲಿನ ಕಲೆಗಳಲ್ಲಿ ಆಂತರಿಕ ಹಾಗೂ ಬಾಹ್ಯ ಎಂದು ಎರಡು ಬಗೆ. ಆಂತರಿಕ ಕಲೆಗಳು ಹಲ್ಲಿನ ಒಳಭಾಗದಿಂದ ಉಂಟಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಫ್ಲೋರೈಡ್ ಕಲೆಗಳು ಅಥವಾ ಹಲ್ಲಿನಲ್ಲಿ ಆಂತರಿಕ ರಕ್ತಸ್ರಾವ ಉಂಟಾದಾಗ - ಹೀಗೆ ಹಲವು ಬಗೆ. ಇನ್ನು ಬಾಹ್ಯ ಕಲೆಗಳು ಹಲ್ಲಿನ ಮೇಲ್ಮೆ ೖಯಲ್ಲಿ ಉಂಟಾಗುವಂಥವು. ಇವು ಸಾಮಾನ್ಯವಾಗಿ ತಂಬಾಕು ಬಳಕೆಯಿಂದ, ಅತಿಯಾಗಿ ಕಾಫಿ ಅಥವಾ ಚಹಾ ಕುಡಿಯುವುದರಿಂದ ಮತ್ತು ಆಮ್ಲೀಯ ಪಾನೀಯಗಳಿಂದಲೂ ಉಂಟಾಗುತ್ತದೆ. ಯಾವ ರೀತಿಯ ಕಲೆಗಳಿವೆ ಎಂದು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯಬಹುದು.