Late night dinner health risks 
ಲೈಫ್‌ಸ್ಟೈಲ್

ನಿತ್ಯ ರಾತ್ರಿ 9 ಗಂಟೆಯ ನಂತರ ಊಟ ಮಾಡ್ತೀದ್ದೀರಾ?; ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರಿಕೆ!..Late Nigh Dinner

ಪ್ರಮುಖ ಮುಖ್ಯಾಂಶಗಳು

  • ರಾತ್ರಿ 9 ಗಂಟೆಯ ನಂತರ ಊಟ ಮಾಡುವುದರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ
  • ತಡರಾತ್ರಿ ಆಹಾರ ಸೇವನೆ ರಕ್ತದೊತ್ತಡ ಹೆಚ್ಚಿಸಿ, ಹೃದಯಾಘಾತ ಮತ್ತು ಸ್ಟ್ರೋಕ್ ಗಂಭೀರ ಸಮಸ್ಯೆಗೆ ಕಾರಣ
  • ರಾತ್ರಿ 7 ರಿಂದ 8 ಗಂಟೆಯೊಳಗೆ ಲಘು ಆಹಾರ ಸೇವಿಸುವುದು ಹೃದಯದ ಆರೋಗ್ಯ ಎಷ್ಟು ಲಾಭ?
Late night dinner health risks: ಈಗಿನ ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಲೇಟ್​ನೈಟ್ ಕೆಲಸದಿಂದ ನಮ್ಮ ಆಹಾರ ಶಿಸ್ತು ಹಾಳಾಗಿದೆ. ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿಯ ಊಟವನ್ನು ಹೊಟ್ಟೆಗೆ ಬೇಕಾದಂತೆ ಇಳಿಸಿಕೊಳ್ಳದೆ, ನಮಗೆ ಬೇಕಾದ ಸಮಯದಲ್ಲಿ ಊಟ ಮಾಡುತ್ತೇವೆ. ಇದು ಆರೋಗ್ಯದ ಮೇಲೆ ಎಷ್ಟರವರೆಗೂ ಪರಿಣಾಮ ಬೀರುತ್ತದೆ ಎಂದು ಹೃದ್ರೋಗ ತಜ್ಞರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. 

ತಡವಾಗಿ ಊಟ ಮಾಡುವುದರಿಂದಾಗುವ ಪರಿಣಾಮ?

ಪ್ರತಿದಿನ ರಾತ್ರಿ 9 ಗಂಟೆಯ ನಂತರ ಊಟ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಇದು  ಹೃದಯದ ಆರೋಗ್ಯ, ಟೈಪ್​ 2  ಮಧುಮೇಹ, ರಕ್ತದೊತ್ತಡ ಮತ್ತು ನಿದ್ದೆಯ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.

ನೈಸರ್ಗಿಕ ಆಂತರಿಕ ಗಡಿಯಾರಕ್ಕೆ ಸಮಸ್ಯೆ

ನಮ್ಮ ದೇಹಕ್ಕೆ 'ಸಿರ್ಕಾಡಿಯನ್ ರಿದಮ್' ಎಂಬ ನೈಸರ್ಗಿಕ ಆಂತರಿಕ ಗಡಿಯಾರ ಇರುತ್ತದೆ.  ರಾತ್ರಿ ವೇಳೆ ದೇಹವು ಬೇಗನೆ ವಿಶ್ರಾಂತಿ ಮೋಡ್​ಗೆ ಹೋಗಬೇಕಾಗುತ್ತದೆ. ಈ ಸಮಯದಲ್ಲಿ ರಕ್ತದೊತ್ತಡ ಸಹಜವಾಗಿ ಕಡಿಮೆಯಾಗುತ್ತದೆ.  ಮೆಟಬಾಲಿಸಂ ನಿಧಾನಗೊಳ್ಳುತ್ತದೆ. 
 9 ಗಂಟೆಯ ನಂತರ ಊಟ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆದುಕೊಳ್ಳುವ ಬದಲಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟಪಡಬೇಕು. ಇದು ದೇಹದ 'ಸಿರ್ಕಾಡಿಯನ್ ರಿದಮ್'  ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

ನಿದ್ರೆ ಮೇಲೆ ಪರಿಣಾಮ

ತಡವಾಗಿ ಊಟ ಮಾಡುವುದರಿಂದ ಅಜೀರ್ಣತೆ ಉಂಟಾಗಬಹುದು. ಊಟ ಮಾಡಿದ ತಕ್ಷಣ ಮಲಗಿದರೆ, ಗುಣಮಟ್ಟವನ್ನು ಕೆಡಿಸುವುದು ಮಾತ್ರವಲ್ಲದೆ, ರಾತ್ರಿಯ ವೇಳೆ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಏರಿಕೆಗೂ ಕಾರಣವಾಗಬಹುದು. ಕಳಪೆ ನಿದ್ರೆಯು ಉರಿಯೂತ, ಹಾರ್ಮೋನುಗಳ ಅಸಮತೋಲನ  ಹೃದಯರಕ್ತನಾಳದ ಒತ್ತಡಕ್ಕೆ ಕಾರಣವಾಗುತ್ತದೆ. ದೀರ್ಘಕಾಲದ ನಿದ್ರೆಯ ಅಡಚಣೆಯು ಹೃದಯ ಕಾಯಿಲೆ, ಬೊಜ್ಜು ಮತ್ತು ಮಧುಮೇಹದ ಅಪಾಯಕ್ಕೆ ದೂಡುತ್ತದೆ. 
ತಡರಾತ್ರಿ ಊಟ ಮಾಡುವುದರಿಂದ ರಕ್ತದೊತ್ತಡ ಅಧಿಕವಾಗುತ್ತದೆ. ಆಸಿಡ್ ರಿಫ್ಲಕ್ಸ್ ಮತ್ತು ಜೀರ್ಣಕ್ರಿಯೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದು ರಾತ್ರಿಯ ಸಮಯದಲ್ಲಿ ಹೃದಯದ ಬಡಿತವನ್ನು ತೀವ್ರಗೊಳಿಸಿ, ಎದೆ ಬಿಗಿತದಂತಹ ಅನುಭವವನ್ನು ನೀಡಬಹುದು.

ಸ್ಟ್ರೋಕ್ ಬರುವ ಸಾಧ್ಯತೆ 

ತಡವಾಗಿ ಊಟ ಮಾಡುವವರಲ್ಲಿ ಸ್ಟ್ರೋಕ್ ಬರುವ ಸಾಧ್ಯತೆ ಗಣನೀಯವಾಗಿ ಹೆಚ್ಚಿರುತ್ತದೆ. ರಾತ್ರಿಯ ಸಮಯದಲ್ಲಿ ದೇಹವು ಗ್ಲುಕೋಸ್ ಅನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇನ್ಸುಲಿನ್ ಕಾರ್ಯಕ್ಷಮತೆ ಕಡಿಮೆಯಾಗಿ ಟೈಪ್-2 ಮಧುಮೇಹ ಹಾಗೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಪರಿಹಾರವೇನು?

ರಾತ್ರಿ ಎಂಟು ಗಂಟೆಯೊಳಗೆ ಊಟವನ್ನು ಮಾಡಿ ಮುಗಿಸುವುದು ಆರೋಗ್ಯಕ್ಕೆ ಒಳ್ಳೆಯದು.  ಊಟ ಮುಗಿಸಿದ ನಂತರ ಮಲಗುವ ಮುನ್ನ ಕನಿಷ್ಠ 2 ರಿಂದ 3 ಗಂಟೆಗಳ ಅಂತರವಿರಬೇಕು. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ, ಉತ್ತಮ ನಿದ್ದೆ ಬರುವಂತೆ ಮಾಡುತ್ತದೆ. ಅಲ್ಲದೆ ಆರೋಗ್ಯಕರ ಹೃದಯಕ್ಕೆ ದಾರಿ ಮಾಡಿಕೊಡುತ್ತದೆ, (ಏಜೆನ್ಸೀಸ್).