ತಾಯಿ ಗರ್ಭದಲ್ಲಿರುವ ಶಿಶು ದೃಶ್ಯ
- ಜನನಕ್ಕೂ ಮೊದಲು ತಾಯಿಯ ಗರ್ಭದಲ್ಲಿ ಮಗುವಿನ ದಿನಚರಿ ಹೇಗಿರುತ್ತೆ?
- ದಿನದ 24 ಗಂಟೆಗಳ ಅವಧಿ ಶಿಶುವಿನ ನಿದ್ರೆ, ಎಚ್ಚರ ಯಾವಾಗ?
- ಇಲ್ಲಿವೆ ನೋಡಿ ಕೆಲವು ಕುತೂಹಲಕಾರಿ ಸಂಗತಿಗಳು
Baby in Womb: 9 ತಿಂಗಳ ಕಾಲ ನಮ್ಮನ್ನು ಹೆತ್ತು-ಹೊತ್ತು ಸಾಕುವ ತಾಯಿಗೆ ಅದೆಷ್ಟು ನಮನಗಳನ್ನು ಸಲ್ಲಿಸಿದರೂ ಸಾಲದು. ಕೋಟಿ ದೇವರಿಗೆ ಕೈಮುಗಿಯುವುದೂ ಒಂದೇ, ಜನ್ಮ ಕೊಟ್ಟ ತಾಯಿಗೆ ಕೈಮುಗಿಯುವುದೂ ಒಂದೇ. ಗರ್ಭದಲ್ಲಿ ತನ್ನ ಮಗುವಿನ ಹುಟ್ಟಿಗಾಗಿ ತೀವ್ರ ಕಾತರದಿಂದ ಕಾಯುವ ತಾಯಿಯೂ, ಆ ಶಿಶುವಿನ ಪ್ರತಿಯೊಂದು ಚಲನವಲನಗಳನ್ನು ಬಹಳ ಸೂಕ್ಷ್ಮವಾಗಿ ಅರಿಯುತ್ತಾಳೆ. ಇದು ಆಕೆ ಮತ್ತು ವೈದ್ಯರಿಗೆ ಬಿಟ್ಟರೆ ಇನ್ಯಾರಿಗೂ ಅಷ್ಟಾಗಿ ತಿಳಿದಿರುವುದಿಲ್ಲ. ಹಲವರಿಗೆ ಇಂದಿಗೂ ಜನನಕ್ಕೂ ಮುನ್ನ ತಾಯಿಯ ಗರ್ಭದಲ್ಲಿ ಮಗು ಎಷ್ಟೊತ್ತು ನಿದ್ರಿಸುತ್ತೆ? ಎಚ್ಚರವಿರುತ್ತೆ? ಎಂಬ ಸಂಗತಿಗಳನ್ನು ತಿಳಿಯುವ ಕುತೂಹಲವಿದೆ. ಅದಕ್ಕೆ ಇಲ್ಲಿವೆ ನೋಡಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು.
ವಿಶೇಷವಾಗಿ ತಾಯಂದಿರಿಗೆ, ಮಗು ಗರ್ಭದಲ್ಲಿ ಏನು ಮಾಡುತ್ತದೆ? ಯಾವಾಗ ಮಲಗುತ್ತದೆ? ಎಚ್ಚರವಾಗುತ್ತದೆ? ಎಂಬ ಮುಂತಾದ ವಿಷಯಗಳನ್ನು ತಿಳಿಯುವ ಆಸಕ್ತಿ ಹೆಚ್ಚಿರುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಗರ್ಭದಲ್ಲಿರುವ ಮಗು ದಿನದ ಹೆಚ್ಚಿನ ಸಮಯವನ್ನು ನಿದ್ರೆಯಲ್ಲೇ ಕಳೆಯುತ್ತದೆ. ಗರ್ಭಾವಸ್ಥೆ ಮುಂದುವರೆದಂತೆ ಅದರ ನಿದ್ರೆಯ ಮಾದರಿಯೂ ಬದಲಾಗುತ್ತದೆ ಎನ್ನಲಾಗಿದೆ. ತಾಯಿಯ ಗರ್ಭದಲ್ಲಿರುವ ಮಗು ದಿನದ ಶೇ.90ರಿಂದ 95ರಷ್ಟು ವಿಶ್ರಾಂತಿ ಪಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಶಿಶು 22ರಿಂದ 23 ಗಂಟೆಗಳವರೆಗೆ ನಿದ್ರಿಸಬಹುದು. ಈ ನಿದ್ರೆ ಒಂದೇ ಬಾರಿಗೆ ಉಳಿಯುವುದಿಲ್ಲ. ಅದು ಕೆಲ ಹೊತ್ತು ನಿದ್ರಿಸುತ್ತದೆ ಮತ್ತು ಬಳಿಕ ಸ್ವಲ್ಪ ಹೊತ್ತು ಮತ್ತೆ ಎಚ್ಚರಗೊಂಡು ಚಲಿಸುತ್ತದೆ. ಇದು ತಾಯಿಗೆ ತಿಳಿಯುತ್ತದೆ.
ಮೊದಲ 3 ತಿಂಗಳಲ್ಲಿ ಹೇಗಿರುತ್ತೆ?
ಗರ್ಭಧಾರಣೆಯ ಮೊದಲ 12 ವಾರಗಳಲ್ಲಿ ಶಿಶುವಿನ ಮಿದುಳು ವೇಗವಾಗಿ ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ, ನಿದ್ರೆಯ ಸ್ಪಷ್ಟ ಮಾದರಿ ಇನ್ನೂ ರಚನೆಯಾಗಿರುವುದಿಲ್ಲ. ಮಗು ಹೆಚ್ಚಾಗಿ ವಿಶ್ರಾಂತಿ ಸ್ಥಿತಿಯಲ್ಲೇ ಇರುತ್ತದೆ. ಚಲನೆಗಳು ಸಹ ಬಹಳ ಕಡಿಮೆಯೇ.
ಎರಡನೇ ತ್ರೈಮಾಸಿಕದಲ್ಲಿ ಚಲನೆಗಳು ಶುರು
13 ಮತ್ತು 27 ವಾರಗಳ ನಡುವೆ ನರಮಂಡಲವು ಮತ್ತಷ್ಟು ಬೆಳವಣಿಗೆಯಾಗುತ್ತದೆ. ಈ ಸಮಯದಲ್ಲಿ, ನಿದ್ರೆ ಮತ್ತು ಎಚ್ಚರ ಚಕ್ರಗಳು ಕ್ರಮೇಣ ರೂಪುಗೊಳ್ಳುತ್ತವೆ. ಮಗುವಿನ ಈ ಸ್ಲೀಪ್ ಸೈಕಲ್ ಸಾಮಾನ್ಯವಾಗಿ 20ರಿಂದ 40 ನಿಮಿಷಗಳವರೆಗೆ ಇರುತ್ತದೆ. ಈ ಹಂತದಲ್ಲಿ ಅನೇಕ ತಾಯಂದಿರು ಮೊದಲು ತಮ್ಮ ಮಗುವಿನ ಚಲನೆಯನ್ನು ಗಮನಿಸುತ್ತಾರೆ.
ಮೂರನೇ ತ್ರೈಮಾಸಿಕದಲ್ಲಿ ನಿದ್ರೆಯ ಮಾದರಿಗಳು ಮತ್ತಷ್ಟು ಸುಧಾರಣೆ
28ನೇ ವಾರದ ಬಳಿಕ ಮಗುವಿನ ಸ್ಲೀಪ್ ಸೈಕಲ್ ಇನ್ನಷ್ಟು ಸ್ಪಷ್ಟವಾಗುತ್ತವೆ. ಪ್ರತಿ ಚಕ್ರವು ಸುಮಾರು 45 ನಿಮಿಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ REM ಮತ್ತು REM ಅಲ್ಲದ ನಿದ್ರೆಯ ಹಂತಗಳು ಸಹ ಕಂಡುಬರುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ. ಮಿದುಳಿನ ಬೆಳವಣಿಗೆ ಮತ್ತು ಸ್ಮರಣಶಕ್ತಿಯ ರಚನೆಯಲ್ಲಿ ಆರ್ಇಎಂ ಮಗುವಿನ ನಿದ್ರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.
ತಾಯಿಯ ನಿದ್ರೆ ಮಗುವಿನ ಮೇಲೆ ಪರಿಣಾಮ?
ತಾಯಿಯ ಜೀವನಶೈಲಿ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ನಿದ್ರೆ, ಪೋಷಣೆ ಮತ್ತು ಲಘು ವ್ಯಾಯಾಮವು ಮಗು ಆರೋಗ್ಯಕರವಾಗಿ ಬೆಳೆಯಲು ಬೆಂಬಲಿಸುತ್ತದೆ. ಕೆಲವು ಹಾರ್ಮೋನುಗಳು ಜರಾಯುವಿನ ಮೂಲಕ ಮಗುವನ್ನು ತಲುಪುತ್ತವೆ ಮತ್ತು ಅದರ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ ಎಂದು ಹೇಳಲಾಗಿದೆ,(ಏಜೆನ್ಸೀಸ್).
ನಿಮ್ಮ ಗಮನಕ್ಕೆ: ಮೇಲ್ಕಂಡ ವಿಷಯಗಳನ್ನು ಇಂಟರ್ನೆಟ್ನಲ್ಲಿ ಮತ್ತು ಕೆಲವೆಡೆಯಿಂದ ಸಂಗ್ರಹಿಸಲಾಗಿದೆ. ಈ ವಿಷಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳಿತು.