ನಮ್ಮ ಸುತ್ತಮುತ್ತ ಕೋಟ್ಯಂತರ ರೋಗಕಾರಕ ಸೂಕ್ಷ್ಮಕ್ರಿಮಿಗಳು ಪರಿಸರದಲ್ಲಿ ವ್ಯಾಪಿಸಿರುತ್ತದೆ. ಹಾಗಿದ್ದೂ ಎಲ್ಲ ರೋಗಗಳೂ ಎಲ್ಲ ಜನರಿಗೂ ಬಂದೇಬಿಡುವುದಿಲ್ಲ. ಅವುಗಳ ಪೈಕಿ ಅರವತ್ತು ಸಾವಿರಕ್ಕೂ ಹೆಚ್ಚು ವೈರಾಣುಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಆದರೆ ಜೀವಕೋಶಗಳೇ ಇಲ್ಲದ, ತನ್ನಿಂದ ತಾನೇ ಸಂತಾನೋತ್ಪತ್ತಿ ಮಾಡಲಾಗದ ಈ ವೈರಾಣುಗಳು ಅತ್ಯಂತ ಸಣ್ಣಗಾತ್ರದ ಸೂಕ್ಷ್ಮಜೀವಿಗಳು.
ಎಬೋಲಾ ವೈರಾಣು 11 ಸಾವಿರ ಜನರನ್ನು ಅಂದರೆ ಪ್ರತಿಶತ 25 ಜನರನ್ನು ಬಲಿ ತೆಗೆದುಕೊಂಡಿತು! ಡೆಂಘೀಜ್ವರವು ಸಹಸ್ರಾರು ಮಾನವರ ಜೀವ ತೆಗೆಯಿತು. ಹಂದಿಜ್ವರಕ್ಕೆ ಪ್ರತಿಶತ 4.5 ಜನರ ಪ್ರಾಣ ಹೋಯಿತು. ಕರೊನಾ ವೈರಾಣು ಗುಂಪಿನ ಸಾರ್ಸ್ಗೆ ಪ್ರತಿಶತ 10ರಷ್ಟು ಜನರು ಪ್ರಾಣ ಕಳೆದುಕೊಂಡದ್ದು ಈಗ ಇತಿಹಾಸ. ಹೀಗೆ ಕಾಲಕಾಲಕ್ಕೆ ಜನರನ್ನು ಹೆದರಿಸುವ ಕೆಲಸ ಮಾಡುವ ಈ ವೈರಾಣುಗಳು ಸ್ವಲ್ಪವೇ ಸಮಯದಲ್ಲಿ ಕಾಲುಕೀಳುತ್ತವೆ.
ಈಗ ಚೀನಾದಲ್ಲಿ ಹುಟ್ಟಿದ ರೋಗಕ್ಕೆ ನೋವೆಲ್ ಕರೊನಾ ವೈರಸ್ ಕಾರಣವಾಗಿದ್ದು ಕೋವಿಡ್19 ಎಂಬ ಹೆಸರನ್ನಿಡಲಾಗಿದೆ. ತುಸು ಹೆಚ್ಚು ಗಾತ್ರವಿರುವುದರಿಂದ ಇದಕ್ಕೆ ಉಳಿದ ವೈರಾಣುಗಳಂತೆ ಗಾಳಿಯಲ್ಲಿ ಸಂಚರಿಸಲು ಬರುವುದಿಲ್ಲ! ರೋಗಪೀಡಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಲ್ಲೇ ನೆಲಕ್ಕೆ ಅಥವಾ ವಸ್ತುಗಳ ಮೇಲೆ ಬೀಳುತ್ತದೆ. ಅದನ್ನು ಮುಟ್ಟಿ ಅದೇ ಕೈಗಳಲ್ಲಿ ಕಣ್ಣು, ಬಾಯಿ, ಮೂಗು ಒರೆಸಿದರೆ ಮಾತ್ರ ಇನ್ನೊಬ್ಬರ ದೇಹವನ್ನು ಪ್ರವೇಶಿಸುತ್ತದೆ. ಒಂದು ಮೀಟರ್ಗಿಂತ ಹತ್ತಿರದಲ್ಲೇ ಇದ್ದರೆ ವೈರಾಣುಗಳು ಉಸಿರಾಟದಲ್ಲಿ ನೇರವಾಗಿ ದೇಹವನ್ನು ಪ್ರವೇಶಿಸಬಹುದು. ವಸ್ತುಗಳ ಮೇಲೆ ಬಿದ್ದ ಕರೊನಾ ವೈರಾಣು ಹೆಚ್ಚೆಂದರೆ ಅರ್ಧದಿನವಷ್ಟೇ ಬದುಕಬಲ್ಲದು. 25 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಇದು ಬದುಕುವುದೇ ಇಲ್ಲ! ಭಾರತದಲ್ಲಂತೂ ತಾಪಮಾನ ಈ ವೈರಾಣುಗಳಿಗೆ ಪ್ರತಿಕೂಲವಾಗಿದ್ದು ಜನದಟ್ಟಣೆಯಿರುವ ನಗರಗಳಲ್ಲೂ ಹರಡಲು ದುಸ್ಸಾಹಸಪಡುತ್ತಿದೆ! ಉಳಿದ ವೈರಾಣು ಜ್ವರಗಳು ಹದಿಹರೆಯದ ಬಲಿಷ್ಠರನ್ನೂ, ಮಕ್ಕಳನ್ನೂ ಮುಲಾಜಿಲ್ಲದೆ ಕಾಡಿದ್ದವು. ವಯಸ್ಸಾದ ತೀವ್ರ ರೋಗಪೀಡಿತರಲ್ಲಷ್ಟೇ ಇದು ಮಾರಣಾಂತಿಕವಾಗಿರುವುದನ್ನು ನೋಡಿದರೆ ಈ ವೈರಾಣು ಅಷ್ಟೇನೂ ಪ್ರಬಲವಾಗಿಲ್ಲ. ಕೆಮ್ಮು, ಜ್ವರದಿಂದ ಬಳಲುತ್ತಿರುವ ರೋಗಪೀಡಿತರನ್ನು ನೇರವಾಗಿ ಮುಟ್ಟದೆ, ಮೂರಡಿ ಅಂತರ ಕಾಯ್ದುಕೊಂಡರೆ ರೋಗ ಹರಡುವುದಿಲ್ಲ. ಬದುಕಿ ಉಳಿಯಲು, ಮನುಷ್ಯರಲ್ಲಿ ಆಶ್ರಯ ಪಡೆಯಲು ಕೊರೊನಾ ವೈರಾಣು ಹೆಣಗಾಡುತ್ತಿದೆ. ನಿಜಕ್ಕೂ ಹೆದರಬೇಕಾದ್ದು ಮನುಷ್ಯರಲ್ಲ, ಕೊರೊನಾ!