ಲೈಫ್‌ಸ್ಟೈಲ್

ಮನೋಲ್ಲಾಸ: ಎಲ್ಲರಲ್ಲಿರುವ ಚೈತನ್ಯ ಗಮನಿಸೋಣ

ವನರಾಗ ಶರ್ಮಾ

ಪ್ಯಾಟ್ ಐರ್ಲೆಂಡಿನ ಒಬ್ಬ ತರುಣ. ಅವನಿಗೆ ‘ನಾನೂ ಒಂದು ನೌಕರಿ ಹಿಡಿಯಬೇಕು’ ಅನ್ನಿಸಿದಾಗ ಸ್ನೇಹಿತ ಮೈಕ್ ಇಂಗ್ಲೆಂಡಿನಲ್ಲಿ ನೌಕರಿ ಮಾಡುತ್ತಿದ್ದುದು ನೆನಪಾಯಿತು. ತಡಮಾಡಲಿಲ್ಲ, ನೌಕರಿ ಹಿಡಿಯಲು ಆತ ಐರ್ಲೆಂಡ್ ತೊರೆದು ಇಂಗ್ಲೆಂಡಿಗೆ ಪಯಣಿಸಿದ. ಗೆಳೆಯ ಮೈಕ್​ನನ್ನು ಭೇಟಿಯಾದಾಗ ಆತ; ‘ಎಲ್ಲಿಲ್ಲದಿದ್ದರೂ ಇಂಗ್ಲೆಂಡಿನ ಮೃಗಾಲಯದಲ್ಲಿ ಕೆಲಸ ಸಿಗುತ್ತೆ, ಹೋಗು’ ಎಂದ. ಪ್ಯಾಟ್ ಮೃಗಾಲಯಕ್ಕೆ ಬಂದು ವಿಚಾರಿಸಿದ. ಕೆಲಸ ಯಾವುದೂ ಖಾಲಿಯಿರಲಿಲ್ಲ. ನಿರಾಶನಾದ ಪ್ಯಾಟನನ್ನು ನೋಡಿ ಮೃಗಾಲಯದ ಅಧಿಕಾರಿ, ‘ಇಲ್ಲಿನ ಚಿಂಪಾಂಜಿಯೊಂದು ಕೆಲದಿನಗಳ ಹಿಂದೆ ತೀರಿಕೊಂಡಿತು. ಚಿಂಪಾಂಜಿಯಿಲ್ಲದೆ ಮೃಗಾಲಯಕ್ಕೆ ಕಳೆಯಿಲ್ಲ. ಅದರ ಜಾಗವನ್ನು ಸ್ವಚ್ಛಗೊಳಿಸಿ ಇಟ್ಟಿದ್ದೇನೆ. ನೀನು ಚಿಂಪಾಂಜಿಯ ಚರ್ಮವನ್ನು ಹೊದ್ದು, ಅದರಂತೆ ನಟಿಸಬಲ್ಲೆಯಾದರೆ ಊಟ-ತಿಂಡಿಗೆ ಕೊರತೆಯಿಲ್ಲ. ಮೇಲಿಂದ ಕೈತುಂಬ ಸಂಬಳ ಕೊಡುತ್ತೇನೆ’ ಎಂದ. ಪ್ಯಾಟ್ ಹೋಗಿ ನೋಡಿದ. ಆ ಜಾಗ ವಿಶಾಲವಾಗಿತ್ತು. ಮೆತ್ತನೆ ಹಾಸಿಗೆ. ಇದನ್ನು ಗಮನಿಸಿ ಆತ ಕೆಲಸ ಒಪ್ಪಿಕೊಂಡ.

ಪ್ಯಾಟ್​ನ ಚಿಂಪಾಂಜಿ ಆಟ ಎಲ್ಲರನ್ನೂ ಆಕರ್ಷಿಸಿತು. ಗುರುಗುಡುವುದು, ಲಾಗಹಾಕುವುದು, ಎದೆತಟ್ಟಿಕೊಂಡು ಕುಣಿಯುವುದು, ಒಮ್ಮೆಲೇ ಪ್ರೇಕ್ಷಕರ ಕಡೆ ನುಗ್ಗಿ ಬಂದು ಓಡಿಹೋಗುವುದು ಎಲ್ಲವನ್ನೂ ಉತ್ಸಾಹದಿಂದ ಮಾಡಿದ. ಜನಪ್ರಿಯ ಆಟವೆಂದರೆ ಮರದ ಕೊಂಬೆಯ ಮೇಲೆ ಕುಳಿತು ಕೈಗೆ ಸಿಕ್ಕಿದುದನ್ನು ಪಕ್ಕದ ಕಟಕಟೆೆಯಲ್ಲಿದ್ದ ಹೆಣ್ಣುಸಿಂಹದ ಮೇಲೆ ಎಸೆಯುವುದು. ಅದು ಏನೂಮಾಡಲಾರದೆ ಸಿಟ್ಟಿನಿಂದ ಗುರಗುಟ್ಟುತ್ತಿತ್ತು, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಸಿಂಹ ಜೋರಾಗಿ ಗರ್ಜಿಸುವುದನ್ನು ನೋಡಿ ಪ್ರೇಕ್ಷಕರು ಕುಣಿದಾಡುತ್ತಿದ್ದರು.

ಒಂದು ಭಾನುವಾರ, ರಜಾದಿನವಾದ್ದರಿಂದ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಆಟದಲ್ಲಿ ಮೈಮರೆತಿದ್ದ ಪ್ಯಾಟ್ ಕುಳಿತಿದ್ದ ಕೊಂಬೆ ಮುರಿದು ಹೆಣ್ಣುಸಿಂಹದ ಕಟಕಟೆಯಲ್ಲಿ ದೊಪ್ಪನೆ ಬಿದ್ದುಬಿಟ್ಟ! ಗರ್ಜಿಸುತ್ತಿದ್ದ ಸಿಂಹಿಣಿ ಹತ್ತಿರಬಂದಾಗ ಹೆದರಿ ಗಡಗಡ ನಡುಗಿಹೋದ. ಇನ್ನೇನು ಸಹಾಯಕ್ಕಾಗಿ ಕೂಗಿಕೊಳ್ಳಬೇಕೆಂದು ಬಾಯಿತೆರೆಯುವಷ್ಟರಲ್ಲಿ ಹತ್ತಿರಬಂದ ಸಿಂಹಿಣಿ ಹೇಳಿತು, ‘ಪ್ಯಾಟ್ ಎಚ್ಚರ! ಬಾಯಿತೆಗೆದರೆ ನನ್ನ ನಿನ್ನ ಇಬ್ಬರ ಕೆಲಸವೂ ಹೋದೀತು. ಜಾಗ್ರತೆ!’

ಕವಿತೆಯ ಸಾಲುಗಳು ಹೇಳುವಂತೆ:

ಬಹುಬಣ್ಣ ಬಹುರೀತಿ ಹದವಿವಿಧವಾಗಿರುವ

ಚರ್ಮವನು ಹೊದ್ದಿರುವ ಅಮೂರ್ತ ನೋಟ.

ಒಳಗಿರುವ ಚೈತನ್ಯ; ನೀರಿನೊಳು ಹುದುಗಿರುವ

ವಿದ್ಯುತ್ತು ಶಕ್ತಿಯೊಲು ವಿಧವಿಧದಿ ಪ್ರಕಟ.

ಹೌದು, ಇಲ್ಲಿ ಎಲ್ಲರೂ ವಿವಿಧ ಚರ್ಮಧರಿಸಿದವರೇ. ವಿವಿಧ ವೇಷಧಾರಿಗಳೇ. ಒಳಗಿರುವ ಚೇತನ ಒಂದೇ. ಕೋಪ, ದುಃಖ, ಸಂತೋಷ, ಪ್ರೇಮದಲ್ಲಿ ನಾವು ನಮ್ಮ ಒಳಗನ್ನು ಗಮನಿಸಬೇಕು. ಅಂತರಂಗದ ದನಿಯನ್ನು ಆಲಿಸಬೇಕು. ಆಗ ನಮಗೆ ಪ್ರೇಮಮಯ ಲೋಕ ತೆರೆದುಕೊಳ್ಳುತ್ತದೆ. ವಿಶ್ವವೇ ಒಂದು ಎಂದು ಭಾವಿಸುವ ಹೃದಯವೈಶಾಲ್ಯ ಕೈಬೀಸಿ ಕರೆಯುತ್ತದೆ. ದ್ವೇಷ-ಮತ್ಸರ, ಲೋಭ-ಅಹಮಿಕೆ ದೂರವಾಗುತ್ತದೆ. ಚೈತನ್ಯದ ಅನುಸಂಧಾನ ಚುರುಕು ಪಡೆಯುತ್ತದೆ. ಮುಂದೆ ಉದ್ಧಾರದ ಜ್ಯೋತಿರ್ಮಯ ಮಹಾಮಾರ್ಗ ಗೋಚರಿಸುತ್ತದೆ. ಚೈತನ್ಯದತ್ತಲೇ ಗಮನವನ್ನು ಕೇಂದ್ರೀಕರಿಸುವ ಪ್ರಕೃತಿಕಲೆ ಸಿದ್ಧಿಸುತ್ತದೆ. ಇದೇ ಸವೋನ್ನತಿಯ, ಅನುಪಮಸುಖದ, ಪರಮಾನಂದದ ಮಹಾಸಾಮ್ರಾಜ್ಯ. ಮನುಷ್ಯ ಜೀವನದ ಸಾರ್ಥಕತೆಯ ಶಾಂತಿಧಾಮ.

(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)