ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿರುವ ಕೊಬ್ಬಿನ ಒಂದು ರೂಪವಾಗಿದೆ. ವಿಟಮಿನ್‌ಗಳು ಮತ್ತು ಕ್ಯಾಲರಿಗಳು ಸಂಗ್ರಹವಾಗಲು ಹಾಗೂ ದೇಹಕ್ಕೆ ಅಗತ್ಯವಿದ್ದಾಗ ಅವುಗಳನ್ನು ಕರಗಿಸಲು ಮತ್ತು ಬಳಸಲು ಕೊಲೆಸ್ಟ್ರಾಲ್ ತುಂಬಾ ಅವಶ್ಯಕವಾಗಿದೆ. ಅಲ್ಲದೆ, ಆಹಾರ ಜೀರ್ಣವಾಗಲು ಬೇಕಾದ ಅಂಶಗಳನ್ನು ತಯಾರಿಸಲು ಸಹ ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್ ಅಗತ್ಯವಿದೆ.
ಆದರೆ, ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್-ಹೈ ಡೆನ್ಸಿಟಿ ಲಿಪೋಪ್ರೋಟಿನ್) ಮತ್ತು ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್-ಲೋ ಡೆನ್ಸಿಟಿ ಲಿಪೋಪ್ರೋಟಿನ್). ನಮ್ಮ ದೇಹದಲ್ಲಿ ಯಾವಾಗಲೂ ಒಳ್ಳೆಯ ಕೊಲೆಸ್ಟ್ರಾಲ್ ಶೇಖರಣೆಯಾಗಿದ್ದರೆ, ನಾವು ತುಂಬಾ ಆರೋಗ್ಯಯುತರಾಗಿರುತ್ತೇವೆ. ಹೃದಯದ ಕಾಯಿಲೆಗಳಂತಹ ಅನೇಕ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನಾವು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆ ಅಭ್ಯಾಸಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಒಳ್ಳೆಯ ಎಣ್ಣೆಗಳನ್ನು ಬಳಸಿ: ನಾವು ಸೇವಿಸುವ ಎಣ್ಣೆಗಳಿಂದಲೇ ಅತ್ಯಧಿಕ ಕೊಲೆಸ್ಟ್ರಾಲ್ ಅನ್ನು ನಾವು ಪಡೆಯುತ್ತೇವೆ. ಹೀಗಾಗಿ ಬಳಸುವ ಎಣ್ಣೆ ತುಂಬಾ ಆರೋಗ್ಯಕರವಾಗಿರಬೇಕು. ಹೆಚ್ಚಾಗಿ ಆಲಿವ್ ಎಣ್ಣೆಯನ್ನು ಬಳಸಲು ವೈದ್ಯರು ಸೂಚಿಸುತ್ತಾರೆ. ಏಕೆಂದರೆ, ಇದರಲ್ಲಿ ಮೊನೊ-ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ಇದರ ಬಳಕೆಯ ಬಗ್ಗೆ ಅನೇಕ ಅಧ್ಯಯನಗಳೂ ಸಹ ನಡೆದಿವೆ. ಆಲಿವ್ ಎಣ್ಣೆಯನ್ನು ಬಳಸಿದ 800,000ಕ್ಕೂ ಹೆಚ್ಚು ಜನರರಲ್ಲಿ ಹೃದ್ರೋಗದ ಅಪಾಯ ಕಡಿಮೆಯಾಗಿರುವುದನ್ನು ಸಂಶೋಧನೆ ತೋರಿಸಿದೆ. ಆಲಿವ್ ಎಣ್ಣೆ ಮಾತ್ರವಲ್ಲದೆ, ಆಹಾರದಲ್ಲಿ ತೆಂಗಿನ ಎಣ್ಣೆ ಬಳಕೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಹಸಿವು ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಡಿಮೆ ಕಾರ್ಬೋಹೈಡ್ರೇಟ್ಸ್ ಸೇವಿಸಿ: ಕಡಿಮೆ ಕಾರ್ಬೋಹೈಡ್ರೇಟ್‌ಗಳು, ಹೆಚ್ಚಿನ ಪ್ರೋಟೀನ್‌ಗಳು ಮತ್ತು ಉತ್ತಮ ಕೊಬ್ಬಿನಂಶವಿರುವ ಕೆಟೋಜೆನಿಕ್ ಆಹಾರವನ್ನು ಅನುಸರಿಸುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ಜನರಲ್ಲಿ ಎಚ್‌ಡಿಎಲ್ ಮಟ್ಟವು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ನಿತ್ಯ ವ್ಯಾಯಾಮ: ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಹೃದ್ರೋಗವನ್ನು ತಡೆಯಬಹುದು.
ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು: ನಮ್ಮ ಎತ್ತರಕ್ಕೆ ತಕ್ಕಷ್ಟು ತೂಕವನ್ನು ಮಾತ್ರ ನಾವು ಹೊಂದುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಆಹಾರ ಮತ್ತು ವ್ಯಾಯಾಮ ಎರಡಕ್ಕೂ ಗಮನ ನೀಡಬೇಕು. ತೂಕ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಬಾದಿಸುತ್ತವೆ. (ಏಜೆನ್ಸೀಸ್)