ಲೈಫ್‌ಸ್ಟೈಲ್

ಸೋಮಾರಿತನ ಹೋಗಲಾಡಿಸಬೇಕೇ? ಜಪಾನಿಗರ ಈ 4 ನಿಯಮಗಳನ್ನು ಅನುಸರಿಸಿ ಸಾಕು! Laziness

Laziness : ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಪ್ರಗತಿ ಸಾಧಿಸಲು ಮತ್ತು ಗುರಿಗಳನ್ನು ಸಾಧಿಸಲು ಬಯಸುತ್ತಾರೆ. ಅಲ್ಲದೆ, ಇಡೀ ದಿನ ಲವಲವಿಕೆಯಿಂದ ಇರಲು ಇಷ್ಟಪಡುತ್ತಾರೆ. ಆದರೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಏನೆಂದು ನೋಡಿದಾಗ ಹೆಚ್ಚಿನ ಮಂದಿಗೆ ಸೋಮಾರಿತನವೇ ಉತ್ತರವಾಗಿರುತ್ತದೆ.

ನಮ್ಮ ಜೀವನದಲ್ಲಿ ಪ್ರಗತಿಗೆ ಅಡ್ಡಿಯಾಗುವ ಅತಿ ದೊಡ್ಡ ಶತ್ರು ಎಂದರೆ ಅದು ಸೋಮಾರಿತನ. ಇದನ್ನು ದೂರವಿಡಲು ನೀವು ಬಯಸುವುದಾದರೆ, ಜಪಾನಿಗರು ಅನುಸರಿಸುವ ಕೆಲವು ಸರಳ ಅಭ್ಯಾಸಗಳ ಬಗ್ಗೆ ನಾವಿಂದು ವಿವರವಾಗಿ ತಿಳಿದುಕೊಳ್ಳೋಣ. ನೀವಿದನ್ನು ಪಾಲಿಸಿದರೆ ಸಾಕು ಸೋಮಾರಿತನವನ್ನು ನೀವು ಸಂಪೂರ್ಣವಾಗಿ ತೊಡೆದು ಹಾಕಬಹುದು.

ದೈನಂದಿನ ಪ್ರಗತಿ

ಈ ವಿಧಾನವನ್ನು ಜಪಾನೀಸ್ ಭಾಷೆಯಲ್ಲಿ ಕೈಜೆನ್ ಎಂದು ಕರೆಯಲಾಗುತ್ತದೆ. ಈ ವಿಧಾನವು ತಕ್ಷಣದ ಬದಲಾವಣೆಗಳನ್ನು ಮಾಡುವ ಬದಲು ದೈನಂದಿನ ಜೀವನದಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡುವುದಕ್ಕೆ ಒತ್ತು ನೀಡುತ್ತದೆ. ಉದಾಹರಣೆಗೆ, ನೀವು ಹೆಚ್ಚು ಓದಲು ಬಯಸಿದಾಗ ಸೋಮಾರಿತನದಿಂದ ಅದು ಸಾಧ್ಯವಾಗದಿದ್ದಾಗ ಪ್ರತಿದಿನ ಒಂದು ಪುಟವನ್ನಾದರೂ ಸ್ಪಷ್ಟವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇಂತಹ ಪ್ರಯತ್ನ, ಆರಂಭದಲ್ಲಿ ಚಿಕ್ಕದಾಗಿದ್ದರೂ, ಅಂತಿಮವಾಗಿ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ.

ಜೀವನದಲ್ಲಿ ಅರ್ಥ

ಈ ಅಭ್ಯಾಸವನ್ನು ಇಕ್ಕಿಕೈ ಎಂದು ಕರೆಯಲಾಗುತ್ತದೆ. ಜಪಾನಿಗರ ಪುಸ್ತಕದಲ್ಲಿ ಪ್ರಕಟವಾದ ಈ ಸಿದ್ಧಾಂತವನ್ನು ಜಪಾನಿಯರು ಅತ್ಯಂತ ಜನಪ್ರಿಯವೆಂದು ಪರಿಗಣಿಸಿದ್ದಾರೆ. ಸೋಮಾರಿತನವನ್ನು ಸಂಪೂರ್ಣವಾಗಿ ತೊಡೆದುಹಾಕಲು, ನಾವು ಮಾಡುವ ಎಲ್ಲವೂ ಅರ್ಥಪೂರ್ಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಅಭ್ಯಾಸವನ್ನು ಮಾಡುವ ಮೂಲಕ, ಒಟ್ಟಾರೆಯಾಗಿ ನಿಮ್ಮ ಜೀವನವೇ ಅರ್ಥಪೂರ್ಣವಾಗುತ್ತದೆ. ನಿಮಗೆ ಯಾವುದು ಸಂತೋಷವನ್ನು ನೀಡುತ್ತದೆ ಮತ್ತು ಯಾವುದು ನಿಮಗೆ ಒಳ್ಳೆಯದನ್ನು ನೀಡುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸಬೇಕು. ಆ ನಿಟ್ಟಿನಲ್ಲಿ ನಿಮ್ಮ ಕೆಲಸವನ್ನು ಪ್ರಾರಂಭಿಸುವ ಮೂಲಕ ನೀವು ಹೆಚ್ಚು ಉತ್ಪಾದಕ ವ್ಯಕ್ತಿಯಾಗಬಹುದು. ನಾವು ಯಾವುದೇ ಕೆಲಸ ಮಾಡಿದರೂ, ಅದನ್ನು ಏಕೆ ಮಾಡುತ್ತಿದ್ದೇವೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಈ ಅಭ್ಯಾಸವು ಸೋಮಾರಿತನವನ್ನು ದೂರ ಮಾಡುತ್ತದೆ.

ಸರಿಯಾದ ಸಮಯ

ಸೋಮಾರಿತನಕ್ಕೆ ಮುಖ್ಯ ಕಾರಣವೆಂದರೆ ಏನನ್ನಾದರೂ ಮಾಡಲು ಸರಿಯಾದ ಸಮಯಕ್ಕಾಗಿ ಕಾಯುವುದು. ಜಪಾನಿಯರು ವಾಬಿ-ಸಾಬಿ ವಿಧಾನವನ್ನು ಅನುಸರಿಸುತ್ತಾರೆ. ಇದು ಇದಕ್ಕೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ ಮತ್ತು ಜೀವನದಲ್ಲಿನ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಇಲ್ಲಿ ಎಲ್ಲವೂ ಪರಿಪೂರ್ಣವಾಗಿಲ್ಲ ಮತ್ತು ಅದನ್ನು ನಾವೇ ಸರಿಪಡಿಸಿಕೊಳ್ಳಬೇಕು ಎಂಬ ಮನೋಭಾವವನ್ನು ಸೃಷ್ಟಿಸುತ್ತದೆ. ಈ ವಿಧಾನವು ನಿಮ್ಮ ಸಂಪೂರ್ಣ ಗಮನವನ್ನು ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸಲು ನಿಮಗೆ ಕಲಿಸುತ್ತದೆ. ಯಾವುದನ್ನಾದರೂ ಸರಿ ಪ್ರಯತ್ನದಿಂದ ಮಾತ್ರ ಸುಧಾರಿಸಬಹುದು ಅಥವಾ ಸುಂದರಗೊಳಿಸಬಹುದು. ಅದನ್ನು ಬಿಟ್ಟು ಸರಿಯಾದ ಸಮಯಕ್ಕೆ ಕಾದು ಕುಳಿತುಕೊಳ್ಳುವುದು ಸರಿಯಲ್ಲ.

ಆಹಾರ

ಸೋಮಾರಿತನವನ್ನು ಸಂಪೂರ್ಣವಾಗಿ ತೊಡೆದುಹಾಕಲು ನೀವು ಬಯಸಿದರೆ, ಮೊದಲು ನಿಮ್ಮ ಹೊಟ್ಟೆ ತುಂಬುವವರೆಗೆ ತಿನ್ನುವುದನ್ನು ನಿಲ್ಲಿಸಬೇಕು. ನೀವು 80 ಪ್ರತಿಶತ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಜಪಾನಿಯರು ಇದನ್ನು ಹರಾ ಹಚಿ ಬು ಎಂದು ಕರೆಯುತ್ತಾರೆ. ಇದು ಸರಿಯಾದ ಆಹಾರ ಪದ್ಧತಿಗಿಂತ ಸ್ವಯಂ ಶಿಸ್ತು ಮತ್ತು ಮಾನಸಿಕ ನಿಯಂತ್ರಣವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಸಾಮಾಜಿಕ ಜಾಲತಾಣ, ಫಾಸ್ಟ್ ಫುಡ್ ಮತ್ತು ಹೆಚ್ಚು ಟಿವಿ ನೋಡುವಂತಹ ಗೊಂದಲಗಳಿಂದ ದೂರವಿರಬೇಕು. ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ನಾವು ಯಾವಾಗಲೂ ಜಾಗೃತರಾಗಿರಬೇಕು.

ಈ ಮೇಲಿನ ಎಲ್ಲ ನಿಯಮಗಳನ್ನು ನೀವು ತಪ್ಪದೇ ಅನುಸರಿಸಿದರೆ ಸೋಮಾರಿತನವನ್ನು ದೂರ ಮಾಡಿ ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು. (ಏಜೆನ್ಸೀಸ್​)