ನಿಮ್ಮ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಂಪ್ಲೀಟ್ ಕರಗಿಸಬೇಕೇ? ಹಾಗಾದರೆ ಈ ಒಂದು ಬೀಜ ಸಾಕು... Blood Vessels
- ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಜಂಕ್ ಫುಡ್ ಮೊರೆ ಹೋಗ್ತಿದ್ದಾರೆ
- ಈ ಹವ್ಯಾಸವು ರಕ್ತನಾಳಗಳಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುವಂತೆ ಮಾಡಿ ಅಪಾಯಕ್ಕೆ ಕಾರಣವಾಗುತ್ತಿದೆ
- ಕೆಟ್ಟ ಕೊಬ್ಬು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುವ ಮೂಲಕ ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತಿದೆ
Blood Vessels : ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಕರಿದ ಪದಾರ್ಥಗಳು, ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್‌ಗಳ ಮೊರೆಹೋಗುತ್ತಿದ್ದಾರೆ, ಆದರೆ ಈ ಹವ್ಯಾಸವು ರಕ್ತನಾಳಗಳಲ್ಲಿ ಅನಗತ್ಯ ಕೊಬ್ಬು (ಕೊಲೆಸ್ಟ್ರಾಲ್) ಶೇಖರಣೆಯಾಗುವಂತೆ ಮಾಡಿ, ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುವ ಮೂಲಕ ಕೊನೆಗೆ ಮಾರಣಾಂತಿಕ ಹೃದಯಾಘಾತಕ್ಕೆ (Heart Attack) ದಾರಿ ಮಾಡಿಕೊಡುತ್ತಿದೆ.
ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು ಆದರೆ, ಈಗ ಅಪ್ರಾಪ್ತರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ, ರಕ್ತನಾಳಗಳಲ್ಲಿ ಅಡಗಿರುವ ಅಪಾಯಕಾರಿ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕರಗಿಸಿ, ಹೃದಯದ ಆರೋಗ್ಯವನ್ನು ಕಾಪಾಡುವ ಸಂಜೀವಿನಿಯಂತಿರುವ 'ಚಿಯಾ ಸೀಡ್ಸ್' (Chia Seeds) ಅದ್ಭುತ ಗುಣಗಳ ಬಗ್ಗೆ ನಾವಿಂದು ತಿಳಿಯೋಣ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ನೋಡಲು ಅತ್ಯಂತ ಚಿಕ್ಕದಾಗಿದ್ದರೂ, ಚಿಯಾ ಸೀಡ್ಸ್ ಅಪಾರ ಪ್ರಮಾಣದ ಪೋಷಕಾಂಶಗಳ ಗಣಿಯಾಗಿದೆ. ಇದರಲ್ಲಿ ವಿಶೇಷವಾಗಿ ಒಮೆಗಾ-3 ಫ್ಯಾಟಿ ಆಸಿಡ್, ನಾರಿನಂಶ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕರಗಿಸುವಲ್ಲಿ ಮತ್ತು ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಚಿಯಾ ಸೀಡ್ಸ್ ಅನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಅತ್ಯಂತ ಉತ್ತಮವಾದ ವಿಧಾನವಾಗಿದೆ. ಒಂದು ಲೋಟ ನೀರಿಗೆ ಒಂದು ಚಮಚ ಚಿಯಾ ಸೀಡ್ಸ್ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ನೆನೆಸಿಡಬೇಕು. ಇಲ್ಲದಿದ್ದರೆ, ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರು ಮತ್ತು ಬೀಜಗಳನ್ನು ಒಟ್ಟಿಗೆ ಕುಡಿಯುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ರಕ್ತನಾಳಗಳನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಒಂದು ವೇಳೆ ನಿಮಗೆ ಇವುಗಳನ್ನು ನೀರಿನಲ್ಲಿ ಬೆರೆಸಿ ಕುಡಿಯಲು ಇಷ್ಟವಿಲ್ಲದಿದ್ದರೆ, ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ (ಜ್ಯೂಸ್, ಮೊಸರು ಅಥವಾ ಸ್ಮೂಥಿಗಳ ರೂಪದಲ್ಲಿ) ಸೇರಿಸಿಕೊಂಡೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.
ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬಹುದು?
ನಾವು ಪ್ರತಿದಿನ ಕುಡಿಯುವ ಹಣ್ಣಿನ ಜ್ಯೂಸ್ ಅಥವಾ ಸ್ಮೂಥಿಗಳಿಗೆ ನೀರಿನಲ್ಲಿ ನೆನೆಸಿದ ಚಿಯಾ ಸೀಡ್ಸ್‌ಗಳನ್ನು ಸೇರಿಸಿ ಸೇವಿಸಬಹುದು. ಇವುಗಳನ್ನು ಆಹಾರದಲ್ಲಿ ಬಳಸುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ, ಇದರಿಂದಾಗಿ ಪದೇ ಪದೇ ಹಸಿವಾಗುವುದು ಹಾಗೂ ಅತಿಯಾಗಿ ತಿನ್ನುವುದು ತಪ್ಪುತ್ತದೆ.
ನೀವು ತಯಾರಿಸುವ ತರಕಾರಿ ಮತ್ತು ಹಣ್ಣುಗಳ ಸಲಾಡ್‌ಗಳ ಮೇಲೂ ಈ ಬೀಜಗಳನ್ನು ಉದುರಿಸಿ ಸವಿಯಬಹುದು. ಇನ್ನು ಬೆಳಗ್ಗಿನ ಉಪಾಹಾರದ ವೇಳೆ ಓಟ್ಸ್ ಅಥವಾ ರಾಗಿ ಅಂಬಲಿ ಜೊತೆಗೆ ಇದನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ದೇಹಕ್ಕೆ ಸಿಗುವ ಪೋಷಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ. ಇದಲ್ಲದೆ, ಚಿಯಾ ಸೀಡ್ಸ್ ಅನ್ನು ಹಾಲಿಗೆ ಹಾಕಿ, ಸ್ವಲ್ಪ ಜೇನುತುಪ್ಪ ಬೆರೆಸಿ ಪುಡಿಂಗ್ ಮಾದರಿಯಲ್ಲಿ ಸವಿಯುವುದರಿಂದಲೂ ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಅನೇಕ ಲಾಭಗಳು
ಚಿಯಾ ಸೀಡ್ಸ್ ಕೇವಲ ತೂಕ ಇಳಿಕೆಗೆ ಸಹಕರಿಸುವುದಷ್ಟೇ ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡಲು ರಾಮಬಾಣವಾಗಿದೆ. ಅಷ್ಟೇ ಅಲ್ಲ, ಇದು ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ ಮತ್ತು ಮೂಳೆಗಳನ್ನು ಬಲಪಡಿಸಲು ಪ್ರಮುಖವಾಗಿ ಸಹಾಯ ಮಾಡುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.