ಲೈಫ್‌ಸ್ಟೈಲ್

ಸಂತೃಪ್ತಿಯ ಸುವಾಸನೆ ಸೂಸುತಲಿರಲಿ

ಜಯಶ್ರೀ ಜೆ. ಅಬ್ಬಿಗೇರಿ

ಸಂತನೊಬ್ಬ ದಿನವಿಡೀ ದುಡಿಯುತ್ತಿದ್ದ. ಸಂಜೆ ತನ್ನ ಗುಡಿಸಲು ಎದುರು ಕುಳಿತು ದೇವರನಾಮಗಳನ್ನು ಹಾಡುತ್ತಿದ್ದ. ನೆರೆಹೊರೆಯವರೆಲ್ಲ ಕೇಳಿ ಸಂತಸ ಪಡುತ್ತಿದ್ದರು. ಆತನ ಭಕ್ತಿಸುಧೆಯ ಪ್ರಸಿದ್ಧಿ ರಾಜನ ಕಿವಿಗೂ ಬಿತ್ತು. ಜೀವನದಲ್ಲಿ ಒಮ್ಮೆಯಾದರೂ ಆತನ ಹಾಡುಗಳನ್ನು ಕೇಳಬೇಕೆಂದು ಎಲ್ಲರೂ ಹೇಳುತ್ತಿದ್ದುದನ್ನು ಕೇಳಿದ ರಾಜ, ಒಂದು ಸಂಜೆ ಆತನ ಗುಡಿಸಲಿಗೆ ಆಗಮಿಸಿದ. ಭಕ್ತಿ ಭಾವ ಪರವಶನಾಗಿ ಹಾಡುತ್ತಿದ್ದ ಸಂತನ ಕಂಡು ರಾಜ ಆನಂದಬಾಷ್ಪವನ್ನು ಸುರಿಸಿದ. ಜನರೆಲ್ಲ ಹೋದ ಮೇಲೆ ಸಂತನನ್ನುದ್ದೇಶಿಸಿ, ‘ನೀವೇಕೆ ಈ ಸಣ್ಣ ಗುಡಿಸಲಲ್ಲಿ ಕಷ್ಟ ಪಡುತ್ತಿದ್ದೀರಿ? ನಮ್ಮ ಅರಮನೆಯಲ್ಲಿ ಹಾಯಾಗಿದ್ದು ಹಾಡುವಿರಂತೆ ಬನ್ನಿ’ ಎಂದು ಆಹ್ವಾನಿಸಿದ. ಅದಕ್ಕೆ ಸಂತ, ‘ಪ್ರಭುಗಳೇ, ಗುಡಿಸಲು ಸಣ್ಣದಿರಬಹುದು. ಆದರೆ ನಾನು ಬಡವನಲ್ಲ. ಏಕೆಂದರೆ ಈ ಗುಡಿಸಲಿನಲ್ಲಿ ನನ್ನ ಆರಾಧ್ಯದೇವರೇ ವಾಸವಾಗಿದ್ದಾನೆ. ಹಾಗಾಗಿ ಇಲ್ಲಿ ನಾನು ಸಂತೋಷದಿಂದ ಬದುಕುತ್ತಿದ್ದೇನೆ. ಒಂದು ವೇಳೆ ನಿಮ್ಮ ಆಮಿಷಕ್ಕೆ ಒಳಗಾಗಿ ನಿಮ್ಮಲ್ಲಿಗೆ ಬಂದು ವಿಲಾಸಮಯವಾಗಿ ಬದುಕಿದರೆ ನನ್ನ ಆರಾಧ್ಯ ದೈವಕ್ಕೆ ಅಗೌರವ ಸಲ್ಲಿಸದಂತಾಗುತ್ತದೆ’. ಈ ಮಾತುಗಳನ್ನು ಕೇಳುತ್ತಲೇ ರಾಜನಿಗೆ ಆನಂದವಾಯಿತಲ್ಲದೆ ಸಂತನ ಸಂತೃಪ್ತ ಮನಸ್ಸು ಕಂಡು ಅಚ್ಚರಿಯೆನಿಸಿತು.

ಸಂತನಿಗೆ ಸಿಕ್ಕ ಅವಕಾಶ ನಮಗೆ ದೊರೆತಿದ್ದರೆ ನಾವೇನು ಮಾಡುತ್ತಿದ್ದೆವು? ಎಂದು ಒಂದು ಕ್ಷಣ ಯೋಚಿಸಿದರೆ ವಾಸ್ತವ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಪರಿಶ್ರಮವಿಲ್ಲದೆ ಸಿರಿವಂತರಾಗುವ ಸುವರ್ಣಾವಕಾಶ ದೊರೆತರೆ ಕಳೆದುಕೊಳ್ಳುವ ಜಾಯಮಾನದವರು ನಾವಲ್ಲ. ಶೀಘ್ರ ಧನಪ್ರಾಪ್ತಿಯ ಆಮಿಷ ತೋರಿಸಿದಾಗ ಆ ಸುಲಭ ಮಾರ್ಗವನ್ನು ಬಿಟ್ಟರೆ ಮೂರ್ಖರಾದಂತೆಯೇ ಸರಿ ಎಂದುಕೊಳ್ಳುತ್ತೇವೆ.

ಹೀಗಾಗಿಯೇ ನಮ್ಮಂಥ ಅಮಾಯಕರನ್ನು ಅಡ್ಡದಾರಿಗೆಳೆಯುವ ವಂಚಕರು ಇಂದು ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದಾರೆ. ಇಂಥ ಸುಲಭೋಪಾಯಗಳು ದುರ್ಗತಿಗೆ ದಾರಿಯೆಂಬುದು ಸತ್ಯ. ಇರುವುದನ್ನು ಗುರುತಿಸದೆ ಇಲ್ಲದುದರ ಬೆಂಬತ್ತುವುದು ಜೀವನದ ಸೊಗಸುಗಾರಿಕೆಯನ್ನು ಇಲ್ಲವಾಗಿಸುತ್ತದೆ. ಇದ್ದುದರಲ್ಲಿ ಸಂತೃಪ್ತ ಜೀವನ ನಡೆಸಬೇಕು. ಬೇಕಾದುದನ್ನು ಪಡೆಯುವುದಕ್ಕೆ ಬೆವರು ಸುರಿಸಬೇಕು. ಬದುಕು ಅಲೆಗೆ ವಿರುದ್ಧ ಈಸುವ ದೊಡ್ಡ ಸವಾಲು. ಸವಾಲಿಗೆ ಪರಿಹಾರ ಪ್ರಾಮಾಣಿಕ ಮಾರ್ಗದಲ್ಲಿದೆ. ಸಂತೃಪ್ತಿಯಲ್ಲಿ ಶಾಂತಿ ನೆಮ್ಮದಿಯ ನೆಲೆಯಿದೆ. ಬವಣೆಯ ಬದುಕು ಅಸಹನೀಯವೆನಿಸಿ ವೈಭವದ ಜೀವನಕ್ಕೆ ಅಡ್ಡಮಾರ್ಗ ಹಿಡಿದರೆ ಪಶ್ಚಾತ್ತಾಪ ಖಚಿತ. ದುರಾಸೆ ಹೆಚ್ಚಿದೆಂತಲ್ಲ ಅತೃಪ್ತಿ ಕಾಡುತ್ತದೆ. ಸಂತೃಪ್ತಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಸಂತೃಪ್ತಿ ಎನ್ನುವುದು ಮಾನಸಿಕವಾಗಿ ಮಹತ್ತರ ವ್ಯತ್ಯಾಸ ತರಬಲ್ಲ ದೊಡ್ಡ ಸಂಗತಿ. ನಮ್ಮೆಲ್ಲರಲ್ಲಿ ಸಂತೃಪ್ತಿಯ ಗಣಿ ಅಡಗಿದೆ. ಅದರಲ್ಲಿ ಅಪರಮಿತ ಸಂತಸದ ಬುಗ್ಗೆಗಳಿವೆ. ದುಃಖದ ಸಂಗತಿಯೆಂದರೆ ಕಾರಂಜಿಗಳು ಚಿಮ್ಮುವ ಮುನ್ನವೇ ನಾವು ಪ್ರಯತ್ನ ಕೈ ಬಿಡುತ್ತೇವೆ.

ಸರಳತೆಯಲ್ಲಿ ಸಂತೃಪ್ತಿಯ ಸೆಲೆಯಿದೆ. ಅದು ಬತ್ತದಿರಲಿ. ಸಂತೃಪ್ತ ಜೀವನವು ಮುತ್ತುಗಳ ಒಂದು ಸುಂದರ ಹಾರದಂತೆ. ಒಟ್ಟಿಗೆ ಪೋಣಿಸಿದ ಮಾನವೀಯ ಮಹಾ ಮೌಲ್ಯವದು. ಬದುಕಿನ ಹಾದಿಯಲ್ಲಿ ನಾವು ನಡೆದಂತೆ ಸಂತೃಪ್ತಿಯೆಂಬ ಗುಲಾಬಿಯ ಸುವಾಸನೆ ಸೂಸುತಲಿರಲಿ. ಹೆಚ್ಚು ಖುಷಿಗೆ ದಾರಿಯಾಗಲಿ.

(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)