‘ಗುರುದೈವಾತ್ ಪರಂ ನಾಸ್ತಿ’-ಗುರುವಿಗಿಂತ ಮಿಗಿಲಾದವರು ಮತ್ತೊಬ್ಬರಿಲ್ಲ ಎಂಬ ಮಾತಿದೆ. ‘ಹರ ಕೊಲ್ಲಲ್ ಗುರು ಕಾಯ್ವನ್’ ಎಂಬಂತೆ ನಮ್ಮನ್ನು ಕೈ ಹಿಡಿದು ನಡೆಸುವ ಕರುಣಾಳುವೆಂದರೆ ಶ್ರೀಗುರುವೇ. ಶಂಕರಾಚಾರ್ಯರು ಕಾಶ್ಮೀರದಲ್ಲಿದ್ದ ಸಂದರ್ಭ. ಗುರುಗಳ ಶಿಷ್ಯ ಸಮೂಹದಲ್ಲಿ ಸನಂದನ ಎಂಬ ಹೆಸರಿನ ಅತ್ಯಂತ ಗುರುಭಕ್ತಿ ಹೊಂದಿದ್ದ ಶಿಷ್ಯರೂ ಇದ್ದರು. ಆದರೆ ಸ್ವಲ್ಪ ಮಂದಬುದ್ಧಿ, ಸಾಧಾರಣ ತಿಳಿವಳಿಕೆ ಹೊಂದಿದ್ದ ಅಸಾಧಾರಣ ಮಹಾನುಭಾವ.
ಗುರುಗಳ ಯೋಗಕ್ಷೇಮದಲ್ಲಿಯೇ ಅತ್ಯಂತ ತೃಪ್ತಿ ಹೊಂದುತ್ತಿದ್ದರು. ಗುರುಗಳ ಸ್ನಾನ, ಪೂಜೆಗೆ ತಯಾರಿ ಮಾಡುವುದು, ಅವರ ಪೀಠವನ್ನು ಸ್ವಚ್ಛ ಮಾಡುವುದು ಅವರ ಅಭ್ಯಾಸದ ಜೊತೆಗಿನ ಕೆಲಸವಾಗಿತ್ತು. ಒಂದು ಮುಂಜಾನೆ ಗುರುಗಳ ಸ್ನಾನ, ಪೂಜೆಯಾದ ನಂತರ ಪಾಠ ಪ್ರಾರಂಭಿಸುವಷ್ಟರಲ್ಲಿ ಅವರ ಬಟ್ಟೆಗಳನ್ನು ಮಡಿಮಾಡಿಕೊಂಡು ಬರುವೆನೆಂದು ಗಂಗಾನದಿಯಾಚೆಗೆ ದೋಣಿಯಲ್ಲಿ ಹೋದರು. ಇಲ್ಲಿ ಶಂಕರಾಚಾರ್ಯರು ಪಾಠ ಪ್ರಾರಂಭಿಸಬೇಕು, ಆದರೆ ಅವರ ನೆಚ್ಚಿನ ಶಿಷ್ಯ ಇರುವುದಿಲ್ಲ. ಬರುವನೆಂಬ ನಿರೀಕ್ಷೆಯಲ್ಲಿ ಬಹಳ ಹೊತ್ತು ಕುಳಿತು, ನಿರೀಕ್ಷೆಯ ಕಂಗಳಲ್ಲೇ ಹುಡುಕುತ್ತಿದ್ದರು. ಆದರೆ ಇತರ ಶಿಷ್ಯರು ಗುರುಗಳಿಗೇ ‘ಪಾಠ ಪ್ರಾರಂಭಿಸಿ ಗುರುಗಳೇ, ಆ ಮಂದಬುದ್ಧಿಯವನನ್ನು ಕಾಯುವುದರಲ್ಲಿ ಅರ್ಥವಿಲ್ಲ’ ಎಂದು ವ್ಯಂಗ ಮಾಡಿದರು.
ಶಂಕರಾಚಾರ್ಯರಿಗೆ ಬಹಳ ನೋವಾಗುತ್ತದೆ. ಅದೇ ನೋವಿನಿಂದ ‘ಸನಂದನಾ ಬರಬಾರದೇ ಬೇಗಾ...’ ಎಂದು ಕೂಗಿ ಕರೆದರು. ಸನಂದರಿಗೆ ಗುರುಗಳ ಕೂಗು ತಕ್ಷಣ ಕೇಳಿಸಿತು. ತುಂಬ ದೂರ ಬಂದುಬಿಟ್ಟದ್ದರಿಂದ ಬೇಗ ಹೋಗಲು ಸಾಧ್ಯವಿರಲಿಲ್ಲ. ಈಜಿ ಹೋಗೋಣ ಎಂದುಕೊಂಡರೆ ಈಜುವುದೂ ಬರುತ್ತಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಲೇ ಗಂಗಾ ನದಿಯ ಮೇಲೆಯೇ ಓಡಲು ಪ್ರಾರಂಭಿಸಿದರು. ಗಂಗಾಮಾತೆಗೆ ಸನಂದರ ಗುರುಭಕ್ತಿಯ ಬಗ್ಗೆ ತಿಳಿದಿತ್ತು. ಹಾಗಾಗಿ ಸನಂದರು ಹೋಗುವೆಡೆಯಲ್ಲೆಲ್ಲ ಕಮಲದ ಹೂಗಳನ್ನು ಹರಡಿಬಿಟ್ಟಳು. ಗುರುಗಳು, ಶಿಷ್ಯಸಮೂಹ ನೋಡ ನೋಡುತ್ತಿದ್ದಂತೆ ಸನಂದನ ಕಮಲದ ಹೂಗಳ ಮೇಲೆ ಓಡಿ ಬಂದು ಗುರುಗಳಿಗೆ ತಲೆಬಾಗಿದರು. ಶಿಷ್ಯಸಮೂಹ ಕೌತುಕದಿಂದ ಈ ಘಟನೆಯನ್ನು ಕಂಡಿತು ಹಾಗೂ ತಪ್ಪಿಗೆ ಪಶ್ಚಾತ್ತಾಪ ಪಟ್ಟಿತು. ಶಂಕರಾಚಾರ್ಯರು ಸನಂದರ ಮೇಲೆ ವರದಹಸ್ತವನ್ನಿರಿಸಿ ‘ಈ ದಿನ ನೀನೇ ಪಾಠ ಹೇಳು’ ಎಂದರು, ಗುರುಗಳ ಮಾತಿನಂತೆ ಸನಂದರು ಆ ದಿನ ಸಾಕ್ಷಾತ್ ಗುರುಗಳೇ ತಲೆದೂಗುವಂತೆ ಪಾಠ ಮಾಡಿದರು. ಕಮಲದ ಹೂವಿನ ಮೇಲೆ ಸನಂದರು ನಡೆದುಕೊಂಡು ಬಂದ ಕಾರಣ ಅವರಿಗೆ ಪಾದಪದ್ಮಾಚಾರ್ಯ ಎಂಬ ಬಿರುದೂ ಲಭಿಸಿತು. ಗುರುವಿನ ಕಾರುಣ್ಯವೇ ಹಾಗೆ. ಜ್ಞಾನ ಎಂಬ ಪ್ರಣತಿಗೆ ಗುರುಭಕ್ತಿ, ಕಾರುಣ್ಯ ಎಂಬ ಎಣ್ಣೆ ಬತ್ತಿಗಳೆರಡೂ ಬೇಕೇ ಬೇಕು.
| ಸುಮಾವೀಣಾ
(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)
(ಪ್ರತಿಕ್ರಿಯಿಸಿ: manollasavv@gmail.com)