ಲೈಫ್‌ಸ್ಟೈಲ್

ರಾಮನವಮಿಗೆ ಬಗೆಬಗೆ ಸ್ವೀಟ್ಸ್‌

Mysuru Rural

ಇಂದು  ರಾಮನವಮಿ. ಹೇಗಿದ್ದರೂ ಎಲ್ಲರೂ ಮನೆಯಲ್ಲಿಯೇ ಇರುವಿರಿ. ಈ ಬಾರಿ ಒಂದಿಷ್ಟು ಹೊಸ ರೆಸಿಪಿ ಕಲಿತು ಇದನ್ನು ಟ್ರೈ ಮಾಡಿ ನೋಡಿ.

ಕಂಡೆನ್ಸ್ಡ್ ಮಿಲ್ಕ್ ಬರ್ಫಿ

ಇವೆಲ್ಲ ಬೇಕು

ಗೋಡಂಬಿ - ಅರ್ಧ ಕಪ್

ಸಕ್ಕರೆ - ಅರ್ಧ ಕಪ್

ಹಾಲು - ಕಾಲು ಕಪ್

ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್

ತುಪ್ಪ - ನಾಲ್ಕು ಟೀ ಚಮಚ

ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವುದು ಹೀಗೆ: ಒಂದು ಪ್ಯಾನ್ನಲ್ಲಿ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಬೇಕು. ಈ ಮಿಶ್ರಣಕ್ಕೆ ಪುಡಿ ಮಾಡಿರುವ ಗೋಡಂಬಿಯನ್ನು ಹಾಕಿ ಕೆದಕುತ್ತಿರಬೇಕು. ಮಿಶ್ರಣವು ಒಂದು ಹದಕ್ಕೆ ಬಂದ ಮೇಲೆ ಅದಕ್ಕೆ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ನೆನಪಿರಲಿ. ಇದು ತಳ ಹಿಡಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಮಿಶ್ರಣಕ್ಕೆ ಕೈಯಾಡಿಸುತ್ತಲೇ ಇರಬೇಕು.

ಸ್ವಲ್ಪ ಹೊತ್ತು ಹೀಗೆ ಮಾಡುತ್ತಿದ್ದಂತೆಯೇ ಮಿಶ್ರಣ ತಳ ಬಿಡಲು ಶುರುಮಾಡುತ್ತದೆ. ಮೊದಲೇ ತುಪ್ಪ ಸವರಿದ ತಟ್ಟೆ ರೆಡಿ ಇಟ್ಟುಕೊಳ್ಳಿ. ಮಿಶ್ರಣವು ಬರ್ಫಿಯ ಹದಕ್ಕೆ ಬಂದ ತಕ್ಷಣ ಈ ತಟ್ಟೆಗೆ ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿ. ಇಷ್ಟು ಮಾಡಿದರೆ ಘಮಘಮಿಸುವ ರುಚಿಕರ ಗೋಡಂಬಿ ಬರ್ಫಿ ಸಿದ್ಧ.

ಸಿಹಿ ಶಂಕರ ಪೋಳೆ ಇವೆಲ್ಲ ಬೇಕು

ರವೆ ನಾಲ್ಕು ಲೋಟ,

ಅಕ್ಕಿ ಹಿಟ್ಟು ಒಂದೂವರೆ ಲೋಟ,

ಮೈದಾಹಿಟ್ಟು ಒಂದೂವರೆ ಲೋಟ,

ರುಚಿಗೆ ಸಕ್ಕರೆ

ರುಚಿಗೆ ಉಪ್ಪು

ತುಪ್ಪ ಒಂದೂವರೆ ಲೋಟ ತುಪ್ಪ

ಕರಿಯಲು ಸ್ವಲ್ಪ ಎಣ್ಣೆ

ತಯಾರಿಸುವುದು ಹೀಗೆ: ಮೊದಲು ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಒಂದೆಡೆ ಇಟ್ಟುಕೊಳ್ಳಿ. ಮೇಲೆ ತಿಳಿಸಿರುವ ಪ್ರಮಾಣದ ರವೆ, ಅಕ್ಕಿ ಹಿಟ್ಟು, ಮೈದಾ, ಉಪ್ಪನ್ನು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ತುಪ್ಪ ಹಾಗೂ ಕರಗಿಸಿದ ಸಕ್ಕರೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿಗೆ ಮಾಡುವ ರೀತಿಯಲ್ಲಿ ಉಂಡೆ ಕಟ್ಟಿ ಲಟ್ಟಿಸಿ.

ಬೇಕಾದ ಆಕಾರಕ್ಕೆ ಲಟ್ಟಿಸಿದ ಹಿಟ್ಟನ್ನು ಕತ್ತರಿಸಿಕೊಳ್ಳಿ. ಎಣ್ಣೆಯಲ್ಲಿ ಕರಿಯಿರಿ. ಇಷ್ಟು ಮಾಡಿದರೆ ಸಿಹಿಯಾಗಿರುವ ಶಂಕರ ಪೋಳೆ ತಿನ್ನಲು ಸಿದ್ಧ.

ಸೋರೆಕಾಯಿ ಸಿಹಿ ಪಾಯಸ

ಇವೆಲ್ಲ ಬೇಕು

ಸೋರೆಕಾಯಿ ಒಂದು

ಸಕ್ಕರೆ ಐದಾರು ಚಮಚ,

ಬೆಲ್ಲ ಮುಕ್ಕಾಲು ಕಪ್,

ತೆಂಗಿನ ತುರಿ ಒಂದು ಕಪ್ ,

ಏಲಕ್ಕಿ 4,

ರುಚಿಗೆ ಉಪ್ಪು

ಅಕ್ಕಿ ಅರ್ಧ ಲೋಟ

ನೀರು 3ಲೋಟ

ತಯಾರಿಸುವುದು ಹೀಗೆ: ಮೊದಲು ಅಕ್ಕಿಯನ್ನು ನೀರಿನಲ್ಲಿ 10_15 ನಿಮಿಷ ನೆನೆಸಿ ಇಡಬೇಕು. ಸೋರೆಕಾಯಿಯ ಸಿಪ್ಪೆ ಮತ್ತು ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ನೀರು, ಬೆಲ್ಲ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ನೆನೆಸಿಟ್ಟ ಅಕ್ಕಿಯನ್ನು ತೊಳೆದು ಮಿಕ್ಸಿಯಲ್ಲಿ ರುಬ್ಬಿ. ಇದನ್ನು ಬೇಯಿಸಿದ

ಸೋರೆಕಾಯಿಗೆ ಹಾಕಿ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಆಗಾಗ್ಗೆ ಕೈಯಾಡಿಸುತ್ತಿರಿ. ಇದಕ್ಕೆ ತೆಂಗಿನತುರಿ ಮತ್ತು ಏಲಕ್ಕಿಯನ್ನು ನುಣ್ಣಗೆ

ರುಬ್ಬಿಕೊಂಡು ಕುದಿಯುತ್ತಿರುವ ಪಾಯಸಕ್ಕೆ ಹಾಕಿದರೆ ಘಮಘಮಿಸುವ ಸಿಹಿ ಪಾಯಸ ಸಿದ್ಧ.

ಶ್ಯಾವಿಗೆ ಕೂರ್ಮಾ

ಇವೆಲ್ಲ ಬೇಕು

ಶ್ಯಾವಿಗೆ- ಕಾಲು ಕೆ.ಜಿ

ಹಾಲು 2 ಲೀಟರ್

ಸಕ್ಕರೆ 2 ಚಮಚ

ಏಲಕ್ಕಿ ಐದಾರು

ಕೇಸರಿ ಸ್ವಲ್ಪ

ಒಣ ಖರ್ಜೂರ 8

ಬಾದಾಮಿ, ಪಿಸ್ತಾ 8

ತುಪ್ಪ 4 ಚಮಚ

ಚಿಕ್ಕದಾಗಿ ಕತ್ತರಿಸಿದ ಕೊಬ್ಬರಿ ಒಂದು ಕಪ್

ತಯಾರಿಸುವುದು ಹೀಗೆ: ಪ್ಯಾನ್ನಲ್ಲಿ ತುಪ್ಪ ಹಾಕಿ ಅದರಲ್ಲಿ ಶ್ಯಾವಿಗೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಅದನ್ನು ಒಂದೆಡೆ ಇಡಿ. ಬೇರೊಂದು ಪಾತ್ರೆಯಲ್ಲಿ ಹಾಲು ಕುದಿಸಿ, ಅದಕ್ಕೆ ಏಲಕ್ಕಿಯನ್ನು ಪುಡಿ ಮಿಕ್ಸ್ ಮಾಡಿ. ಇದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಸ್ವಲ್ಪ ಕಾದ ಹಾಲಿಗೆ ಸಕ್ಕರೆ ಬೆರೆಸಿ ಅದನ್ನು ಸೌಟಿನಿಂದ ಕಲಕುತ್ತಿರಿ. ಈ ಹಾಲಿಗೆ ಮೊದಲೇ ರೆಡಿ ಮಾಡಿಟ್ಟುಕೊಂಡ ಶ್ಯಾವಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಇಳಿಸಿ ಒಂದೆಡೆ ಇಟ್ಟುಕೊಳ್ಳಿ.

ತುಪ್ಪದಲ್ಲಿ ಬಾದಾಮಿ, ಪಿಸ್ತಾ , ಖರ್ಜೂರ ಒಣ ಕೊಬ್ಬರಿಯ ತುಂಡು (ಬೇಕಿದ್ದರೆ ಇನ್ನಷ್ಟು ಡ್ರೈಫ್ರೂಟ್ಸ್) ಹಾಕಿ ಹುರಿದು ಅದನ್ನು ಪಾಯಸಕ್ಕೆ ಹಾಕಿದರೆ

ಶ್ಯಾವಿಗೆ ಕುರ್ಮಾ ಸಿದ್ಧ.

ಗೋಧಿ ತುಪ್ಪದ ಸ್ವೀಟ್

ಇವೆಲ್ಲ ಬೇಕು

ಕೆ.ಜಿ ಗೋಧಿಹಿಟ್ಟು

ಕೆ.ಜಿ ತುಪ್ಪ ಕಾಲು ಕೆ.ಜಿ

ಸಕ್ಕರೆ ಅರ್ಧ ಕೆ.ಜಿ

ಒಂದು ಲೋಟ ಹಾಲು

ಏಲಕ್ಕಿ ಪುಡಿ ಒಂದು ಚಮಚ

ಒಂದು ಕಪ್ ಗೋಡಂಬಿ, ಬಾದಾಮಿ, ಪಿಸ್ತ.

ತಯಾರಿಸುವುದು ಹೀಗೆ: ಒಂದು ಪ್ಯಾನ್ನಲ್ಲಿ ತುಪ್ಪ ಹಾಕಿ ಅದು ಕರಗಿದ ನಂತರ ಗೋಧಿ ಹಿಟ್ಟನ್ನು ಕೆಂಪಗಾಗುವ ತನಕ ಹುರಿದುಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಮಿಕ್ಸ್ ಮಾಡಬೇಕು. ಈಗ ಬಾದಾಮಿ, ಗೋಡಂಬಿ, ಪಿಸ್ತಾ ಸೇರಿಸಿ. ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಉಂಡೆ ಕಟ್ಟಿದರೆ ಬಾಯಲ್ಲಿ ನೀರೂರಿಸುವ ಗೋಧಿ- ತುಪ್ಪದ ಉಂಡೆ ರೆಡಿ.

ಸುಧಾ ಎಚ್‌.ಎಸ್‌