ನವದೆಹಲಿ: ನಮಗೆಲ್ಲಾ ತಿಳಿದಿರುವಂತೆ ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಅಂದರೆ ಅದು ತಮ್ಮ ಆಕರ್ಷಕ ಸ್ಮಾರ್ಟ್ಫೋನ್ (Smartphone) ಕೈಗೆ ತೆಗೆದುಕೊಂಡು, ಅದರಲ್ಲಿನ ಅಪ್ಡೇಟ್ಗಳನ್ನು ನೋಡುತ್ತ ಮಲಗುವುದು. ಈ ಅಭ್ಯಾಸ ಹಲವರಿಗೆ ರೂಢಿಯಾಗಿ ಮಾರ್ಪಟ್ಟಿದೆ. ಬೆಳಗ್ಗೆ ಎಚ್ಚರವಾಗುತ್ತಿದ್ದಂತೆ ಕಣ್ಣು ಬಿಟ್ಟ ತಕ್ಷಣ ದೇವರ ಫೋಟೋ ನೋಡುವುದು ಅಥವಾ ಹಚ್ಚ ಹಸಿರಿನ ಗಿಡ-ಮರಗಳನ್ನು ನೋಡಿ ಕಣ್ಣಿಗೆ ಹಿತ ತಂದುಕೊಳ್ಳಿ ಎಂದು ನಮ್ಮ ಹಿರಿಯರು ಈ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಆದರೆ, ಅದನ್ನು ಪಾಲಿಸುವಲ್ಲಿ ಮಾತ್ರ ನಾವು ವಿಫಲರಾಗಿಯೇ ಉಳಿದಿರುವುದು ದುರಾದೃಷ್ಟಕರ.
ನಿದ್ರೆಯಿಂದ ಎಚ್ಚರಗೊಂಡ ಬಳಿಕ ಮೊದಲು ಸ್ಮಾರ್ಟ್ಫೋನ್ ತೆರೆದು ನೋಡುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಹಾಸಿಗೆ ಮೇಲೆಯೇ ಮಲಗಿ ಕಳೆಯುತ್ತಾರೆ. ಇದೊಂದು ಕೆಟ್ಟ ಅಭ್ಯಾಸವಾಗಿದೆ. ಇದರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಸಹ ಬೀರುತ್ತದೆ. ಹಾಗಾದ್ರೆ, ಎದ್ದ ತಕ್ಷಣ ಮೊಬೈಲ್ ನೋಡುವುದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಎಚ್ಚರಗೊಂಡ ತಕ್ಷಣ ಹೆಚ್ಚಿನ ಮಾಹಿತಿ ಮತ್ತು ನೋಟಿಫಿಕೆಷನ್ ಓದುತ್ತ ಹೋಗುವುದರಿಂದ ಒತ್ತಡದ ಸಮಸ್ಯೆ ಉಂಟುಮಾಡಬಹುದು. ಸೋಷಿಯಲ್ ಮೀಡಿಯಾದಲ್ಲಿ ಬರುವ ಆಘಾತಕಾರಿ ಸುದ್ದಿಗಳನ್ನು ವೀಕ್ಷಿಸುವುದು ತಕ್ಷಣದ ಒತ್ತಡದ ಭಾವನೆಗೆ ಕಾರಣವಾಗಬಹುದು. ಇದು ಆ ದಿನಕ್ಕೆ ಒತ್ತಡವನ್ನು ಹೇರಬಹುದು.
ಇದು ನಿಮ್ಮ ನಿದ್ರೆಯ ಚಕ್ರವನ್ನು ಬ್ರೇಕ್ ಮಾಡಬಹುದು. ಮಲಗುವ ಮುನ್ನ ಮತ್ತು ನೀವು ಎದ್ದ ತಕ್ಷಣ ನಿಮ್ಮ ಫೋನ್‌ನೊಂದಿಗೆ ತೊಡಗಿಸಿಕೊಳ್ಳುವುದರಿಂದ ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿಯಾಗಬಹುದು. ಮೊಬೈಲ್ ಸ್ಕ್ರೀನ್ನಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಇದು ನಿಮಗೆ ನಿದ್ರೆಗೆ ಭಂಗ ತರಬಹುದು.
ಬೆಳಗ್ಗೆ ಹೊತ್ತು ನಿಮ್ಮ ಕಣ್ಣುಗಳು ಇನ್ನೂ ಬೆಳಕಿಗೆ ಹೊಂದಿಕೊಳ್ಳುವ ಮುನ್ನವೇ ಹೆಚ್ಚಿನ ಸಮಯ ಮೊಬೈಲ್ ನೋಡುವುದಿರಂದ ಕಣ್ಣುಗಳಿಗೆ ಆಯಾಸವಾಗಬಹುದು. ಇದು ಅಸ್ವಸ್ಥತೆ, ತಲೆನೋವು ಮತ್ತು ಒಣ ಕಣ್ಣುಗಳಿಗೆ ಕಾರಣವಾಗಬಹುದು. ಇದು ನಿಮ್ಮ ಒಟ್ಟಾರೆ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ.
ಎದ್ದ ತಕ್ಷಣ ನಿಮ್ಮ ಫೋನ್ನ ನಿರಂತರವಾಗಿ ವೀಕ್ಷಿಸುವ ಅಭ್ಯಾಸ ವ್ಯಸನಕಾರಿ ನಡವಳಿಕೆಗಳನ್ನು ಬಲಪಡಿಸುತ್ತದೆ. ಮೆಸೇಜ್ ನೋಡುವುದು ಅಥವಾ ಆನ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಡೋಪಮೈನ್ ವಿಪರೀತ ಅವಲಂಬನೆಯನ್ನು ಉಂಟುಮಾಡಬಹುದು. ಈ ಅಭ್ಯಾಸ ಹೆಚ್ಚಾದರೆ ಇದರಿಂದ ಹೊರಬರುವುದು ಕಷ್ಟವಾಗುತ್ತದೆ,(ಏಜೆನ್ಸೀಸ್).