ಅರಿಸಿನಕ್ಕೆ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಪ್ರತಿನಿತ್ಯ ನಾವು ಅರಿಸಿನ ಬಳಸುವ ಮೂಲಕ ಯಾವೆಲ್ಲ ಪ್ರಯೋಜನ ಪಡೆಯಬಹುದು ಎಂಬ ವಿವರ ಇಲ್ಲಿದೆ.
ಭಾರತೀಯರ ಅಡುಗೆಮನೆಯಲ್ಲಿ ಅರಿಸಿನ ಅಗತ್ಯ ಸಾಂಬಾರ ಪದಾರ್ಥ. ಆಯುರ್ವೇದದಲ್ಲಿ ಅರಿಸಿನಕ್ಕೆ ಎಲ್ಲಿಲ್ಲದ ಮಹತ್ವವಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅರಿಸಿನವು ಹಲವು ರೋಗರುಜಿನಗಳಿಗೆ ರಾಮಬಾಣ. ಪ್ರತಿನಿತ್ಯ ನಮ್ಮ ಆರೋಗ್ಯಭಾಗ್ಯಕ್ಕೆ ಅರಿಸಿನದ ಕೊಡುಗೆ ಅಪಾರ.
ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ
ಅರಿಶಿನವು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಪ್ರತಿನಿತ್ಯ ಅರಿಸಿನ ಬಳಕೆಯ ಅಡುಗೆಯಿಂದ ಕರುಳಿನ ಆರೋಗ್ಯ ಉತ್ತಮಪಡಿಸಬಹುದು. ಊಟಕ್ಕೆ ಮೊದಲು ಬೆಚ್ಚಗಿನ ನೀರು ಅಥವಾ ಹರ್ಬಲ್ ಚಹಾಗಳಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿದದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಉಬ್ಬರವೂ ಕಡಿಮೆಯಾಗುತ್ತದೆ.
ಉರಿಯೂತ ನಿವಾರಕ
ಅರಿಶಿನದಲ್ಲಿನ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಪ್ರಬಲವಾದ ನೈಸರ್ಗಿಕ ಉರಿಯೂತ ಕಡಿಮೆ ಮಾಡುವ ಅಂಶವಾಗಿದೆ. ಸಾಮಾನ್ಯವಾಗಿ ಕೀಲು ನೋವು, ಸಂಧಿವಾತ ಮತ್ತು ಸ್ನಾಯು ನೋವನ್ನು ನಿವಾರಿಸಲು ಅರಿಶಿನವನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ.
ರೋಗ ನಿರೋಧಕ ವ್ಯವಸ್ಥೆಗೆ ಬೆಂಬಲ
ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅರಿಶಿನ ಹಾಕಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದು ಶೀತ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಾಂಪ್ರದಾಯಿಕ ಕ್ರಮವಾಗಿದೆ.
ಚರ್ಮ ಮತ್ತು ಕೂದಲಿನ ಕಾಂತಿಗಾಗಿ
ಕಾಂತಿಯುತ ಚರ್ಮಕ ಹೊಂದಲು ಬಯಸುವವರು ಅರಿಶಿನದ ಫೇಶಿಯಲ್‌ಮ ಆಡಬಹುದು. ಅರಿಶಿನವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸುವ ಮೂಲಕ ಮೊಡವೆಗಳ ವಿರುದ್ಧ ಹೋರಾಡಬಹುದು. ಇದು ಮೈಬಣ್ಣವನ್ನು ಹೊಳಪು ಮಾಡುತ್ತದದೆ. ಚರ್ಮವನ್ನು ಕಾಂತಿಯುಕ್ತವಾಗಿಸುತ್ತದೆ. ತಲೆಕೂದಲಿನ ಬೆಳವಣಿಗೆಗೂ ಸಹಕಾರಿ. ತಲೆಹೊಟ್ಟು ಹೋಗಲಾಡಿಸುತ್ತದೆ.
ದೇಹವನ್ನು ಶುದ್ಧ ಮಾಡುತ್ತದೆ
ಆಯುರ್ವೇದದಲ್ಲಿ ದೇಹದ ಕಲ್ಮಷಗಳು, ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಅರಸಿನ ಬಳಸಲಾಗುತ್ತದೆ. ಅರಿಶಿನ, ನಿಂಬೆರಸ ಮತ್ತು ಬೆಚ್ಚಗಿನ ನೀರಿನಿಂದ ಮಾಡಿದ ಡಿಟಾಕ್ಸ್ ಪಾನೀಯವನ್ನು ಕುಡಿಯಬಹುದು.