ಪ್ರತಿಯೊಬ್ಬರಿಗೂ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ತೂಕವನ್ನು ಹೆಚ್ಚಿಸುವುದು ಎಷ್ಟು ಸುಲಭವೋ, ಅದನ್ನು ಕಳೆದುಕೊಳ್ಳುವುದು ಅಷ್ಟೇ ಕಷ್ಟ. ತೂಕ ಹೆಚ್ಚಾಗುವುದು ಹಾಗೂ ತೂಕ ಇಳಿಸಿಕೊಳ್ಳುವುದು ಎರಡು ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ತೂಕ ಇಳಿಸುವಲ್ಲಿ ವ್ಯಾಯಾಮ, ಜಿಮ್, ವಾಕ್ ಹೀಗೆ ದೈಹಿಕ ಚಟುವಟಿಕೆಯೊಂದಿಗೆ ಆಹಾರದ ಪಾತ್ರವೂ ಮುಖ್ಯವಾಗಿರುತ್ತದೆ. ವ್ಯಾಯಾಮದ ಪಾತ್ರ ಶೇಕಡಾ 30 ರಷ್ಟಿದ್ದರೆ, ಆಹಾರದ ಪಾತ್ರವು ಶೇಕಡಾ 70 ರಷ್ಟಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಎಂಬುದರ ಮಾಹಿತಿ ಇಲ್ಲಿದೆ.
- ಪಾಲಕ್, ಸ್ವಿಸ್ ಚಾರ್ಡ್ನಂತಹ ಆಹಾರದಲ್ಲಿ ಕ್ಯಾಲೋರಿಗಳಲ್ಲಿ ಕಡಿಮೆ ಆದರೆ ಫೈಬರ್, ಜೀವಸತ್ವಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿದೆ. ಕೋಸುಗಡ್ಡೆ, ಹೂಕೋಸು ಮತ್ತು ಬ್ರಸೆಲ್ಸ್ನಲ್ಲಿ ಫೈಬರ್ ಮತ್ತು ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೆಚ್ಚು ಕ್ಯಾಲೋರಿ ಆಹಾರವನ್ನು ಸೇವಿಸುವ ಬದಲು ಈ ರೀತಿ ಆಹಾರ ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಭಾವನೆ ನಮ್ಮಲ್ಲಿರುತ್ತದೆ. ಇದರಿಂದ ನಾವು ಬೇಗ ತೂಕ ಇಳಿಸಬಹುದು.
- ಸ್ಕಿನ್ಔಟ್ ಚಿಕನ್, ಮೀನು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಜತೆಗೆ ಸ್ನಾಯುಗಳು ಬಲಗೊಳ್ಳುವಂತೆ ಮಾಡುತ್ತದೆ. ವೆಜ್ ಸೇವಿಸುವವರು ಬೀನ್ಸ್, ಮತ್ತು ಕಡಲೆಗೆ ಆದ್ಯತೆ ನೀಡಬಹುದು. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದ್ದು, ಹಸಿವು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಬೆರಿಫ್ರೂಟ್ಸ್, ಸ್ಟ್ರಾಬೆರಿಗಳು ಕಡಿಮೆ ಕ್ಯಾಲೋರಿ ಮತ್ತು ಫೈಬರ್, ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಜತೆಗೆ ಮೊಸರು ಕೂಡ ತೂಕ ಇಳಿಸಲು ಸಹಕರಿಸುತ್ತದೆ.
- ಆವಕಾಡೊಗಳಿಂದ ಫೈಬರ್ ಜತೆಗೆ ಆರೋಗ್ಯಕರ ಕೊಬ್ಬು ನಮಗೆ ಲಭ್ಯವಾಗುತ್ತದೆ. ಇದು ಹಸಿವನ್ನು ನಿಯಂತ್ರಿಸುತ್ತದೆ. ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬಾದಾಮಿ, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತವೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂಪೂರ್ಣ ಓಟ್ಸ್‌ನಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ, ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ.