ಲೈಫ್‌ಸ್ಟೈಲ್

ಧೂಮಪಾನ, ಮದ್ಯಪಾನಕ್ಕಿಂತಲೂ ತುಂಬಾ ಡೇಂಜರ್​ ಅಂತೆ ಈ ವ್ಯಸನ... ಸಂತೋಷವನ್ನೇ ಕಿತ್ತುಕೊಳ್ಳುತ್ತೆ ಎಚ್ಚರ! Addiction

Addiction : ಧೂಮಪಾನ ಮತ್ತು ಮದ್ಯಪಾನಕ್ಕಿಂತಲೂ ಜನರನ್ನು ಹೆಚ್ಚು ಕಾಡುವ ಅತಿ ಅಪಾಯಕಾರಿ ವ್ಯಸನದ ಬಗ್ಗೆ ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮೂಳೆ ಶಸ್ತ್ರಚಿಕಿತ್ಸಕ ಮತ್ತು ಕ್ರೀಡಾ ವೈದ್ಯ ಮನನ್ ವೋರಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಸನದ ಗಂಭೀರತೆಯನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಅಶ್ಲೀಲ ವಿಡಿಯೋಗಳನ್ನು ಅತಿಯಾಗಿ ನೋಡುವುದರಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.

ನಿಯಮಿತವಾಗಿ ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದ ಧೂಮಪಾನ ಮತ್ತು ಮದ್ಯಪಾನಕ್ಕಿಂತ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಮನನ್​ ವೋರಾ ಹೇಳಿದ್ದಾರೆ. ಸಾಮಾನ್ಯವಾಗಿ ಈ ವಿಚಾರವನ್ನು ತುಂಬಾ ವಿರಳವಾಗಿ ಚರ್ಚಿಸಲಾಗುತ್ತದೆ. ಇಲ್ಲಿ ಯಾರನ್ನೂ ನಾಚಿಕೆಪಡಿಸುವುದು ನನ್ನ ಗುರಿಯಲ್ಲ ಆದರೆ, ಹದಿಹರೆಯದವರು ಮತ್ತು ಯುವ ವಯಸ್ಕರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳುವುದು ತುಂಬಾ ಮುಖ್ಯ ಎಂದು ವೋರಾ ಹೇಳಿದ್ದಾರೆ.

ನೀವು ನಿರಂತರವಾಗಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದಾಗ, ಅದು ಮೆದುಳಿನಲ್ಲಿನ ಪ್ರತಿಫಲನ ವ್ಯವಸ್ಥೆಯನ್ನು ಅತಿಯಾಗಿ ಉತ್ತೇಜಿಸುತ್ತದೆ. ಈ ವ್ಯವಸ್ಥೆ ಸಕ್ಕರೆ, ಮಾದಕ ವಸ್ತುಗಳು ಅಥವಾ ಜೂಜಾಟಕ್ಕೂ ಇದೇ ರೀತಿಯ ಪ್ರಚೋದನೆಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಅಶ್ಲೀಲ ವಿಡಿಯೋಗಳಿಗೆ ದಾಸರಾದರೆ, ಕಾಲಾನಂತರದಲ್ಲಿ, ನಿಮ್ಮ ಮೆದುಳಿಗೆ ಹೆಚ್ಚು ತೀವ್ರವಾದ ಪ್ರಚೋದನೆಯ ಅಗತ್ಯವಿರುತ್ತದೆ. ಇದರಿಂದ ನಿಮಗೆ ಸಂತೋಷವನ್ನು ತರುತ್ತಿದ್ದ ಸಾಮಾನ್ಯ ವಿಷಯಗಳು ಅಥವಾ ಸಣ್ಣ ವಿಚಾರಗಳು ಕೂಡ ಇನ್ನು ಮುಂದೆ ನಿಮಗೆ ಅದೆ ರೀತಿಯ ಆನಂದವನ್ನು ತರುವುದಿಲ್ಲ. ಇದು ಆತಂಕ, ಖಿನ್ನತೆ ಮತ್ತು ಒಂಟಿತನದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವೋರಾ ಅವರು ಎಚ್ಚರಿಸಿದ್ದಾರೆ.

ಅನೇಕ ಜನರು ಒತ್ತಡ ಅಥವಾ ಬೇಸರದಿಂದ ತಪ್ಪಿಸಿಕೊಳ್ಳಲು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ. ಆದರೆ, ಬೇಗ ಅಥವಾ ನಂತರ ಅದು ವ್ಯಸನವಾಗಿ ಬದಲಾಗಬಹುದು ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ, ಇಂತಹ ವ್ಯಸನಗಳಿಂದ ಹೊರ ಬರಲು ಪ್ರಯತ್ನಸಬೇಕು. ಕೂಡಲೇ ಎಚ್ಚೆತ್ತುಕೊಳ್ಳಿ ಎಂದು ವೋರಾ ಅವರು ಸಲಹೆ ನೀಡಿದ್ದಾರೆ.

ಇನ್ನು ವೋರಾ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಕಾಮೆಂಟ್‌ಗಳ ಸುರಿಮಳೆಗೈದಿದ್ದು, ಅವರನ್ನು ಹೊಗಳಿದ್ದಾರೆ. ವೈದ್ಯರು ಹೇಳಿದಂತೆ ಅಶ್ಲೀಲ ವಿಡಿಯೋ ವ್ಯಸನದಿಂದ ದೂರವಿರುವಂತೆ ಕಾಮೆಂಟ್​ ಮಾಡುತ್ತಿದ್ದಾರೆ. ಇಂದಿನ ಇಂಟರ್ನೆಟ್‌ ಜಮಾನದಲ್ಲಿ ಅಶ್ಲೀಲ ವಿಡಿಯೋಗಳಿಗೆ ದಾಸರಾಗುತ್ತಿರುವ ಯುವಜನರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದ್ದು, ಇದೇ ಸಂದರ್ಭದಲ್ಲಿ ವೋರಾ ಅವರ ಹೇಳಿಕೆ ಗಮನ ಸೆಳೆದಿದೆ. (ಏಜೆನ್ಸೀಸ್​)