ತಾಜಾ ಮಾವಿನ ಹಣ್ಣು 
ಲೈಫ್‌ಸ್ಟೈಲ್

ಇದೇ ರಸಭರಿತ ಮಾವು ಅಂತ ಮೋಸ್ ಹೋಗ್ಬೇಡಿ! ಕೆಮಿಕಲ್​ ಸಿಂಪಡಿಸಿದ ಹಣ್ಣುಗಳನ್ನು ಪತ್ತೆಹಚ್ಚುವುದು ಹೀಗೆ...

ಪ್ರಮುಖ ಮುಖ್ಯಾಂಶಗಳು

  • ಆಕರ್ಷಕವಾಗಿ ಕಾಣುವ ಬಣ್ಣದಿಂದ ಮೋಸ ಹೋಗಬೇಡಿ ಹುಷಾರ್​
  • ಮಾರುಕಟ್ಟೆಯಲ್ಲಿವೆ ಕೆಮಿಕಲ್​ ಸಿಂಪಡಿಸಿದ ಮಾವಿನ ಹಣ್ಣುಗಳು
  • ಅಸಲಿ, ನಕಲಿ ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉತ್ತರ
Natural Mangoes: ಬೇಸಿಗೆಗಾಲದಲ್ಲಿ ಹೇರಳವಾಗಿ ಸಿಗುವ ವಿವಿಧ ತಳಿಯ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಾವು ಅಂದಾಕ್ಷಣ ಬಾಯಲ್ಲಿ ನೀರೂರಲು ಶುರುವಾಗುತ್ತೆ. ಅಷ್ಟರ ಮಟ್ಟಿಗೆ, ಈ ಹಣ್ಣನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ವರ್ಷದಲ್ಲಿ ಕೇವಲ ಮೂರ್ನಾಲ್ಕು ತಿಂಗಳು ಮಾತ್ರ ಲಭ್ಯವಿರುವ ಮಾವುಗಳು, ಮಾರುಕಟ್ಟೆಯಲ್ಲಿ ತನ್ನ ಆಕರ್ಷಕ ಬಣ್ಣದಿಂದಲೇ ಗ್ರಾಹಕರನ್ನು ಕೈಬೀಸಿ ಕರೆಯುತ್ತವೆ. ಬಣ್ಣಕ್ಕೆ ಮರುಳಾಗಿ, ಕೆಮಿಕಲ್​ ಲೇಪನ ಮತ್ತು ಅಸಲಿ ಹಣ್ಣಿನ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳದ ಜನರು, ಆದಷ್ಟು ನೈಸರ್ಗಿಕವಾಗಿ ಹಣ್ಣಾದ ಮಾವನ್ನು ಸವಿಯುವ ಬದಲಿಗೆ ಕೆಮಿಕಲ್​ ಹಣ್ಣುಗಳನ್ನೇ ಹೆಚ್ಚು ತಿನ್ನುವುದು ದುರಾದೃಷ್ಟಕರ.
ರಸಪುರಿ, ಬಾದಾಮಿ, ಮಲಗೋವ, ಅಲ್ಫೋನ್ಸೋ, ಕೇಸರ್, ದಶೆಹರಿ ಮತ್ತು ಬಂಗನಪಲ್ಲಿ ಮಾವುಗಳು ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಮಾರಾಟವಾಗುವ ರುಚಿ ಭರಿತ ಹಣ್ಣುಗಳು. ಈ ಹಣ್ಣುಗಳನ್ನು ಸವಿಯುವ ಧಾವಂತದಲ್ಲಿ ಮಾರುಕಟ್ಟೆಗೂ ಮುಗಿಬೀಳುವ ನಮ್ಮ ಜನ, ಕೆಮಿಕಲ್​ನಿಂದ​ ಸಿಂಪಡಿಸಿದ ಮಾವುಗಳನ್ನೇ ಅಸಲಿ ಎಂದು ತಪ್ಪಾಗಿ ಭಾವಿಸಿ ತಿನ್ನುತ್ತಾರೆ. ನೈಸರ್ಗಿಕವಾಗಿ ಹಣ್ಣಾದ ಮಾವಿಗಿಂತ ಕೆಮಿಕಲ್​ ಬಳಕೆಯ ಫ್ರೂಟ್​ಗಳನ್ನೇ ಲಾಭದ ಆಸೆಗೆ ಜನರಿಗೆ ತಿನ್ನಿಸುವ ಪ್ರವೃತ್ತಿಯನ್ನು ಮಾರಾಟಗಾರರು ರೂಢಿಸಿಕೊಂಡಿರುವುದು ದುರಂತವೇ ಸರಿ.

ಅಸಲಿ, ನಕಲಿ ಪತ್ತೆ ಹೇಗೆ?

ನೈಸರ್ಗಿಕವಾಗಿ ಹಣ್ಣಾದ ಮಾವು ಮತ್ತು ಕೆಮಿಕಲ್​ ಸಿಂಪಡಿಸಿ ಹಣ್ಣು ಮಾಡಿರುವುದು ಯಾವುದು ಎಂಬುದನ್ನು ಕಂಡುಹಿಡಿಯಲು ಮೊದಲು ಹಣ್ಣಿನ ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಿ. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ಕೆಮಿಕಲ್​ ಬಳಕೆಯಾಗಿರುವ ಹಣ್ಣಿನ ಮೇಲೆ ಹಸಿರು ಮತ್ತು ಹಳದಿ ಬಣ್ಣವಿರುತ್ತದೆ. ಅಂದರೆ ಪೂರ್ಣವಾಗಿ ಬಣ್ಣ ಕೂಡಿರುವುದಿಲ್ಲ. ಪ್ಯಾಚ್​ ಬಿದ್ದಂತ್ತಿರುತ್ತದೆ.

ತೊಟ್ಟಿನಲ್ಲಿ ಪರಿಮಳ ಮಾಯ

ಮಾವಿನ ತೊಟ್ಟಿನಲ್ಲಿ ಬಳಿ ಪರಿಮಳ ಇದೆಯಾ ಚೆಕ್​ ಮಾಡಿ. ಘಮಘಮವಿಲ್ಲ ಎಂದಾದರೆ, ಅದರಲ್ಲಿ ರಾಸಾಯನಿಕ ಸಿಂಪಡಿಸಲಾಗಿದೆ ಎಂದರ್ಥ. ಇನ್ನೊಂದೆಡೆ, ಹಣ್ಣನ್ನು ಮೃದುವಾಗಿ ಮುಟ್ಟಿ ನೋಡಿ. ಮೇಲ್ನೋಟಕ್ಕೆ ಬಣ್ಣದಿಂದ ಕೂಡಿದ್ದರೂ ಹಣ್ಣು ಗಟ್ಟಿ ಅನಿಸಿದರೆ, ಅದು ಒಳಗಿನಿಂದ ಪೂರ ಹಣ್ಣಾಗಿರುವುದಿಲ್ಲ. ಕಪ್ಪು ಕಪ್ಪು ಚುಕ್ಕೆಗಳು, ಗಾಯಗಳು ಕಂಡುಬಂದರೆ ಅದೆಲ್ಲವೂ ನಕಲಿ ಎಂಬುದು ಸ್ಪಷ್ಟ.

ನೀರಿನಲ್ಲಿ ಟೆಸ್ಟ್​ ಮಾಡಿ

ಒಂದು ಬಕೆಟ್​ ನೀರಿನಲ್ಲಿ ಮಾವಿನ ಹಣ್ಣನ್ನು ಹಾಕಿ. ಅದೇನಾದರೂ, ಮುಳುಗಿದರೆ, ಅದು ಕೆಮಿಕಲ್​ನಿಂದ ಹಣ್ಣಾಗಿರುವುದು ಖಚಿತ. ಅದೇ ಮಾವು ತೇಲಾಡಿದರೆ, ಅದು ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ.

ಈ ಸಲಹೆಗಳು ನೆನಪಿರಲಿ

ಮಾರುಕಟ್ಟೆಗಳಿಂದ ತಂದ ಹಣ್ಣುಗಳು ಒಂದೇ ಬಣ್ಣದಲ್ಲಿ ಕಂಡರೂ ಅದರಲ್ಲಿ ಕೆಮಿಕಲ್​ ಅಂಶವಿರುವ ಸಾಧ್ಯತೆಗಳು ಹೆಚ್ಚು. ಹೀಗಾಗಿ, ಹಣ್ಣನ್ನು ತಿನ್ನುವ ಮೊದಲು ಕನಿಷ್ಠ 15ರಿಂದ 20 ನಿಮಿಷ ನೀರಿನಲ್ಲಿ ನೆನೆಸಿಟ್ಟು, ನಂತರ ಚೆನ್ನಾಗಿ ತೊಳೆದು ಚಪ್ಪರಿಸುವುದು ಉತ್ತಮ. ಸಾಧ್ಯವಾದಷ್ಟು ನೇರವಾಗಿ ರೈತರಿಂದ ಅಥವಾ ಆರ್ಗ್ಯಾನಿಕ್ ಮಳಿಗೆಗಳಿಂದ ಮಾವುಗಳನ್ನು ಖರೀದಿ ಮಾಡಿ,(ಏಜೆನ್ಸೀಸ್).