ಊಟದ ಬಳಿಕ ಐಸ್​ಕ್ರೀಮ್​ ಸೇವನೆ 
ಲೈಫ್‌ಸ್ಟೈಲ್

ಊಟದ ಬಳಿಕ ಐಸ್​ಕ್ರೀಂ ತಿಂತೀರಾ? ಅದರಲ್ಲೂ ಚಾಕೊಲೇಟ್​ ಫ್ಲೇವರ್​? ಹಾಗಿದ್ರೆ, ಈ ಸಮಸ್ಯೆಗಳು ಫಿಕ್ಸ್​

ಪ್ರಮುಖ ಮುಖ್ಯಾಂಶಗಳು

  • ಊಟ ತಿಂದ ಬಳಿಕ ಐಸ್​ಕ್ರೀಂ ತಿನ್ನುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ
  • ರಾತ್ರಿಯಲ್ಲಿ ಐಸ್​ಕ್ರೀಂ ಸೇವನೆಯಿಂದ ಆರೋಗ್ಯಕ್ಕೆ ಕೆಲವು ಸಮಸ್ಯೆಗಳು ಖಚಿತ
Ice Cream: ಐಸ್​ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಈಗ ಬೇಸಿಗೆಗಾಲ ಅಂದಮೇಲೆ ಕೇಳಬೇಕಾ? ಈ ಸಮಯದಲ್ಲಿ, ಅತಿ ಹೆಚ್ಚು ಐಸ್​ಕ್ರೀಂಗಳು ಮಾರಾಟ ಆಗುತ್ತವೆ. ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿಲ್ಲ ಎಂದರೂ ನಾಲಿಗೆಗೆ ತಂಪಾಗಿಸಿದರೆ ಸಾಕು ಎನ್ನುವವರೇ ನಮ್ಮಲ್ಲಿ ಹೆಚ್ಚು. ಬೇಸಿಗೆ ಮಾತ್ರವಲ್ಲ, ಮಳೆ ಮತ್ತು ಚಳಿಗಾಲದಲ್ಲಿಯೂ ಇದನ್ನು ತಿನ್ನುವವರ ಸಂಖ್ಯೆ ಅಧಿಕವೇ.
ವಿಶೇಷವಾಗಿ ಊಟದ ಬಳಿಕ ಒಂದು ಐಸ್​​ಕ್ರೀಮ್​ ತಿಂದರೆ ಹಲವರಿಗೆ ಅದೇನೋ ಖುಷಿ, ತೃಪ್ತಿ ಭಾವ. ಕೆಲವರಂತು ಬಿರಿಯಾನಿ ಊಟ ಅಥವಾ ಭೂರಿ ಭೋಜನ ಸವಿದ ಮೇಲೆ ತಮ್ಮಿಷ್ಟದ ಪ್ಲೇವರ್​ನ ಬಗೆಬಗೆಯ ಐಸ್​ಕ್ರೀಮ್​ ತಿನ್ನಲೇಬೇಕು. ಆಗ ಮಾತ್ರ ಅವರಿಗೆ ತಿಂದ ಊಟ ಅರಗುವುದು ಮತ್ತು ತೃಪ್ತಿದಾಯಕ ಅನಿಸುವುದು. ಇನ್ನೂ ಕೆಲವರು ರಾತ್ರಿ ಊಟದ ಬಳಿಕ ಇದನ್ನೆಲ್ಲ ರೂಢಿಸಿಕೊಂಡಿರುತ್ತಾರೆ. ಆದರೆ, ಇದೇ ಆರೋಗ್ಯಕ್ಕೆ ಹಲವು ತೊಂದರೆಗಳನ್ನು ತಂದಿಡುತ್ತೆ ಎಂಬುದು ಗೊತ್ತೇ ಇರುವುದಿಲ್ಲ.

ರಾತ್ರಿ ಊಟದ ಬಳಿಕ ಐಸ್​ಕ್ರೀಮ್​, ನಿದ್ರೆ ಮಾಯ!

ಐಸ್ ಕ್ರೀಮ್ ಬಹಳಷ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಸುತ್ತದೆ ಮತ್ತು ಮೆದುಳನ್ನು ಎಚ್ಚರವಿರುವಂತೆ ಮಾಡುತ್ತದೆ. ಹೆಚ್ಚಿನ ಕೊಬ್ಬಿನ ಅಂಶದಿಂದಾಗಿ, ಆಹಾರವು ಬೇಗನೆ ಜೀರ್ಣವಾಗುವುದಿಲ್ಲ. ಇದು ಹೊಟ್ಟೆಯನ್ನು ಭಾರವಾಗಿಸುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಸಕ್ಕರೆ ಅಂಶದಿಂದ ರಾತ್ರಿಯಲ್ಲಿ ಮಿದುಳು ಆ್ಯಕ್ಟೀವ್​

ಶರೀರವು ನಿದ್ರೆಗೆ ಜಾರುವ ಮೊದಲು ವಿಶ್ರಾಂತಿಗಾಗಿ ಸಿದ್ಧವಾಗುತ್ತದೆ. ಆದರೆ, ಐಸ್​ಕ್ರೀಮ್​ನಲ್ಲಿರುವ ಹೆಚ್ಚು ಸಕ್ಕರೆಯು ಈ ನೈಸರ್ಗಿಕ ಪ್ರಕ್ರಿಯೆಗೆ ಅಡಚಣೆ ಉಂಟುಮಾಡುತ್ತದೆ. ಇವು ಡೈರಿ ಉತ್ಪನ್ನಗಳಾದ ಕಾರಣ, ಕೆಲವರಿಗೆ ಜೀರ್ಣಕಾರಿ ಸಮಸ್ಯೆಗಳು ಕಾಡಬಹುದು. ತಿಂದ ತಕ್ಷಣ ಮಲಗುವುದರಿಂದ ಆಮ್ಲ ಹಿಮ್ಮುಖ ಹರಿವು ಮತ್ತು ಎದೆಯುರಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ರಾತ್ರಿಯಲ್ಲಿ ಐಸ್​ಕ್ರೀಂ ಬೇಕೆಂಬ ಆಸೆ ಹೆಚ್ಚು!

ಸಿಹಿ ಸೇವಿಸುವುದರಿಂದ ರಾತ್ರಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚುತ್ತದೆ. ಕೆಲವರಿಗಂತು ರಾತ್ರಿಯಲ್ಲಿ ಐಸ್​ಕ್ರೀಮ್​ ತಿನ್ನುವ ಬಯಕೆಯನ್ನು ಕಂಟ್ರೋಲ್​ ಮಾಡಿಕೊಳ್ಳಲು ಆಗುವುದೇ ಇಲ್ಲ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

ಚಾಕೊಲೇಟ್ ಫ್ಲೇವರ್​ ಇನ್ನೂ ಡೇಂಜರ್​

ಚಾಕೊಲೇಟ್ ಐಸ್ ಕ್ರೀಮ್ ಕೆಫೀನ್ ಮತ್ತು ಥಿಯೋಬ್ರೋಮಿನ್ ಅಂಶಗಳಿಂದ ಕೂಡಿರುತ್ತದೆ. ಇದು ಮೆದುಳನ್ನು ರಾತ್ರಿಯಲ್ಲೂ ಆ್ಯಕ್ಟೀವ್​ ಆಗಿಯೇ ಇಟ್ಟಿರುತ್ತದೆ. ಹೀಗಾಗಿಯೇ, ಹಲವರು ಕಣ್ಣಿನಲ್ಲಿ ನಿದ್ದೆಯ ಜೋಂಪು ಹತ್ತಿದ್ದರೂ, ದೇಹ ಆಯಾಸಗೊಂಡಿದ್ದರೂ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇದು ನಿದ್ರೆಗೆ ಮಾತ್ರವಲ್ಲ, ದೇಹದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ ನೆನಪಿರಲಿ,(ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.