ನಮ್ಮ ಶರೀರವು ಸ್ವಾಸ್ಥ್ಯದಿಂದ ಪರಿಶುದ್ಧವಾಗಿರಬೇಕಾದರೆ ದೇಹದ ಮಲಗಳಲ್ಲಿ ಒಂದಾಗಿರುವ ಮೂತ್ರವು ಕಾಲಕ್ಕೆ ಸರಿಯಾಗಿ ಸಮರ್ಪಕವಾಗಿ ಶರೀರದಿಂದ ವಿಸರ್ಜಿಸಲ್ಪಡಬೇಕು. ಇದಿಲ್ಲವಾದಲ್ಲಿ ಮೂತ್ರ ಸಂಬಂಧೀ ದೇಹಭಾಗಗಳಲ್ಲಿ ಬಹುವಿಧವಾದ ಬಾಧೆಗಳಿಗೆ ಕಾರಣವಾಗುತ್ತದೆ. ಮೂತ್ರದ ಬಾಧೆಗಳನ್ನು ನಿವಾರಿಸಬೇಕಾದರೆ ಸರಿಯಾದ ಪ್ರಮಾಣದಲ್ಲಿ ಶುದ್ಧವಾದ ನೀರು, ಆಹಾರ ಸೇವನೆ, ಶರೀರದ ನೈರ್ಮಲ್ಯ ಪಾಲನೆ, ಸ್ವಚ್ಛವಾದ ಪರಿಸರದಲ್ಲಿ ಮೂತ್ರ ವಿಸರ್ಜನೆ, ದೇಹಕ್ಕೆ ಹಿತವೆನಿಸುವ ಮತ್ತು ಋತುಮಾನಕ್ಕೆ ಹೊಂದುವ ಆಹಾರ ಸೇವನೆ, ನಾವಿರುವ ಭೂಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದಾರ್ಥಗಳ ಆಯ್ಕೆ ಹಾಗೂ ಮೂತ್ರ ಮಾಡಲು ದೇಹವು ಸೂಚನೆ ಕೊಟ್ಟಾಗ ಅದನ್ನು ತಡೆಹಿಡಿಯದಿರುವುದು- ಇವೆಲ್ಲವೂ ಬಹಳ ಮುಖ್ಯವಾಗುತ್ತವೆ. ನಮ್ಮ ದೇಹ ಸ್ಥಿತಿಗೆ ಅಗತ್ಯವಾದಷ್ಟು ನೀರು ಮತ್ತು ಆಹಾರ ಕಡಿಮೆಯಾದಾಗಲೂ ಮೂತ್ರ ಬಾಧೆ ಎದುರಾಗುತ್ತದೆ. ಮೂತ್ರಾಂಗಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೂ ಅದು ಮೂತ್ರ ಅವಯವ, ಚರ್ಮ, ರಕ್ತವೂ ಸೇರಿದಂತೆ ನಾನಾಕಡೆ ಅನೇಕ ವಿಧವಾದ ವ್ಯಾಧಿಗಳನ್ನು ತಂದೊಡ್ಡುತ್ತದೆ.
ಮೂತ್ರ ಮಾಡುವ ಸ್ಥಳ ದೂಷಿತವಾಗಿದ್ದರೆ ಅದು ಹಲವು ತೆರನಾದ ಮೂತ್ರದ ಸೋಂಕುಗಳ ಮೂಲಕ ಬಹುಕಾಲ ವ್ಯಕ್ತಿಯನ್ನು ಬಾಧಿಸುತ್ತಲೇ ಇರುತ್ತದೆ. ದೇಹಪ್ರಕೃತಿಗೆ ಅನುಗುಣವಾಗಿ ಆಹಾರ ಬೇಕು. ಪಿತ್ತ ಪ್ರಕೃತಿಯವರು ಊಟಕ್ಕೆ ಉಪ್ಪಿನಕಾಯಿ ರುಚಿ ಬೇಕೆಂದು ಬಯಸಿ ಮೈಮರೆತು ಸ್ವಲ್ಪಹೆಚ್ಚು ತಿಂದರೂ ಅದನ್ನು ಸೇವಿಸಿ ಕೆಲಗಂಟೆಗಳಲ್ಲೇ ಮೂತ್ರ ನೋವು, ಉರಿಮೂತ್ರ ಆರಂಭವಾಗಿ ಬಿಡುತ್ತವೆ. ಬೇಸಿಗೆ ಕಾಲದಲ್ಲಿ ನಮ್ಮ ಪಚನಶಕ್ತಿ ಕಡಿಮೆಯಿರುತ್ತದೆ. ಆಗ ಹುಳಿ, ಖಾರದ ಪದಾರ್ಥಗಳನ್ನು ಹೆಚ್ಚಾಗಿ ತಿಂದೆವೆಂದರೆ ಮೂತ್ರದ ತೊಂದರೆ, ಉರಿಮೂತ್ರಗಳು ಕಾಡಲಾರಂಭಿಸುತ್ತವೆ. ಉತ್ತರ ಕರ್ನಾಟಕದಲ್ಲಿ ಪರಂಪರಾಗತವಾಗಿ ಹಸಿಮೆಣಸಿನಕಾಯಿಯನ್ನು ಅಡುಗೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಬಳಸುವುದು ರೂಢಿ. ಅಲ್ಲಿನವರು ಪಿತ್ತದ ಅಂಶ ಅಧಿಕವಾಗಿರುವ ಬೆಂಗಳೂರಿನ ಭೂಪ್ರದೇಶಕ್ಕೆ ಬಂದು ಅದೇ ಪ್ರಮಾಣದಲ್ಲಿ ಹಸಿಮೆಣಸಿನಕಾಯಿ ತಿಂದರೆ ಉರಿಮೂತ್ರ, ಮೂತ್ರ ಸಂಬಂಧೀ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಬದುಕಿನಲ್ಲಿ ತಡೆಯಲೇಬಾರದ ವೇಗಗಳಲ್ಲಿ ಒಂದಾದ ಮೂತ್ರವನ್ನು ತಡೆಹಿಡಿದರೆ ಮೂತ್ರದ ತೊಂದರೆಗಳು ನಿಶ್ಚಿತವಾಗಿ ಹಿಂಬಾಲಿಸುತ್ತವೆ. ಹೀಗೆ ರೋಗಕ್ಕೆ ನೀರೆರೆಯುವ ನಿದಾನ ಅರ್ಥಾತ್ ಕಾರಣಗಳನ್ನೆಲ್ಲಾ ವರ್ಜಿಸುವುದು ರೋಗ ತಡೆಗೆ ಅಪೇಕ್ಷಣೀಯ.
ಮೂತ್ರದ ಬಾಧೆಗಳು ಪ್ರಾರಂಭವಾದಾಗ ಮನೆಯಲ್ಲೇ ವಹಿಸಬೇಕಾದ ಆರೈಕೆಗಳಿಂದ ಅದು ಸರಿಯಾಗದಿದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಪಡೆಯಬಹುದಾದ ಚಿಕಿತ್ಸೆಯನ್ನು ಆಯುರ್ವೆದ ಸಮಗ್ರವಾಗಿ ವಿವರಿಸಿದೆ. ಸ್ವೇದನ, ಮೂತ್ರವಿರೇಚನ, ಆಪಾನ ವಾತಾನುಲೋಮನಗಳೆಂಬ ಮೂರು ಸೂತ್ರಗಳಡಿಯಲ್ಲಿ ಈ ಚಿಕಿತ್ಸೆಯನ್ನು ಪರಿಣಾಮಕಾರಿ ಯಾಗಿ ನೀಡಬಹುದು. ವಾತಜ ಮೂತ್ರಕೃಛ್ರ ದಲ್ಲಿ ತೈಲದಿಂದ ಅಭ್ಯಂಜನ, ಸ್ನೇಹಬಸ್ತಿ, ಉಪನಾಹ, ಉತ್ತರಬಸ್ತಿ, ಸೇಕಗಳಂತಹ ಚಿಕಿತ್ಸೆಗಳು ಪ್ರಯೋಜನಕಾರಿ. ಮಜ್ಜಿಗೆ ಹಾಗೂ ಜೇನುತುಪ್ಪಗಳಿಗೆ ಆಹಾರದಲ್ಲಿ ಆದ್ಯತೆ ನೀಡಬೇಕು. ಪಿತ್ತಜ ಮೂತ್ತಕೃಛ್ರದಲ್ಲಿ ಶೀತಲ ಉಪಚಾರ, ಶೀತಲ ಔಷಧ ಕಷಾಯದಿಂದ ಟಬ್ ಬಾತ್ ಹಾಗೂ ಬೇಸಿಗೆಯಲ್ಲಿ ಅನುಸರಿಸಬೇಕಾದ ಋತುಚರ್ಯುಯ ಅಂಶಗಳು ಸಹಕಾರಿ. ದೇಶೀಆಕಳ ಹಾಲು, ತುಪ್ಪ, ದ್ರಾಕ್ಷಾರಸ, ಕಬ್ಬಿನಹಾಲು ಉಪಯುಕ್ತ. ಕಫಜ ಮೂತ್ರಕೃಛ್ರವಿದ್ದಾಗ ಕ್ಷಾರ ಗುಣದ, ಉಷ್ಣ, ತೀಕ್ಷ್ಣ ಅನ್ನಪಾನ ಹಾಗೂ ಔಷಧಿ ಚಿಕಿತ್ಸೆ ಲಾಭದಾಯಕ. ಬಾರ್ಲಿಗಂಜಿ, ಕಹಿ ಔಷಧದ ತೈಲದಿಂದ ಅಭ್ಯಂಗ ಹಾಗೂ ಅಭ್ಯಂತರ ಸೇವನೆ, ಜೇನುತುಪ್ಪ, ಗೋಮೂತ್ರ, ಮಜ್ಜಿಗೆ ಫಲಕಾರಿ. ತ್ರಿದೋಷಜ ಮೂತ್ರಕೃಛ್ರದಲ್ಲಿ ದೋಷದ ಪ್ರಬಲತೆ ನೋಡಿಕೊಂಡು ಚಿಕಿತ್ಸೆ ನೀಡಬೇಕು. ಬೆಲ್ಲ ಹಾಗೂ ದೇಶೀಗೋವಿನ ಹಾಲು ಸಹಾಯಕ. ಅಭಿಘಾತದಿಂದ ಉಂಟಾಗುವ ಮೂತ್ರಕೃಛ್ರದಲ್ಲಿ ವ್ರಣದ ಚಿಕಿತ್ಸೆಯನ್ನು ಅನುಸರಿಸಬೇಕು. ಮೂತ್ರದೊಂದಿಗೆ ರಕ್ತವೂ ಹೋಗುತ್ತಿದ್ದರೆ ಗರಿಕೆ, ದರ್ಭೆ ಹುಲ್ಲು, ಕಬ್ಬು, ಸೌತೆಕಾಯಿ, ಕಲ್ಲುಸಕ್ಕರೆ, ಹಾಲು, ತುಪ್ಪ, ವಿದಾರಿಗಡ್ಡೆ, ಶತಾವರಿ, ಸೊಗದೆಬೇರು, ಬೂದುಗುಂಬಳಕಾಯಿಗಳು ಉಪಯುಕ್ತ.
ತೀವ್ರ ಮಲಬದ್ಧತೆಯಿಂದಾಗುವ ಮೂತ್ರವೇದನೆಯಲ್ಲಿ ಅಭ್ಯಂಗ, ಬಸ್ತಿ, ಸ್ವೇದನ, ವಿರೇಚನ ಮುಂತಾದ ಚಿಕಿತ್ಸೆಗಳನ್ನು ಹೇಳಲಾಗಿದ್ದು ಸುಲಭವಾಗಿ ಮಲನಿವರ್ಹರಣೆಯ ಉಪಾಯಗಳು ಮೂತ್ರವನ್ನೂ ಸಲೀಸಾಗಿಸುತ್ತವೆ. ಮೂತ್ರಕಲ್ಲಿನಿಂದಾಗುವ ತೊಂದರೆಯಲ್ಲಿ ಸ್ನೇಹನ, ಸ್ವೇದನ, ವಾತಹರ ಚಿಕಿತ್ಸೆಗಳೊಂದಿಗೆ ಪಾಷಾಣಭೇದ, ನೆಗ್ಗಿನಮುಳ್ಳು, ಗೋಮೂತ್ರ, ಬಾಳೆಕಾಯಿ ಗಿಡದ ದಂಡಿನ ರಸ, ಕೊಮ್ಮೆಗಿಡಗಳು ಬಹುಪಯೋಗಿ. ವೀರ್ಯದ ತಡೆಯಿಂದಾಗುವ ಬಾಧೆಯಲ್ಲಿ ಶಿಲಾಜತು ಹಾಗೂ ಜೇನುತುಪ್ಪದ ಬಳಕೆ ಹೇಳಿದ್ದು ಗೋವಿನ ಹಾಲು, ತುಪ್ಪ, ಸಕ್ಕರೆ, ಜೇನುತುಪ್ಪಗಳೂ ಉಪಯುಕ್ತ. ಮೂತ್ರಬಾಧೆಯಿದ್ದಾಗ ಹಳೆಅಕ್ಕಿ, ಸೋರೆಕಾಯಿ, ಹೀರೆಕಾಯಿ, ಪಡುವಲಕಾಯಿ, ಬೂದುಗುಂಬಳಕಾಯಿ, ಬೆಟ್ಟದ ನೆಲ್ಲಿಕಾಯಿ, ಖರಬೂಜ, ಎಳನೀರು, ಆಕಳಹಾಲು, ಮೊಸರು, ಮಜ್ಜಿಗೆ, ತುಪ್ಪ, ಕೊತ್ತಂಬರಿ, ಜೀರಿಗೆ, ಖರ್ಜೂರ, ತಂಗಳಾನ್ನ, ಶೀತಲ ವಿಹಾರಗಳು ಹಿತಕರವಾಗಿದ್ದು ಪಥ್ಯವೆನಿಸುತ್ತವೆ. ಮದ್ಯಪಾನ, ವಿರುದ್ಧಾಹಾರ ಸೇವನೆ, ಉಪ್ಪು, ಹುಳಿ, ಖಾರ ಆಹಾರ, ತಾಂಬೂಲ, ಶುಂಠಿ, ಹಿಂಗು, ಸಾಸಿವೆ, ಉದ್ದು, ಮೀನು, ತೀಕ್ಷ್ಣ, ಒಣ ಹಾಗೂ ಹೊಟ್ಟೆ ಉರಿಸುವ ವಿದಾಹಿ ಅನ್ನ ಪಾನಾದಿಗಳು, ತೀವ್ರ ಶ್ರಮದಾಯಕ ಕೆಲಸ, ದೂರಪ್ರಯಾಣಗಳು ಅಪಥ್ಯಗಳಾಗಿದ್ದು ಅವುಗಳನ್ನು ತ್ಯಜಿಸಿದರೆ ಬಾಳು ಹಸನಾಗುತ್ತದೆ.